

ಚತುರ್ಥಿ ಒಂದು ತಿಂಗಳ ರಜೆ ಹಾಕಿ ಹೊರಟಾಗ ಎಲ್ಲರಿಗೂ ಆಶ್ಚರ್ಯ. ಜ್ವರವಿದ್ದಾಗಲೂ ಅವಳು ರಜೆ ಹಾಕಿದ್ದನ್ನು ನಾವು ನೋಡಿರಲಿಲ್ಲ. ನಮಗೆ ತಿಳಿದ ಹಾಗೆ ಅವಳು ನೆಂಟರು, ಇಷ್ಟರು ಅಂತ ಅಂಟಿಸಿಕೊಂಡವಳಲ್ಲ. ಒಬ್ಬಂಟಿ ಹೆಂಗಸು. ಆಗೀಗ ಮದುವೆಯ ವಿಚಾರದಲ್ಲಿ ಹೀನಾಯವಾಗಿ ಮಾತಾಡುತ್ತಿದ್ದಳು. ಆಗೆಲ್ಲ ನಾವುಗಳು ಮುಖ ಮುಖ ನೋಡಿಕೊಂಡು ತೆಪ್ಪಗಾಗುವುದಿತ್ತು. ಅವಳಿಗೆ ಮದುವೆ ಸಂಸಾರದಂಥ ಕಟ್ಟುಪಾಡುಗಳು ಇಷ್ಟವಾಗುತ್ತಿರಲಿಲ್ಲ. ಆದರೂ ಪ್ರತಿ ವರ್ಷ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿದ್ದಳು ಎಂಬುದು ಇಡಿ ಆಫೀಸ್ಗೇ ಗೊತ್ತಿತ್ತು. ಆ ದಿನದ ಅವಳ ಅಲಂಕಾರ ಹಾಗಿರುತ್ತಿತ್ತು. ಆ ಒಂದು ದಿನ ಅರ್ಧಕ್ಕೆ ರಜೆ ತೆಗೆದುಕೊಂಡಳೆಂದರೆ ಆಯ್ತು. ಇಂಥವಳು ತಿಂಗಳು ರಜ ಪಡೆದಳೆಂದರೆ! ಮಧ್ಯಾಹ್ನದ ಲಂಚ್ಗೂ ಹೋಗದೆ ನಾವು ಅವಳ ವಿಷಯ ಮಾತಾಡಿ ದಣಿದೆವು. ಯಾವ ಸುಳಿವೂ ಸಿಗಲಿಲ್ಲ. ಎಲ್ಲರೂ ನನಗೆ ಸುತ್ತಿಕೊಂಡು ನಿನಗೇ ತಾನೇ ಅವಳು ಕ್ಲೋಸ್ ಫ್ರೆಂಡ್. ನಿನಗೆ ಹೇಳಬಹುದು ನೋಡು ಅಂತ ಗಂಟುಬಿದ್ದರು.
ಅವಳು ಹೊರಡುವ ಮುನ್ನ ಫೈಲ್ಗಳನ್ನು ನನ್ನ ಟೇಬಲ್ಗೆ ವರ್ಗಾಯಿಸಿದಳು. 'ಯಾವುದಾದ್ರೂ ಊರಿಗೆ?' ತಡೆಯಲಾರದೆ ಕೇಳಿದೆ. 'ನಿನಗೆ ಆಮೇಲೆ ಫೋನ್ ಮಾಡ್ತೇನೆ ಆಯ್ತಾ' ಎಂದು ಹೊರಟೇಬಿಟ್ಟಳು.
ಮನೆಗೆ ಬಂದು ಅಡುಗೆ ಮುಗಿಸುವಷ್ಟರಲ್ಲಾಗಲೇ ನನ್ನ ಸೆಲ್ಫೋನ್ ಹಾಡಿತು. ಅವಳೇ. 'ಹಲೋ ನೀನು ಫ್ರೀನಾ?' ಅಂದಳು. 'ಹೌದು, ಹೇಳು' ಅಂದೆ. 'ನೀನು ನನ್ನ ಮಾತಿನ ನಡುವೆ ಪ್ರಶ್ನೆ ಕೇಳಬೇಡ ಆಯ್ತಾ... ನಾನೊಂದು ತೀರ್ಮಾನಕ್ಕೆ ಬಂದಿದೀನಿ ಕಣೇ. ಯಾಕೋ ತೀರಾ ಒಂಟಿ ಅಂತ ಅನಿಸೋಕೆ ಶುರುವಾಗಿದೆ. ಆಫೀಸ್ಗೆ ಬರೋದು, ಅಲ್ಲಿ ಕೆಲಸ ಮಾಡೋದು, ಹಸಿದಾಗ ತಿನ್ನೋದು ಎಲ್ಲ ತುಂಬಾ ಬೇಜಾರು. ಶಿಸ್ತಿಲ್ಲದ ಜೀವನ. ನನಗೆ ಅಂತ ಯಾರಿದಾರೆ ಹೇಳು? ಒಂಟಿತನ ಶತ್ರು ಥರ ಕಾಡುತ್ತೆ. ಇತ್ತೀಚೆಗಂತೂ ಸಾಕಾಗಿದೆ. ಸಂಜೆ ಆದ್ರೆ ನೀವೆಲ್ಲ ಮನೆ ಕಡೆ ಓಡೋದು ನೋಡಿ ಈಗೀಗ ಅಸೂಯೆ. ಯಾವುದೋ ಕೆಟ್ಟ ಘಳಿಗೆಯಲ್ಲಿ ತಗೊಂಡ ನಿರ್ಧಾರ ಇಡಿ ಬದುಕನ್ನೇ ಅಲುಗಾಡಿಸಿದೆ ಕಣೇ. ಅದಕ್ಕೇ ಅದಕ್ಕೇ...' ಅವಳು ತಡವರಿಸಿದ್ದು ಕಂಡು ಹೇಳು 'ಏನು ತೀರ್ಮಾನ?' ನಡುವೆ ಕೇಳಿದೆ.
