ಆಹಾರವನ್ನು ಸಂರಕ್ಷಿಸಲು ಫ್ರಿಡ್ಜ್ವೊಂದೇ ಪರಿಹಾರವಲ್ಲ. ಬೇರೆ ಮಾರ್ಗಗಳೂ ಇವೆ. ಕೆಲವು ಪದಾರ್ಥಗಳು ಬೇಗನೆ ಕೆಡುವುದರಿಂದ ಅವುಗಳ ರಕ್ಷಣೆ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಹಾಗಾದರೆ, ಆಹಾರ ಸಂರಕ್ಷಣೆಗೆ ಬೇರೆ ಮಾರ್ಗಗಳು ಏನೇನು?
ಧಾನ್ಯಗಳನ್ನು ಬಿಸಿಲಿಗೆ ಹಾಕಿ ಅನಂತರ ಗಾಳಿಯಾಡುವ ಡಬ್ಬದಲ್ಲಿಡಿ.
ಅಕ್ಕಿಯನ್ನು ತೊಳೆದು ಒಣಗಿಸಿ (3 ದಿನ). ಅನಂತರ ಅದನ್ನು ಪುಡಿಮಾಡಿ ಇಟ್ಟರೆ ಮನೆಯಲ್ಲೇ ತಯಾರಿಸುವ ಅಕ್ಕಿ ರೊಟ್ಟಿ ರುಚಿಯಾಗಿರುತ್ತದೆ. ಮಳೆಗಾಲಕ್ಕೆ ಮೊದಲು ಈ ರೀತಿ ಪುಡಿಮಾಡಿ ಇಟ್ಟುಕೊಂಡರೆ ಇಡೀ ಮಳೆಗಾಲಕ್ಕೆ ಸಾಕು.
ಕುಮುಟೆ ಮೆಣಸು, ಇತರ ಯಾವುದೇ ತೊಟ್ಟನ್ನು ಹೊಂದಿರುವ ವಸ್ತುಗಳನ್ನು ತೊಟ್ಟು ತೆಗೆದು ಶೇಖರಿಸಬಾರದು.
ತೆಂಗಿನಕಾಯಿ ಕೆಡದಂತೆ ಇಡಬೇಕಾದರೆ ಅದರ ಕಣ್ಣು ಇರುವ ಭಾಗದಲ್ಲಿ ಮುತ್ತು (ಜುಟ್ಟು) ಇಟ್ಟು ಸುಲಿಯಬೇಕು. ಅಂದರೆ ಕಲಶದಲ್ಲಿ ಇಡುವ ಕಾಯಿಯಂತೆ ಇದ್ದರೆ ಅಷ್ಟು ಬೇಗ ಹಾಳಾಗುವುದಿಲ್ಲ. ಖರೀದಿಸುವಾಗ ನೀರಾಡುವ ಕಾಯಿಯನ್ನು ಖರೀದಿಸಿ, ಇಬ್ಭಾಗ ಆದ ತೆಂಗಿನಕಾಯಿಯನ್ನು ಉಪ್ಪಿನ ಭರಣಿಯಲ್ಲಿಟ್ಟರೆ ಹಾಳಾಗುವುದಿಲ್ಲ. ಬಾಲ್ದಿಯಲ್ಲಿ ನೀರು ಹಾಕಿ ಅದರೊಳಗೆ ಹಾಕಿದರೂ ಕೆಡುವುದಿಲ್ಲ ಕಣ್ರಿ.
ಫ್ರಿಡ್ಜ್ನಲ್ಲಿ ಪದಾರ್ಥಗಳನ್ನು ತಣ್ಣಗಾದ ಕೂಡಲೇ ಇಡಬೇಕು. ತಣ್ಣಗಾದ ತುಂಬಾ ಸಮಯದ ಬಳಿಕ ಇಟ್ಟರೆ ಪುನಃ ತೆಗೆದು ಕುದಿಸುವಾಗ ಹಾಳಾಗಿರುತ್ತದೆ.
ಸೌತೆ, ಸಿಹಿ ಕುಂಬಳವನ್ನು ಬಾಳೆದಿಂಡಿನಿಂದ ಒಣಗಿಸಿದ ಹಗ್ಗ ಹಾಕಿ ಬೀಳದಂತೆ ನೇತಾಡಿಸಬಹುದು.
ಬಾಳೆಗೊನೆಯನ್ನು ಆದಷ್ಟು ತೂಗು ಹಾಕಿ ಇಟ್ಟಲ್ಲೇ ಇಟ್ಟರೆ ಕಪ್ಪಾಗಿ ಬಿಡುತ್ತದೆ.
ಸಂಡಿಗೆ, ಹಪ್ಪಳಗಳನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡುವಾಗ ಪ್ಲಾಸ್ಟಿಕ್ನಲ್ಲಿ ಕಟ್ಟಿ ಅನಂತರ ಹಾಕಿದರೆ ಒಳ್ಳೆಯದು.
ಸ್ಟೀಲ್ ಡಬ್ಬದಲ್ಲಿ ಚಿಪ್ಸ್ ಹಾಕುವುದಾದರೆ, ಮೊದಲು ಪ್ಲಾಸ್ಟಿಕ್ನಲ್ಲಿ ಕಟ್ಟಿ ಹಾಕಿ.
ಆದಷ್ಟು ಒಣಗಿರುವ ಚಮಚವನ್ನು ವಸ್ತುಗಳನ್ನು ತುಂಬಿಟ್ಟ ಡಬ್ಬಕ್ಕೆ ಬಳಸಿ.
ಕಹಿ ಬೇವು ಎಲೆ ಹಾಕಿ ಅಕ್ಕಿ ಇತರ ಪದಾರ್ಥಗಳನ್ನು ಶೇಖರಿಸಬಹುದು.