ವೈಶಾಲಿ

Updated on: 

ವೈಶಾಲಿ ಕೇವಲ ಗಾಯಕಿಯಾಗಿ ಅಲ್ಲದೆ, ಸಾಂಸ್ಕೃತಿಕ ರಾಯಭಾರಿಯಾಗಿ, ಭಾರತ ಹಾಗೂ ಅಮೆರಿಕದ ವಿವಿಧ ವಿವಿಗಳಲ್ಲಿ ಹಿಂದೂಸ್ತಾನಿ ಸಂಗೀತದ ಹಿರಿಮೆ, ಗರಿಮೆಗಳ ಬಗ್ಗೆ ಅನೇಕ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಸಂಪಾದಿಸಿದ್ದಾರೆ.

ವೃತ್ತಿಯಲ್ಲಿ ಪ್ರಾಧ್ಯಾಪಕಿ. ಪ್ರವೃತ್ತಿಯಲ್ಲಿ ಹಿಂದೂಸ್ತಾನಿ ಗಾಯಕಿ, ವಿಮರ್ಶಕಿ, ಲೇಖಕಿಯಾಗಿರುವ ಬಹುಮುಖ ಪ್ರತಿಭೆ ಡಾ.ಕೆ.ಎಸ್. ವೈಶಾಲಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕವಿ, ಅನುವಾದಕ, ಹಾಗೂ ರಾಜಕಾರಣಿ ಕೆ.ಎಸ್.ಶ್ರೀನಿವಾಸ ಹಾಗೂ ಶಾಲಿನಿ ಅವರ ಪುತ್ರಿ. 'ಬೀಜದಂತೆ ವೃಕ್ಷ, ನೂಲಿನಂತೆ ಸೀರೆ' ಎಂಬಂಥ ವ್ಯಕ್ತಿತ್ವ ವೈಶಾಲಿಯವರದ್ದು.
ಡಾ. ಪುಟ್ಟರಾಜ ಗವಾಯಿಯವರ ಶಿಷ್ಯ ಸಂಗೀತ ದಿಗ್ಗಜ ಆರ್.ವಿ. ಶೇಷಾದ್ರಿ ಗವಾಯಿಯ ಬಳಿ ಸಂಗೀತ ಕುಸುರಿ ಮಾಡಿದ ಇವರು ಹಿಂದೂಸ್ತಾನಿ ಸಂಗೀತದಲ್ಲಿ ಸಾಣೆ ಹಿಡಿದ ವಜ್ರವೇ ಸರಿ.  ಅತ್ಯಂತ ಕಿರಿವಯಸ್ಸಿನಲ್ಲೇ ಸಭಾ ಕಾರ್ಯಕ್ರಮಗಳಲ್ಲಿ ಹಿಂದೂಸ್ತಾನಿ ಗಾಯನವನ್ನು ಪ್ರಸ್ತುತಪಡಿಸಿ, ಈವರೆಗೆ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕೆನಡಾ, ಅಮೆರಿಕ, ಇಂಗ್ಲೆಂಡ್‌ಗಳ ಸಂಗೀತಪ್ರಿಯರೂ ವೈಶಾಲಿಯವರ ಸಂಗೀತಸುಧೆಯನ್ನು ಆಸ್ವಾದಿಸಿದ್ದಾರೆ.
ಇವರ ಸಂಗೀತದ ಸಾಧನೆಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಸಾಕ್ಷಿಯಾಗಿವೆ. ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ನಡೆಸುವ 'ಸಂಗೀತ ವಿಶಾರದ' ಪರೀಕ್ಷೆಯಲ್ಲಿ ವಿಶಿಷ್ಟ ಪ್ರಶಸ್ತಿಯನ್ನೂ, ಕರ್ನಾಟಕ ಸರ್ಕಾರ ನಡೆಸುವ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸಂಗೀತದ ಕಿರಿಯ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿದ್ದಾರೆ.