'ಐವತ್ತಾದ್ರೂ... ತಡವಾಗಿದೆ ಆದ್ರೂ ಕಷ್ಟಕ್ಕೆ ಸುಖಕ್ಕೆ ಅಂತ ಒಬ್ಬರು ಜೊತೆಗೆ ಬೇಕು. ಮದುವೆ ಆಗೋಣಾಂತ...' ಅನ್ನುವಾಗ ಅವಳ ದನಿಯಲ್ಲಿ ಮಾರ್ದವತೆ ಮಿಡಿಯಿತು. ಮುಂದುವರಿಸಿದಳು, 'ಮೊದಲೆಲ್ಲ ನನಗೆ ವಿವಾಹದಂಥ ವ್ಯವಸ್ಥೆ ಬಗ್ಗೆ ತಿರಸ್ಕಾರವಿತ್ತು. ನಲವತ್ತು ದಾಟಿತು, ನಲವತ್ತೈದು ಅನ್ನುವಾಗ ವಿಚಿತ್ರ ಏಕಾಂಗಿತನ ಆವರಿಸಿತು ಕಣೆ. ಒಬ್ಬಳೇ ಉಳಿದುಕೊಂಡಾಗ ಏನೋ ಅಪಾಯ ಮಾಡ್ಕೋತೀನೋ ಅನ್ನುವಷ್ಟು ಅಸಹನೀಯ ನೋವು ಗೊತ್ತಾ?'
'ವೆರಿಗುಡ್, ಈಗಲಾದ್ರೂ ಒಳ್ಳೆ ಡಿಸಿಶನ್ ತಗೊಂಡೆ.. ಆತ ಯಾರು ಅಂತ ಕೇಳಬಹುದಾ?' ಅಂದೆ.
'ಅಗತ್ಯವಾಗಿ. ನಾನು ಇಪ್ಪತ್ತು ವರ್ಷದಿಂದ ಲಿವಿಂಗ್ ಟುಗೆದರ್ ಇದ್ದೆ. ಹರ್ಷಲ್ ಅಂತ. ನಮ್ಮದೊಂದು ಮಗು ಊಟಿಲಿ ಬೆಳೀತಾ ಇದೆ. ಈಗ ಅವನಿಗೆ ಹದಿನೈದು.' ಅವಳು ಈ ಮಾತು ಹೇಳಿದ ಮೇಲೆ ಮನಸ್ಸಿಗೇನೋ ಕಿರಿಕಿರಿ ಅನಿಸಿತು. ಬಾಯಿ ತಡೆಯದೆ 'ಏನು ಮಗ ಇದಾನಾ?! ಪಾಪ ಅವನೇನು ಮಾಡಿದ್ದ? ಇದೆಲ್ಲ ಆದ ಮೇಲೆ ತಕ್ಷಣ ಸಂಸಾರದ ಆಲೋಚನೆ ಏಕೆ ಬರಲಿಲ್ಲ?'
