

ಬಣ್ಣ ಬಣ್ಣದ ಗೂಡು!
ಇದು ಎಲ್ಲರ ಮನದೊಳಗೂ ಹರಡಿದ ಕನಸು. ಆದರೆ, ಕೈಗೂಡುವುದು ಮಾತ್ರ ಕೆಲವರಿಗೆ. ದುಬಾರಿ ದುನಿಯಾದಲ್ಲಿ ಎಲ್ಲರೂ ಮನೆ ನಿರ್ಮಿಸುವುದು ಅಸಾಧ್ಯ. ಹಾಗಂತ ಮನೆ ಕಟ್ಟುವ ಕನಸು ಕಾಣಬಾರದೆಂದೇನಲ್ಲ. ಸುಂದರವಾದ ಮನೆ ಕಟ್ಟಲು ಹಣವನ್ನೆಲ್ಲಾ ಒಟ್ಟುಗೂಡಿಸಿ ಸಾಲ ಸೋಲ ಮಾಡಿ ಮನೆ ಕಟ್ಟುತ್ತಾರೆ. ಅದಕ್ಕೆ ಬೇಕಾದ ಎಲ್ಲ ಪೂರಕ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತಾರೆ. ಆದರೆ, ಅದರ ಅಂದ ಹೆಚ್ಚಿಸುವ, ಕಳೆಗಟ್ಟುವ ಬಣ್ಣದ ವಿಷಯದಲ್ಲಿ ಮಾತ್ರ ಎಡವುತ್ತಾರೆ.
ಹೌದು. ಕೇವಲ ಇಟ್ಟಿಗೆ, ಸಿಮೆಂಟ್, ಕಬ್ಬಿಣದಿಂದ ನಿರ್ಮಿಸಿದರೆ ಮನೆ ನಿರ್ಮಿಸುವ ಕೆಲಸ ಮುಗಿಯಿತು ಎಂದು ಕೊಳ್ಳುವಂತಿಲ್ಲ. ಮನೆಯ ರೂಪಕ್ಕೆ ಬಣ್ಣದ ಲೇಪನ ಕೊಟ್ಟಾಗಲೇ ಅದಕ್ಕೊಂದು ಕಳೆ. ಇಲ್ಲದಿದ್ದರೆ ಕೆಲಸ ಅಪೂರ್ಣ. ಯಾವ್ಯಾವುದೋ ಬಣ್ಣ ಬಳಿದರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ. ಹೀಗಾಗಿ ಯಾವ ಬಣ್ಣ ಬಳಿದರೆ ಒಳಿತು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಹಳದಿ
ಇದು 'ಗುರಿ'ಯ ಸಂಕೇತ. ತೀರಾ ಗಾಢವಾದ ಹಳದಿ ಬಣ್ಣ ಬಳಸಿದರೆ ಕಿರಿಕಿರಿ ಎನಿಸುತ್ತದೆ. ಹೀಗಾಗಿ ತಿಳಿ ಹಳದಿ ಬಣ್ಣ ಬಳಸಿ. ಮಲಗುವ ಕೋಣೆ ಅಥವಾ ಹಾಲ್ಗಳಲ್ಲಿ ಬಳಸುವುದರಿಂದ ನಿಮ್ಮ ಮನೋಬಲ ವೃದ್ಧಿಸುತ್ತದೆ. ಜತೆಗೆ ಮನಸ್ಸೂ ಆಹ್ಲಾದಕರವಾಗಿರುತ್ತದೆ. ಎದ್ದ ತಕ್ಷಣ ತಿಳಿ ಹಳದಿ ಬಣ್ಣ ನೋಡುವ ಮೂಲಕ ದಿನ ಆರಂಭವಾದರೆ ಎಡವಟ್ಟು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಇದೆ.
ನೀಲಿ
ಇದು ಎಲ್ಲರ ಅಚ್ಚುಮೆಚ್ಚಿನ ಬಣ್ಣ. ಅದರಲ್ಲೂ ಮನೆಯ ಅಲಂಕಾರ ಮಾಡುವವರಿಗೆ ಇದರ ನಂಟು ಜಾಸ್ತಿ. ಗಾಢ ನೀಲಿ ಬಣ್ಣದ ಬದಲು ತಿಳಿ ನೀಲಿ ಇದ್ದರೆ ಆಕರ್ಷಕ. ಮನೆಯ ಒಳಾಂಗಣ ವಿನ್ಯಾಸಕ್ಕೆ ಇದಕ್ಕೆ ಆದ್ಯತೆ ನೀಡಿ. ಇದು ನಿಮ್ಮಲ್ಲಿರುವ ಅವಿವೇಕತನ ದೂರವಾಗಿಸಲು ಇದು ಸಹಾಯಕ. ಅಲ್ಲದೆ, ಶಾಂತ ಮನಃಸ್ಥಿತಿಗೂ ಪೂರಕ.