ವೈಶಾಲಿ ಕೇವಲ ಗಾಯಕಿಯಾಗಿ ಅಲ್ಲದೆ, ಸಾಂಸ್ಕೃತಿಕ ರಾಯಭಾರಿಯಾಗಿ, ಭಾರತ ಹಾಗೂ ಅಮೆರಿಕದ ವಿವಿಧ ವಿವಿಗಳಲ್ಲಿ ಹಿಂದೂಸ್ತಾನಿ ಸಂಗೀತದ ಹಿರಿಮೆ, ಗರಿಮೆಗಳ ಬಗ್ಗೆ ಅನೇಕ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಸಂಪಾದಿಸಿದ್ದಾರೆ. ಅಮೆರಿಕದ ಪತ್ರಿಕೆಗಳು ಇವರ ಉಪನ್ಯಾಸಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿವೆ.  ವೈಶಾಲಿಯವರು ತಮ್ಮ ಹಿಂದೂಸ್ತಾನಿ ಗಾಯನದ ರಾಗಶ್ರೀ, ಪುರಯಾ ಮತ್ತು ಕೀರ್ವಾನಿ ರಾಗಗಳ ಧ್ವನಿಮುದ್ರಿಕೆಗಳನ್ನು ಮತ್ತು 'ಮೂರುತಿಯನೇ ನಿಲ್ಲಿಸೋ', 'ನುಡಿದರೆ ಮುತ್ತಿನ ಹಾರ' ಧ್ವನಿಮುದ್ರಿಕೆಗಳನ್ನು ಲಹರಿ ರೆಕಾರ್ಡಿಂಗ್ ಕಂಪನಿಯ ಮೂಲಕ ಹೊರತಂದಿದ್ದಾರೆ.
ಸಂಗೀತ ವಿಮರ್ಶೆಯಲ್ಲೂ ವೈಶಾಲಿ ಎತ್ತಿದ ಕೈ. ಇವರ ವಿಮರ್ಶೆಗಳು ಪ್ರಸಿದ್ಧ ದೈನಿಕಗಳಾದ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಹಿಂದೂಗಳಲ್ಲಿ ಪ್ರಕಟವಾಗಿವೆ. ಜತೆಗೆ ಸಂಗೀತದ ಕುರಿತಾದ ಇವರ ವಿದ್ವತ್‌ಪೂರ್ಣ ಲೇಖನಗಳು ಅನೇಕ ನಿಯತಕಾಲಿಕೆಗಳು, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು, 'ಪ್ರಿಸನಿಂಗ್ ರಿದಂಸ್‌' ಎಂಬ ಕೃತಿಯನ್ನು ಬೆಂಗಳೂರಿನ 'ಫೋಕಸ್‌' ಮುದ್ರಣಾಲಯದಿಂದ ಪ್ರಕಟಿಸಿದ್ದಾರೆ. ಅನುವಾದದಲ್ಲೂ ಕೈಯಾಡಿಸಿರುವ ಇವರು, ಸುಖಾವತ್ ಹುಸೇನ್ ಅವರ ಕಾದಂಬರಿಯನ್ನು 'ಪದ್ಮರಾಗ' ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಜತೆಗೆ ಮಹಿಳಾ ಪ್ರಧಾನವಾದ 'ಮೆಟಾಮಾರ್ಫಿಕ್‌' ಎಂಬ ಕಾದಂಬರಿಯನ್ನೂ ಬರೆದಿದ್ದಾರೆ.
ಪ್ರಸ್ತುತ ಬೆಂಗಳೂರು ವಿವಿಯ ಇಂಗ್ಲಿಷ್ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ವೈಶಾಲಿ, ಇಂಗ್ಲಿಷ್ ಸಾಹಿತ್ಯಿಕ ಅಧ್ಯಯನದಲ್ಲಿ ಸ್ನಾತಕೋತ್ತರ ಎಂ.ಫಿಲ್ ಹಾಗೂ ಡಾಕ್ಟರೇಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com