'ಹೌದು, ಮದುವೆ, ಅದರಾಚೆಗಿನ ಮನೆ ಚಾಕರಿ, ದಬ್ಬಾಳಿಕೆಯನ್ನು ನಾನು ಸಹಿಸಲಾರೆ. ಇದೆಲ್ಲ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಹಾಗೆ ಅನಿಸಿತ್ತು. ಆಗ ಯಾವ ಬಾಂಡಿಂಗ್ಗೂ ನಾನು ಸಿದ್ಧವಿರಲಿಲ್ಲ. ಕೈಲೊಂದು ಕೆಲಸ, ದುಡ್ಡಿಗೆ ಬರವಿಲ್ಲ. ಹೀಗಿರುವಾಗ ಇನ್ನೆಂಥ ಚಿಂತೆ? ದುಡ್ಡು ಕೊಟ್ಟರೆ ಮಗು ಅಲ್ಲೂ ಚೆನ್ನಾಗಿಯೇ ಬೆಳೆಯುತ್ತೆ ಅಂದುಕೊಂಡುಬಿಟ್ಟೆ. ಹರ್ಷಲ್ ಸಹ ಅದನ್ನೇ ಸರಿ ಅಂದ್ರು. ಜೀವನ ನಮ್ಮ ನಮ್ಮ ಅನುಕೂಲಕ್ಕೆ ಅಂತ ಬಲವಾಗಿ ನಂಬಿಕೊಂಡೆ.'
'ಈಗ ಇದ್ದಕ್ಕಿದ್ದಂತೆ ಈ ಬದಲಾವಣೆಗೆ ಕಾರಣ?'
'ದಿನವೂ ನಿಮ್ಮಗಳ ಸಂಸಾರದ ಒಲವು ನೋಡಿದೆ. ಅದರಲ್ಲೂ ಆಫೀಸ್ ಬಿಟ್ಟ ತಕ್ಷಣ ಮನೆಗೆ ಹೋಗುವ ನಿಮ್ಮ ಆತುರ ಸಾಮಾನ್ಯವಲ್ಲ. ನನಗೆ? ನನಗಾಗಿ ಕಾಯುವವರೇ ಇಲ್ಲ. ಈಗೀಗ ಹರ್ಷಲ್ ಇಷ್ಟ ಬಂದಾಗ ಬರುವುದು ಸಾಮಾನ್ಯವಾಗಿತ್ತು. ಹಿಂದಿನ ಆಕರ್ಷಣೆ ಇಲ್ಲ. ಜಗಳ ಬೈಗುಳಕ್ಕೂ ಇಂಥ ಸಂಬಂಧಗಳಲ್ಲಿ ಭಯವಿರತ್ತೆ ಗೊತ್ತಾ? ನಾಳೆ ಬರದಿದ್ದರೆ ಅಂತ. ನಿಮ್ಮಗಳ ಹಾಗೆ ಕಡ್ಡಾಯದ ಜೀವನವಲ್ಲ. ಏನೂ ಇಲ್ಲದ ಖಾಲಿ ಜೀವನ. ಆಗಲೇ ಹೇಳಿದೆನಲ್ಲ... ನನ್ನ ಶತ್ರುವಿಗೂ ಬೇಡ ಈ ಶಿಕ್ಷೆ.'
'ಸರಿ, ಈಗ ಮದುವೆಗೆ ಹರ್ಷಲ್ ಒಪ್ಪಿದ್ರಾ?'
'ಅವರಿಗೂ ಇದೊಂದು ಮೋಸದ ಜೀವನ ಅನಿಸಿರಬೇಕು. ಹೆಂಡತಿ ಥರ... ಆದರೆ ಹೆಂಡತಿ ಅಲ್ಲ. ಮಗನಿದ್ದರೂ ಮಗನಲ್ಲ. ಭ್ರಮೆಗಳಲ್ಲಿ ನಾವೇ ಹೆಣೆದುಕೊಂಡ ವಿಚಿತ್ರ ದಾರಿ. ಅದಕ್ಕೇ ಎರಡೇ ದಿನದಲ್ಲಿ 'ಹ್ಞೂಂ' ಅಂದ್ರು. ಈಗ ಯಾರು ಏನಾದ್ರೂ ಅಂದುಕೊಳ್ಳಲಿ. ಗಟ್ಟಿ ನೆಲೆಯ ಸಂಸಾರ ಮಾಡಕ್ಕೆ ಹೊರಟಿದೀವಿ ಸರಿನಾ?' ಮಾತು ಮುಗಿಯಿತು. 'ಒಳ್ಳೇದಾಗ್ಲಿ, ಈಗಾದ್ರೂ ಒಳ್ಳೆ ತೀರ್ಮಾನ ತಗೊಂಡ್ಯಲ್ಲ... ಬೆಟರ್ ಲೇಟ್ ದನ್ ನೆವರ್. ನನಗೂ ಖುಷಿಯಾಯ್ತು. ಸದಾ ಜೊತೆಗಿರುವ ಸಂಬಂಧ ಅಂದ್ರೆ ಗಂಡಹೆಂಡತಿಯದು ಅಂತ ಈಗಾದ್ರೂ ಅನಿಸಿತಲ್ಲ ನಿನಗೆ... ವಿಶ್ ಯು ಆಲ್ ದ ಬೆಸ್ಟ್' ಎಂದೆ. ಒಂಥರಾ ನಿರಾಳವೆನಿಸಿತು.
- ಭಾಗ್ಯ ಕೃಷ್ಣಮೂರ್ತಿ