ಆರತಿ

ಅದೊಂದು ಊರು. ಆ ಊರಲ್ಲಿ ಜನರಿಂದ ಕಳಂಕಕ್ಕೆ ಗುರಿಯಾದ ಮಹಿಳೆಯರ ಗುಂಪೊಂದಿದೆ. ಎಷ್ಟು ವಯಸ್ಸಾದರೂ ಅದೇನು ಅಂತ ಅಂತೀರಾ ಆ ಲಲನೆಯರದ್ದು?...
ಆರತಿ
Updated on: 

ಅದೊಂದು ಊರು. ಆ ಊರಲ್ಲಿ ಜನರಿಂದ ಕಳಂಕಕ್ಕೆ ಗುರಿಯಾದ ಮಹಿಳೆಯರ ಗುಂಪೊಂದಿದೆ. ಎಷ್ಟು ವಯಸ್ಸಾದರೂ ಅದೇನು ಅಂತ ಅಂತೀರಾ ಆ ಲಲನೆಯರದ್ದು? ಇವರು ನಮ್ಮೂರ ಪೇಟೆ ಬೀದಿಯಲ್ಲಿ ಹೆಜ್ಜೆ ಹಾಕಿದರೆ ಅಂಗಡಿಸಾಲಿನ ಗಂಡಸರೂ, ಪಡ್ಡೆ ಹೈಕಳು ಮರೆಯಾಗುವವರೆಗೂ ನೋಡುತ್ತಾರೆ. ಅಂಥಾ ಆಕರ್ಷಣೆ ಅವರದ್ದು.
ಹಾಗಂತ ಇವರು 16-20ರ ಹರೆಯದ ಹುಡುಗಿಯರಲ್ಲ. 35 ತುಂಬಿದವರು. ನ್ಯೂ ಟ್ರೆಂಡ್ ಡಿಸೈನ್ ಸೀರೆ ಉಟ್ಟು ತರಾವರಿ ಶೈಲಿಯ ರವಿಕೆ ತೊಟ್ಟು ನಿತ್ಯವೂ ಆಭರಣ ಭೂಷಿತರಾಗಿ, ಕೈತುಂಬಾ ಬಳೆ ತೊಟ್ಟು ಮುಂಗುರುಳು ಬಿಟ್ಟು, ತುರುಬು, ಜಡೆ ಹಾಕಿ, ಮುಡಿ ತುಂಬಾ ಹೂ ಮುಡಿದು ಪೇಟೆ ಬೀದಿಯಲ್ಲಿ ನಡೆದರೆಂದರೆ ವಸಂತ ಮಾಸದ ತಾಜಾ ಸೌಂದರ್ಯ ಹಾದು ಹೋದಂತಾಗುತ್ತದೆ.
ಇವರ ಬಳುಕಿ ಬಾಗುವ ನಡೆ ನೋಡಿ ಟೀ ಕುಡಿಯುತ್ತಾ ಕುಳಿತ ಗಿರಾಕಿಗಳು ಅದೆಷ್ಟು ಬಾರಿ ಶರ್ಟ್ ಮೇಲೆ ಚೆಲ್ಲಿಕೊಂಡಿದ್ದಾರೋ. ಬೀಡಿ ಸಿಗರೇಟ್ ಸೇದುತ್ತಾ ಬೆರಳು ಸುಟ್ಟುಕೊಂಡಿದ್ದಾರೆ. ಗುಟುಕರಿಸಲು ಪ್ರಯತ್ನಿಸಿ ಅಂಗೈಯಿಂದ ನೆಲಕ್ಕೆ ಚೆಲ್ಲಿದ್ದಾರೆ. ತರಾತುರಿಯಲ್ಲಿ ಎಲ್ಲಿಗೋ ಹೊರಟ ಗಂಡಸರು ಈ ಆಂಟಿಯರನ್ನು ಕಂಡೊಡನೆ ಸರಕ್ಕನೆ ಬ್ರೇಕ್ ಹಾಕಿ ಯಾರನ್ನೋ ನೆಪ ಮಾತ್ರಕ್ಕೆ ಮಾತನಾಡಿಸುತ್ತಾ ಓರೆಗಣ್ಣಲ್ಲಿ ನೋಡಿ ಮರೆಯಾದ ಮೇಲೆ ಹೊರಡುತ್ತಾರೆ.
