ಹಂಪಿ ಮುಖಿ

ಹಂಪಿ ಮುಖಿ
Updated on: 

ಬದುಕಿನಲ್ಲಿ ಇರುವಂತೆ ಹಂಪಿಗೂ ಎರಡು ಮುಖಗಳು. ತುಂಗಭದ್ರೆಯ ಒಂದು ಬದಿಯಲ್ಲಿ ಯಾತ್ರಾರ್ಥಿಗಳು ಸ್ವರ್ಗವನ್ನು ಅರಸಿದರೆ, ನದಿಯ ಇನ್ನೊಂದು ಬದಿಯಲ್ಲಿ ದುರಾಚಾರದ ದರ್ಶನ. ಮದ್ಯ ಮತ್ತು ನಶಾಪ್ರಿಯರಿಗೆ ಅದೊಂದು 'ಮಿನಿ ಗೋವಾ'.
ಈ ಎಲ್ಲ ಮಿತಿ ಹಾಗೂ ಪ್ರತಿಕೂಲಗಳ ನಡುವೆಯೂ ಹಂಪಿ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿಗೆ ಬರುವ ಪ್ರವಾಸಿಗರು ಯಾರೂ ಹಂಪಿ ಮತ್ತು ತಾಜ್‌ಮಹಲ್ ನಡುವೆ ವ್ಯತ್ಯಾಸ ಕಾಣಬಲ್ಲರೆಂದು ನಾನು ಭಾವಿಸೆನು. ಹಾಗಿದ್ದರೆ ನಾವೇನು ತಪ್ಪು ಮಾಡಿದ್ದೇವೆ? ಯಾಕಾಗಿ ನಮ್ಮನ್ನು ವಿಭಿನ್ನವಾಗಿ ನಡೆಸಿಕೊಳ್ಳಲಾಗುತ್ತಿದೆ? ಇಲ್ಲಿನ ಈ ಕಲ್ಲುಗಳು ಅಕ್ಷರಶಃ ನನ್ನಂತೆಯೇ ಇದ್ದರೂ ನಮ್ಮ ನಡುವೆ ಇಷ್ಟು ವ್ಯತ್ಯಾಸವೇಕೆ? ಇಲ್ಲಿನ ಅವಶೇಷಗಳಿಂದ ಸೌಂದರ್ಯ ಹೊಮ್ಮುವಂತೆ ನನ್ನಲ್ಲೂ ಸೌಂದರ್ಯ ಚಿಮ್ಮಲು ಸಾಧ್ಯವಿದೆ. ಹಾಳು ಹಂಪಿಯ ಕಲ್ಲುಗಳಂತೆ ನಾನೂ ಸಂಪೂರ್ಣ ಛಿದ್ರವಾಗಿದ್ದೇನೆ.
ನಾನು ಹಲವು ಅನಾನುಕೂಲತೆಗಳ ಬಲಿಪಶು. ನಾನು ಬಡ ದಲಿತ ಕುಟುಂಬದಿಂದ ಬಂದ ಅನಕ್ಷರಸ್ಥ ಉಭಯಲಿಂಗಿ. ಎಲ್ಲರಿಂದಲೂ ಕಿರುಕುಳ, ಅಪಮಾನ, ಹೊಡೆತ, ಬೈಗುಳ, ದೌರ್ಜನ್ಯ ಅನುಭವಿಸುತ್ತಿದ್ದೇನೆ. ಇದು ಕೇವಲ ಅಪರಿಚಿತರು ಮತ್ತು ಪರಿಚಿತರು ಮಾತ್ರವಲ್ಲ, ಸ್ನೇಹಿತರು ಹಾಗೂ ಕುಟುಂಬದವರಿಂದಲೂ.
ನನ್ನ ಉದ್ಯೋಗ ಏನೆಂದು ಜನ ಕೇಳುತ್ತಾರೆ. ವಾಣಿಜ್ಯ ಲೈಂಗಿಕ ವೃತ್ತಿ ಅಥವಾ ವೇಶ್ಯಾವಾಟಿಕೆ ಎಂದು ಹೇಳುತ್ತೇನೆ. ಹಲವು ಸಂದರ್ಭಗಳಲ್ಲಿ ಮಾತುಕತೆ ಅಲ್ಲಿಗೇ ಮುಕ್ತಾಯವಾಗುತ್ತದೆ.
