

ನಾನು ಹಾಗು ನನ್ನಕ್ಕ ಚಿಕ್ಕವರಿದ್ದಾಗ ಅಮ್ಮನ ಜತೆ ಕುಳಿತು ಧಾರಾವಾಹಿ ನೋಡುತ್ತಿದ್ದೆವು. ಧಾರಾವಾಹಿ ನೋಡದಿದ್ದರೆ ನಿಮಗೆ ನಿದ್ದೆ ಬರೋದಿಲ್ವೇ ಎಂದು ಅಪ್ಪ ಬಯ್ಯುತ್ತಿದ್ದಾಗ, ಅಪ್ಪನಿಗೆ ಅಭಿರುಚಿಯೇ ಇಲ್ಲ ಎಂದು ಒಳಗೊಳಗೆ ಗುನುಗುತ್ತಿದ್ದೆ. ಎಂಟನೇ ತರಗತಿಗೆ ಸೇರಿದ ನಂತರ ಸೀರಿಯಲ್ ಬೋರ್ ಹೊಡೆಯತೊಡಗಿತು. ಅದನ್ನು ವೀಕ್ಷಿಸುವುದನ್ನೇ ಸಂಪೂರ್ಣ ನಿಲ್ಲಿಸಿಬಿಟ್ಟೆ. ಆದರೆ ನನ್ನಕ್ಕನಿಗೆ ಮದುವೆಯಾಗಿ ಎರಡು ಮಕ್ಕಳಾದರೂ ಧಾರಾವಾಹಿ ನಶೆ ಇಳಿಯಲಿಲ್ಲ. ಒಂದು ವ್ಯತ್ಯಾಸವೆಂದರೆ ಈ ಟಿವಿ, ಉದಯ ನೋಡುತ್ತಿದ್ದವಳು ಈಗ ಕಲರ್ಸ್, ಸೋನಿ ನೋಡುತ್ತಿದ್ದಾಳೆ!
ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋದಾಗ ಒಂದು ಕಡೆ ಅಗಲಿಕೆಯ ನೋವಿದ್ದರೂ, ಅಕ್ಕನ ಕಂಪನಿ ಇಲ್ಲದೆ ಅಮ್ಮನಿಗೆ ಧಾರಾವಾಹಿ ನೋಡಲು ಬೇಸರವಾಗಿ, ಕ್ರಮೇಣ ಧಾರಾವಾಹಿ ನೋಡುವ ಅಭ್ಯಾಸವೇ ನಿಲ್ಲಬಹುದೆಂದು ಭಾವಿಸಿದ್ದೆ. ಆದರೆ ಅಕ್ಕ ಮದುವೆಯಾಗಿ ಹೋದ ಬೇಸರವನ್ನು ಅಮ್ಮ ಧಾರಾವಾಹಿ ನೋಡುತ್ತಾ ಮರೆಯತೊಡಗಿದಳು. ಆಗಲೇ ನಾನು ನಿರ್ಧರಿಸಿದ್ದೆ, ನಾನು ಮದುವೆಯಾಗುವ ಹುಡುಗಿಗೆ ಧಾರಾವಾಹಿಯ ಹುಚ್ಚು ಇರಲೇಬಾರದು.
ಮದುವೆ ಬ್ರೋಕರ್ ಮುಖಾಂತರ ಮನೆಗೆ ಬಂದ ಸೌಮ್ಯಾಳ ಫೋಟೋವನ್ನು ಅಮ್ಮ ನನ್ನ ಮುಂದಿಟ್ಟಾಗ 'ಹುಡುಗಿಯೇನೋ ಲಕ್ಷಣವಾಗಿದಾಳೆ. ಆದ್ರೆ ನಾನೊಮ್ಮೆ ಅವಳೊಂದಿಗೆ ಮಾತನಾಡಬೇಕು' ಎಂದೆ. ಸೌಮ್ಯಾ ಹಾಗೂ ನನ್ನ ಮೀಟಿಂಗ್ನಲ್ಲಿ ನಾನವಳನ್ನು ಕೇಳಿದ ಮೊದಲ ಪ್ರಶ್ನೆ ನೀನು ಸೀರಿಯಲ್ ನೋಡ್ತೀಯಾ. ಆಕೆ ಇಲ್ಲ ಅಂದ ಮೇಲಷ್ಟೇ ನಮ್ಮಿಬ್ಬರ ಮದುವೆ ನಿಶ್ಚಯವಾಯ್ತು.