ಗಂಟೆಗಟ್ಟಲೆ ಅವರ ಪಾರಾಯಣವನ್ನೇ ಮಾಡುವ ಗಂಡಸರಿಗೆ ತಮ್ಮ ಹೆಂಡತಿ, ಮಗಳು ಆ ಹೆಂಗಸರೊಟ್ಟಿಗೆ ಮಾತನಾಡಬಾರದು. ಮಾತು ಮೀರಿ ಪೆಟ್ಟಿನ ರುಚಿ ಕಂಡವರೂ ಇದ್ದಾರೆ. ಅಷ್ಟೇ ಅಲ್ಲ, ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಇವರೊಟ್ಟಿಗೆ ಮಾತನಾಡಿದ ಗಂಡಸರನ್ನು ಹೆಂಡಂದಿರೇ ತರಾಟೆಗೆ ತೆಗೆದುಕೊಂಡ ಉದಾಹರಣೆಗಳೂ ಇವೆ.
ಜನ ಯಾಕೆ ಇವರನ್ನು ಇಷ್ಟು ನಿಕೃಷ್ಟವಾಗಿ ನೋಡುತ್ತಾರೆ? ದೌರ್ಭಾಗ್ಯವೆಂದರೆ ಅಂಥವರ ಮಕ್ಕಳೂ ಇದೇ ರೀತಿ ಅವಮಾನಕ್ಕೆ ಗುರಿಯಾಗುತ್ತಾರೆ. ಇದು ಬರೀ ನನ್ನೂರಿನ ಕತೆಯಲ್ಲ. ಪ್ರತಿ ಊರಿನಲ್ಲೂ ಇದ್ದದ್ದೇ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡೋ, ಗಂಡನ ದುರ್ನಡತೆಗೆ, ಮನೆಯ ಕಿರಿಕಿರಿ ತಾಳಲಾಗದೆ ಒಂಟಿ ಬಾಳನ್ನು ಒಪ್ಪಿಕೊಂಡ ಹೆಣ್ಣು ತನ್ನ ಬಾಳಿಗೆ ಆಸರೆಯಾಗಿರಲಿ ಎಂದೊ, ವಯೋಸಹಜ ಆಸೆ ಆಕಾಂಕ್ಷೆಗಳಿಂದಲೋ ಇಂಥ ವೃತ್ತಿಯಲ್ಲಿ ತೊಡಗಿರಬಹುದು.
ಆದರೆ ಅದೇ ಹೆಂಗಸರಿಂದ ಹಣಕಾಸಿನ ಸಹಾಯ ಪಡೆವ ಹೆಂಗಸರು ಬೈದುಕೊಳ್ಳುವುದೇಕೆ? ಆಕೆಯೊಂದಿಗೆ ಸುಖ ಭೋಗದಲ್ಲಿ ತೇಲಿದಾತ ಗಂಡಸರ ಗುಂಪಲ್ಲಿ ಅವಳ ಪರಿಚಯವೇ ಇಲ್ಲವೆಂಬಂತೆ ಆಡಿಕೊಂಡು ನಗುವುದೇಕೆ? ಇವರ ಬಗ್ಗೆ ಕೇವಲವಾಗಿ ಮಾತನಾಡುವುದೇಕೆ? ತನ್ನ ಸಂಸಾರ ನೌಕೆ ದಾರಿ ತಪ್ಪಲು ಏನು ಕಾರಣ ಎಂದು ಹುಡುಕದೆ ಹೆಂಗಸರ ಗುಂಪು ಕಟ್ಟಿಕೊಂಡು ಆಕೆಯ ಜುಟ್ಟು ಹಿಡಿದು ಎಳೆದು ಥಳಿಸಿ ಹೀನಾಯ ಮಾತುಗಳಿಂದ ನಿಂದಿಸುವುದು ಅಮಾನವೀಯವಲ್ಲವೆ?