ಹುಟ್ಟಿನಿಂದ ನನ್ನ ಹೆಸರು ಚಂದ್ರು. ಸರ್ಜರಿ ಮೂಲಕ ನಾನು ಸುಮಿತ್ರಾ ಆಗಿ ರೂಪಾಂತರಗೊಂಡೆ. ಸರ್ಜರಿ ಕೇವಲ ನನ್ನ ಲಿಂಗವನ್ನು ಮಾತ್ರವಲ್ಲ ನನ್ನ ಬದುಕನ್ನೇ ಬದಲಿಸಿತು. ಇಂದಿನ ಈ ಪಾತ್ರವನ್ನು ವಹಿಸುವ ಮೊದಲು ನಾನು ಸಾರ್ವಜನಿಕ ಸ್ನಾನಗೃಹಗಳು ಮತ್ತಿತರ ಕಡೆ ವಿಲಕ್ಷಣ ಕೆಲಸ ನಿರ್ವಹಿಸುತ್ತಿದ್ದೆ. ಇಲ್ಲಿ ನಾವು ನಿತ್ಯ ಸುಮಂಗಲಿಯರು! ತಾಯಂದಿರಲ್ಲ. ನಮ್ಮನ್ನು ಹಿಜ್ಡಾ, ಖೋಜಾ, ಚಕ್ಕಾ, ಶಿಖಂಡಿ ಅಥವಾ 'ಉಂ ಉಂ' ಎಂಬ ಕೇವಲ ಎರಡು ವರ್ಣಗಳಿಂದ ಕರೆಯಲಾಗುತ್ತದೆ. ಬೀದಿಯಲ್ಲಿ ಒಮ್ಮೆ ಸುಳಿದಾಡಿದರೆ ಸಾಕು ಕಿವಿ ಮುಚ್ಚಿಕೊಳ್ಳುವಂತಾಗುತ್ತದೆ.
ಹಂಪಿಯನ್ನು ನೋಡಿದಾಗ ಯಾರಾದರೂ ನನ್ನನ್ನು 'ಎಂಟನೇ ಅದ್ಭುತ' ಎಂದು ಕರೆಯಬಾರದೇ ಎಂದು ಅನಿಸುತ್ತದೆ. ಯಾಕೆಂದರೆ ಆ ವೈಭವಯುತ ಸಾಮ್ರಾಜ್ಯದ ಅವಶೇಷಗಳಿಗಿಂತ ಹೆಚ್ಚಲ್ಲದಿದ್ದರೂ ಅದರಷ್ಟೇ ನನ್ನಲ್ಲೂ ಸೌಂದರ್ಯವಿದೆ. ಹಂಪಿಯ ವೈಭವ, ಖ್ಯಾತಿಯನ್ನು ಹೊರತುಪಡಿಸಿದರೆ ಅದರಂತೆ ನಾನೂ ಎಲ್ಲ ಕೆಟ್ಟ ಪರಿಸ್ಥಿತಿಯನ್ನೂ ದಾಟಿ ಮುನ್ನುಗ್ಗಿದ್ದೇನೆ. ಜೀವನದ ತಡೆಗಳನ್ನು ಹಿಮ್ಮೆಟ್ಟಿಸಿ ಕೈಲಾದಷ್ಟು ಸಾಧಿಸಿದ್ದೇನೆ.
ನನ್ನ ಲಾವಣ್ಯ ನನ್ನ ಸೌಂದರ್ಯವನ್ನೂ ಮೀರಿದೆ. ಆದರೆ ಕೆಲವೇ ಮಂದಿ ಅದನ್ನು ಗುರುತಿಸುತ್ತಾರೆ. ಯಾಕೆಂದರೆ ಸೌಂದರ್ಯ ನೋಡುಗನ ಕಣ್ಣಲ್ಲಿರುತ್ತದೆ. ಆದರೆ, ಲಾವಣ್ಯ ಹೃದಯದಿಂದ ಉಕ್ಕುತ್ತದೆ.
ನಿಮಗೆ ಹಂಪಿಗೆ ಸ್ವಾಗತ.
ನಾನು ಸುಮಿತ್ರಾ

- ವೆಂಕಟೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com