ಮದುವೆ ಆಹ್ವಾನ ಪತ್ರಿಕೆ ಹಂಚುವಾಗ ಸುನಂದತ್ತೆ ಮನೆಗೆ ಹೋದೆ. ಬಾಗಿಲು ಬೀಗವೇ ಹಾಕಿರಲಿಲ್ಲ. 'ಅತ್ತೇ' ಎಂದೆ. 'ಒಳಗೆ ಬಾ, ನಿನ್ ಅಮ್ಮ ಫೋನ್ ಮಾಡಿದ್ಲು' ಎಂದು ಕರೆದರು. ನಾನು ಯಾವಾಗ ಬಂದರೂ ಓಡಿ ಬರುವ ನನ್ನತ್ತೆ, ಈಗ ಒಳಗೆಲ್ಲೋ ಕೂತು ಮಾತನಾಡುತ್ತಿರುವುದು ಆಶ್ಚರ್ಯವಾಯಿತು. ಬಾಗಿಲು ದೂಡಿಕೊಂಡು ಒಳಹೋಗಿ ನೋಡಿದರೆ ಟಿ.ಎನ್. ಸೀತಾರಾಮರು ಕೋರ್ಟ್‌ನಲ್ಲಿ ನಡೆಸುತ್ತಿದ್ದ ವಾದವನ್ನು ಅತ್ತೆ ತಮ್ಮದೇ ಕೇಸ್ ವಿಚಾರಣೆಯೇನೋ ಎಂಬಂತೆ ನೋಡುತ್ತಿದ್ದರು. ನಾನು ಇನ್ನೊಮ್ಮೆ 'ಅತ್ತೆ' ಎಂದೆ. ನನ್ನ ಮುಖವನ್ನೂ ನೋಡದೆ 'ಕುತ್ಕ' ಅಂದ್ರು. ನಾನು ಪೆದ್ದನಂತೆ ತೆಪ್ಪಗೆ ಕುಳಿತೆ. ಹತ್ತು ನಿಮಿಷದ ವಾದ ವಿವಾದದ ನಂತರ ಜಾಹೀರಾತು ಆರಂಭವಾಯಿತು. ಆಗಲೇ ಅತ್ತೆ ಟಿ.ವಿ. ಮ್ಯೂಟ್ ಮಾಡಿ ನನ್ನೆಡೆ ತಿರುಗಿ ಸ್ವಲ್ಪ ಮಾತಾಡಿದ್ದು. ಸೀತಾರಾಮರು ಮಾತು ಮುಂದುವರಿಸಿದರು. ನಾನು ಹೊರಟೆ.
ಮದುವೆ ಚೆನ್ನಾಗಿಯೇ ನಡೆಯಿತು. ಊಟಕ್ಕೆ ಅಮ್ಮನ ಪಕ್ಕ ಕೂತಿದ್ದ ಅಕ್ಕ, ಹೊಸದಾಗಿ ಶುರುವಾಗಿದ್ದ ಹಿಂದಿ ಧಾರಾವಾಹಿಯ ಕಥೆಯನ್ನು ಅಮ್ಮನಿಗೆ ಹೇಳುತ್ತಿದ್ದಳು. ನನ್ನ ಎಂಟು ವರ್ಷದ ಅಳಿಯ ತನ್ನಮ್ಮ ಟಿವಿ ನೋಡುವ ಭರದಲ್ಲಿ ಕುಕ್ಕರ್ ಹತ್ತು ವಿಶಲ್ ಆದರೂ ಆಕೆಯ ಅರಿವಿಗೆ ಬರದೆ ಅನ್ನ ಬುಡ ಹಿಡಿದು ಮನೆಯವರೆಲ್ಲಾ ಊಟಕ್ಕೆ ಹೋಟೆಲ್‌ಗೆ ಹೋಗಿದ್ದು, ಇಸ್ತ್ರಿ ಮಾಡುವಾಗ ಬಾವನ ಪ್ಯಾಂಟ್ ಸುಟ್ಟಿದ್ದು, ಸೀರಿಯಲ್ ಹೀರೋ ಸತ್ತಾಗ ಅತ್ತದ್ದು, ಎಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿದಾಗ ನನ್ನ ಪಕ್ಕದಲ್ಲಿ ಕೂತಿದ್ದ ಸೌಮ್ಯ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಳು.
