ಸಮಸ್ಯೆಗಳಿವೆ ಎಚ್ಚರಿಕೆ!

ಸಮಸ್ಯೆಗಳಿವೆ ಎಚ್ಚರಿಕೆ!
Updated on: 

ಮತ್ತೊಮ್ಮೆ ವಿಶ್ವ ಮಹಿಳಾ ದಿನ ಮುಗಿದಿದೆ. ಹಳೆಯ ಕನಸುಗಳೆಲ್ಲಾ ದುಃಸ್ವಪ್ನವಾಗಿ ಕಾಡುತ್ತಿರಲು ಹೊಸ ಕನಸುಗಳ ಹೆಣೆಯಲು ಯಾಕೋ ಮನಸ್ಸೇ ಬರುತ್ತಿಲ್ಲ. ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ ಯಾಕೋ   ಮಹಿಳಾ ದಿನ ಅರ್ಥ ಕಳೆದುಕೊಂಡಂತೆ ಅನಿಸುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಯುವುದು ಎಂಬುದೇ ದೊಡ್ಡ ಸಮಸ್ಯೆ. ಮನೆಯಲ್ಲೇ ಆರಂಭವಾಗುವ ಹಿಂಸೆಯನ್ನು ತಡೆಯುವುದು ಹೇಗೆ, ಮನೆಯ ಹೊರಗಾಗುವ ದೌರ್ಜನ್ಯ ತಡೆಯುವುದು ಹೇಗೆ, ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಹೇಗೆ? ಈ ಸಮಸ್ಯೆಗಳ ಪರಿಹಾರದತ್ತ ಒಮ್ಮೆ ಕಣ್ಣು ಹಾಯಿಸೋಣ.

  • ಹೆಣ್ಣು ಮಗುವಿಗೆ ಶಿಕ್ಷಣ ಕಡ್ಡಾಯವಿದ್ದರೂ ಎಷ್ಟೋ ಹೆಣ್ಣು ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ. ಹೆಣ್ಣು ಮಕ್ಕಳಿರುವ ಅನಕ್ಷರಸ್ಥ ತಂದೆ ತಾಯಂದಿರಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಸುವುದು. ಅಕ್ಷರಸ್ಥ ಸ್ತ್ರೀ ಮುಂದೆ ಆತ್ಮವಿಶ್ವಾಸದಿಂದ ಆರೋಗ್ಯಕರ ಕುಟುಂಬಕ್ಕೆ ಕಾರಣಳಾಗುತ್ತಾಳೆ. ತನ್ನ ಮೇಲಾಗುವ ದೌರ್ಜನ್ಯದ ವಿರುದ್ಧ ಹೋರಾಡುವ ಸ್ಥೈರ್ಯ ಬೆಳೆಸಿಕೊಳ್ಳುತ್ತಾಳೆ.
  • ಹೆಣ್ಣು ಭ್ರೂಣ ಹತ್ಯೆಗೆ ನಮ್ಮ ಪುರುಷಪ್ರಧಾನ ಸಮಾಜ ಮತ್ತು ಮೂಢತನ ಕಾರಣ. ಮಗ ದೊಡ್ಡವನಾಗಿ ನಮ್ಮನ್ನು ನೋಡಿಕೊಳ್ಳುತ್ತಾನೆ. ಮಗಳು ಭಾರ, ಅವಳ ಮೇಲೆ ಮಾಡುವ ಖರ್ಚು ವ್ಯರ್ಥ ಎಂಬ ಭಾವನೆಯಿಂದ ನಾವು ಹೊರಬರಬೇಕಾಗಿದೆ.
  • ಜಾಹೀರಾತುಗಳಲ್ಲಿ ಹೆಣ್ಣನ್ನು ಅತಿಯಾಗಿ ಶೋಷಿಸಲಾಗುತ್ತಿದೆ. ಅಶ್ಲೀಲ ಜಾಹೀರಾತುಗಳಿಗೆ ಕಡಿವಾಣ ಹಾಕಲೇಬೇಕು. ಇವು ಯುವ ಮನಸ್ಸುಗಳನ್ನು ಪ್ರಚೋದಿಸುತ್ತವೆ.
  • ಸಿನಿಮಾಗಳಲ್ಲಿ ಅತ್ಯಾಚಾರದ ದೃಶ್ಯ, ಲೈಂಗಿಕ ಕಿರುಕುಳ, ಐಟಮ್ ಸಾಂಗ್ಗಳನ್ನು ನಿಷೇಧಿಸಬೇಕು. ಸಿನಿಮಾ ಹೆಚ್ಚು ದಿನ ಓಡಬೇಕು ಎಂಬ ಉದ್ದೇಶದಿಂದ ನಿರ್ಮಾಪಕರು ಇಂಥ ದೃಶ್ಯಗಳನ್ನು ಅನಗತ್ಯವಾಗಿ ಸೇರಿಸುವುದು ಕೂಡಾ ದೌರ್ಜನ್ಯವೇ.
  • ಮಹಿಳಾ ಸಂಘಟನೆಗಳ ಕಳಕಳಿ, ಚಟುವಟಿಕೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಿ ಅಗತ್ಯವಾದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
  • ಮದ್ಯಪಾನ, ಸಿಗರೇಟು ಸೇದುವುದು, ಸ್ವೇಚ್ಛಾಚಾರ ಇವುಗಳೇ ಸ್ತ್ರೀ ಸ್ವಾತಂತ್ರ್ಯ ಎಂಬ ಭ್ರಮೆಯಿಂದ ಸ್ತ್ರೀಯರು ಹೊರ ಬರಬೇಕು. ಸ್ತ್ರೀ ಸ್ವಾತಂತ್ರ್ಯವೆಂದರೆ ಆಕೆ ತಲೆ ಎತ್ತಿ ಸ್ವಂತಿಕೆಯಿಂದ ಬದುಕುವುದೇ ಹೊರತು ಚಟಗಳನ್ನು ಬೆಳೆಸಿಕೊಳ್ಳುವುದಲ್ಲ.
  • ಯಾವುದೇ ಸಮಾಜವನ್ನು ಏಕಾಏಕಿ ಬದಲಾಯಿಸಲು ಸಾಧ್ಯವಿಲ್ಲ. ಸ್ತ್ರೀ ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳುವ ಬಗ್ಗೆ ಅರಿವು ಹೊಂದಿರಬೇಕು. ಪೊಲೀಸರು ಕೂಡಾ ಈ ನಿಟ್ಟಿನಲ್ಲಿ ಸಹಕರಿಸಬೇಕು.
  • ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಬೇಡ. ಲಿವ್ ಇನ್ ರಿಲೇಶನ್ಶಿಪ್ ಮೇಲ್ನೋಟಕ್ಕೆ ಸ್ತ್ರೀ ಪರ ಅನಿಸಿದರೂ ಇಲ್ಲಿ ಹೆಚ್ಚುಶೋಷಣೆಗೆ ಒಳಗಾಗುವವಳು ಅವಳೇ. ಇದನ್ನು ತಂದೆ-ತಾಯಿ ಕೂಡಾ ಪ್ರೋತ್ಸಾಹಿಸಬಾರದು.
  • ಸ್ತ್ರೀ ಪರ ಕಾನೂನು ಸ್ತ್ರೀಯರ ರಕ್ಷಣೆಯ ಜೊತೆಗೆ ಶೀಘ್ರ ನ್ಯಾಯವನ್ನೂ ಒದಗಿಸುವಂತಾಗಬೇಕು.
- ವೀಣಾ ಅನಂತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com