ಸಮಾಜದ ಕಾಮಾಲೆ ಕಣ್ಣುಗಳು ಹೆಣ್ಣನ್ನು ಈ ಅವಸ್ಥೆಗೆ ದೂಡಿರಬಹುದು ಎಂದು ಹಲವು ಕಾದಂಬರಿ ಸಿನಿಮಾಗಳು ತೋರಿಸಿಕೊಟ್ಟಿವೆ. ಅಲ್ಲಿ ಓದುವಾಗ ಮರುಗುತ್ತೇವೆ, ಸಿನಿಮಾ ನೋಡುತ್ತಾ ಕಣ್ಣೀರು ಹಾಕುತ್ತೇವೆ. ಒಳ್ಳೆ ಕಲಾವಿದೆ, ವೇಶ್ಯೆ ಪಾತ್ರವನ್ನು ಎಷ್ಟು ಮನೋಜ್ಞವಾಗಿ ಅಭಿನಯಿಸಿದಳು. ಅವರ ಕಷ್ಟ, ನೋವಿನ ಭಾವನೆಗಳಿಗೆ ಜೀವ ತುಂಬಿದಳು ಎಂದು ಚಪ್ಪಾಳೆ ತಟ್ಟುತ್ತೇವೆ. ಮಾಧ್ಯಮ, ಕತೆ ಕಾದಂಬರಿಗಳಲ್ಲಿ ವೇಶ್ಯೆಗೆ ನೀಡುವಷ್ಟು ಕಾಳಜಿಯಲ್ಲಿ ಸಾಸಿವೆ ಕಾಳಷ್ಟೂ ಬೆಲೆಯನ್ನು, ಮರುಕವನ್ನು ವಾಸ್ತವದಲ್ಲಿ ನೀಡುವುದಿಲ್ಲ.
ಲೈಂಗಿಕತೆ ದೇಹಕ್ಕೆ ಅನ್ನ ಆಹಾರಾದಿಗಳಷ್ಟೇ ಮುಖ್ಯ. ಅದನ್ನು ಒಂಟಿತನದಲ್ಲಿ ಒಲಿದು ಬಂದವರಿಂದ ಇವರು ಪಡೆದಿದ್ದಾರೆ. ಆ ಕೆಲಸ ಅವಳ ಆರ್ಥಿಕ ಮೂಲಾಧಾರವೂ ಆಗಿರಬಹುದು ಅಥವಾ ಅವಳಿಗೆ ಅನಿವಾರ್ಯವೂ ಆಗಿರಬಹುದು. ಅಂದಮಾತ್ರಕ್ಕೆ ಈ ಮಹಿಳೆಯರು ಕೆಟ್ಟವರಾಗುತ್ತಾರಾ?
ಈ ಮಹಿಳೆಯರನ್ನು ಒಮ್ಮೆ ಮಾತನಾಡಿಸಿ ನೋಡಿ. ಬಿರುಸು ಮಾತಿನಿಂದಲೇ ಪ್ರಾರಂಭಿಸುತ್ತಾರೆ. ಸ್ವಲ್ಪ ಮಾತಲ್ಲಿ ಮುಳುಗಿದರೆ ಅವರ ಜೀವನದ ದಾರುಣ ಕತೆಗಳು ಹೊರಬರುತ್ತವೆ.
ಅದೇನೇ ಇರಲಿ, ಇವರಿಗೂ ಮಾತೃ ಹೃದಯ ಇರುತ್ತದೆ. ಇವರೂ ನಮ್ಮಂತೆಯೆ ಮನುಷ್ಯರು. ಇವರಿಗೆ ಗೌರವ ಕೊಡದಿದ್ದರೂ ಚಿಂತೆ ಇಲ್ಲ, ಸಿಕ್ಕಸಿಕ್ಕಲ್ಲಿ ಅವಮಾನಿಸಿ ಆಡಿಕೊಂಡು ನಗುವ, ಛೇಡಿಸಿ ಮನ ನೋಯಿಸುವ ಪ್ರವೃತ್ತಿಯನ್ನಾದರೂ ಬದಲಿಸಿಕೊಂಡರೆ ಅದೇ ಅವರಿಗೆ ಕೊಡುವ ಗೌರವ.

- ಶಿಲ್ಪಶ್ರೀ ಯು. ತಾವರೆಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com