ಮದುವೆಯಾಗಿ ನಾಲ್ಕು ವಾರ ಕಳೆದಿತ್ತಷ್ಟೆ. ಒಂದು ದಿನ ರಾತ್ರಿ ನನ್ನೊಂದಿಗೆ ಮಾತನಾಡುತ್ತಿದ್ದ ಸೌಮ್ಯಳನ್ನು ಬಾರೇ ಈ ಧಾರಾವಾಹಿ ನೋಡು. 'ಚೆನ್ನಾಗಿದೆ ಕಥೆ' ಎಂದು ಅಮ್ಮ ಕರೆದಳು. 'ನನಗೆ ಧಾರಾವಾಹಿಗಳು ಇಷ್ಟವಾಗಲ್ಲ ಅತ್ತೆ' ಎಂಬ ಸೌಮ್ಯಳ ಉತ್ತರ ನಮ್ಮಮ್ಮನಿಗೆ ನಿರಾಶೆ ತಂದಿತೇನೋ? ನನಗಂತೂ ಯುದ್ಧ ಗೆದ್ದ ಖುಷಿ ಕೊಟ್ಟಿತ್ತು. ಹೀಗೆಯೇ ಕೆಲ ದಿನಗಳು ಕಳೆದ ಮೇಲೆ ಒಂದು ಬೆಳಗ್ಗೆ, ತಿಂಡಿ ತಿನ್ನುವ ಹೊತ್ತಿಗೆ ಅಮ್ಮ, ಹಳ್ಳಿಯ ರಾಜೀವ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ತನ್ನ ಸಂಪಾದನೆಯಲ್ಲಿ ಅರ್ಧ ಭಾಗವನ್ನು ಮನೆಗೆ ಕಳಿಸ್ತಿದ್ನಂತೆ. ಪಾಪ, ಅಕ್ಕನ ಮದುವೆ ಇನ್ನೂ ಆಗಿಲ್ಲ. ತನ್ನ ಕಂಪನಿ ಬಾಸ್ ಮಾಡಿದ ಒಂದು ಕೊಲೆಯ ಆಪಾದನೆ ಇವನ ಮೇಲೆ ಬಂದು, ಪೊಲೀಸರು ಅವನನ್ನು ಅರೆಸ್ಟ್ ಮಾಡ್ತಾರೆ. ಆತನಿಗೆ ಮರಣದಂಡನೆ ಕೊಡಬೇಕು ಅಂತ ವಕೀಲ ವಾದ ಮಾಡ್ತಾನೆ ಎನ್ನುತ್ತಿದ್ದಳು. ಸೌಮ್ಯ ಆಮೇಲೆ ಎಂದು ಭಯದಿಂದ ಪ್ರಶ್ನಿಸಿದಳು.
ಆಮೇಲೆ ನಂಗೇನ್ ಗೊತ್ತು? ಇವತ್ತು ರಾತ್ರಿ ಎಂಟೂವರೆಗೆ ಟಿವಿ ನೋಡಿದ್ರೆ ಗೊತ್ತಾಗತ್ತೆ ಎಂದು ನನ್ನ ಕಡೆ ತಿರುಗಿ ಅಮ್ಮ ವಿಜಯದ ನಗೆ ಬೀರಿದಳು!
ಒಂದು ರಾತ್ರಿ ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ಅತ್ತೆ ಸೊಸೆ ಇಬ್ಬರೂ ಟಿವಿಯೊಳಗೆ ಮುಳುಗಿದ್ದರು. ನನ್ನ 10 ವರ್ಷದ ಮಗ ಕಂಪ್ಯೂಟರ್ ಗೇಮ್ಸ್ ಆಡುತ್ತಿದ್ದ. ನನಗೆ ಒಂದು ಲೋಟ ಬಿಸಿ ಕಾಫಿ ಬೇಕಿತ್ತು. ನನ್ನವಳಿಗೆ ಹೇಳಿದೆ. ಅಮ್ಮನನ್ನೂ ಕೇಳಿದೆ. ಆದರೆ ಯಾರೂ ಸೊಪ್ಪು ಹಾಕಲಿಲ್ಲ. ನನ್ನ ಸಿಟ್ಟು ನೆತ್ತಿಗೇರಿತು. ಟೆರೇಸ್ ಹತ್ತಿ ಟಿವಿ ಕನೆಕ್ಷನ್ ತೆಗೆದು ಕೆಳಗಿಳಿದೆ. ಮನೆ ನಿಶ್ಶಬ್ದವಾಗಿತ್ತು. ಅತ್ತೆ-ಸೊಸೆ ಎಲ್ಲೂ ಕಾಣಲಿಲ್ಲ. 'ಎತ್ಲಾಗೋದ್ರೋ ಎಲ್ಲಾ?' ಎಂದು ಮಗನನ್ನು ಕೇಳಿದೆ. 'ಸೀರಿಯಲ್ ನೋಡಕ್ಕೆ ಪಕ್ಕದ ಮನೆಗೆ ಹೋದ್ರು' ಎಂದಾಗ ನನಗೆ ಅಳು ಬರುವುದೊಂದು ಬಾಕಿ. ಕನೆಕ್ಷನ್ ಸರಿಪಡಿಸಿ ಅವರಿಬ್ಬರನ್ನು ಕರೆತರಲು ಮಗನನ್ನು ಕಳಿಸಿದೆ.
ಈಗ ನಾನು ನನ್ನ ಮನೆಯ ಹೆಂಗಸರೊಂದಿಗೆ ಕುಳಿತು ಧಾರಾವಾಹಿ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದೇನಿ. ನನ್ನ ಮಗನಿಗೂ ಹೋಂ ವರ್ಕ್ ಆದ ಮೇಲೆ ಧಾರಾವಾಹಿ ನೋಡಲು ತಾಕೀತು ಮಾಡಿದ್ದೇನೆ. ಮುಂದೆ ಅವನೂ ನನ್ನ ಥರ ಪೇಚಾಡಬಾರದು ನೋಡಿ!
- ವೃಷಾಂಕ್ ಭಟ್ ನಿವಣೆ
vrushankbhat@gmail.com