ತಿಳಿ ಹಸಿರು
ಗಾಢ ಹಸಿರು ಕಂಡರೆ ಕೋಮುಭಾವನೆ ಕೆರಳುವ ಕಾಲವಿದು. ಇದರ ಸಹವಾಸವೇಕೆ ಎಂದು ಮೂಗು ಮುರಿಯಬೇಡಿ. ತಿಳಿ ಹಸಿರು ಬಣ್ಣ ಇನ್ನೊಬ್ಬರ ಮಾತಿಗೆ ಕಿವಿಯಾಗುವ, ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡುವ ಹಾಗೂ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರ ಸಂಕೇತ. ಹೀಗಾಗಿ ಡೈನಿಂಗ್ ಹಾಲ್ ಹಾಗೂ ಕುರ್ಚಿಗಳಿಗೆ ತಿಳಿ ಹಸಿರು ಬಣ್ಣ ಬಳಸಿ. ಇದರಿಂದ ನಿಮ್ಮ ವ್ಯಕ್ತಿತ್ವವೇ ಬದಲಾಗುತ್ತದೆ.
ಗುಲಾಬಿ
ಎರಡು ಮನಸ್ಸುಗಳನ್ನು ಬೆಸೆಯುವ, ಪ್ರೀತಿ ನಿವೇದನೆ ಜತೆಗೆ ಮನಸುಗಳ ಪಿಸುಮಾತಿಗೆ ಜೀವ ತುಂಬುವ ವಿಶಿಷ್ಟ ಬಣ್ಣ. ಗುಲಾಬಿ ಬಣ್ಣ ಗಾಢವಾಗಿದ್ದರೂ ಮನೆಗೆ ಬಳಸುವಾಗ ಸ್ವಲ್ಪ ತಿಳಿಯಾಗಿರಲಿ. ಇಲ್ಲದಿದ್ದರೆ ಪ್ರೀತಿ ಕೈಕೊಡುವ ಕಾಲ ಬಂದರೂ ಆಶ್ಚರ್ಯವಿಲ್ಲ. ಮಲಗುವ ಕೋಣೆ, ಹಾಲ್ಗಳಲ್ಲಿ ಗುಲಾಬಿ ಬಣ್ಣ ಬಳಸಿದರೆ ಅತಿಥಿಗಳ ಮನದಲ್ಲಿ ಪುಳಕ ಉಂಟಾಗುತ್ತದೆ ಎಂಬುದನ್ನು ಮರೆಯಬೇಡಿ!
ಕಪ್ಪು
ಅಪಶಕುನ ಎಂದು ಹೀಯಾಳಿಸಬೇಡಿ. ಆಕಳು ಕಪ್ಪಾದರೆ ಹಾಲು ಮಾತ್ರ ಬೆಳ್ಳಗಿರುತ್ತದೆ ಎಂಬುದು ನೆನಪಿರಲಿ. ಇದು ಧೈರ್ಯದ ಸಂಕೇತ. ಕಡುಗಪ್ಪು ಬಳಸಿದರೆ ಕೊಂಚ ಇರುಮುರುಸಾಗುವುದು ಸಹಜ. ಆದ್ದರಿಂದ ಸಾಧ್ಯವಾದಷ್ಟು ತಿಳಿ ಕಪ್ಪು ಬಳಸಿ. ಇದರಿಂದ ನೋಡಲು ಸುಂದರವಾಗಿರುತ್ತದೆ.
ಕಡು ಹಸಿರು
ಇದು ಎಲ್ಲ ವಿಷಯಗಳಿಗೂ 'ಹಸಿರು ನಿಶಾನೆ' ತೋರುವುದರ ಸಂಕೇತ. ಪ್ರೀತಿಯಿಂದ ಹಿಡಿದು ರೈಲು ಹೊರಡಲು ಅನುಮತಿ ನೀಡಲು ಬಳಸುವ ಬಣ್ಣ. ಇದನ್ನು ಮನೆಯ ಅಂದಕ್ಕೂ ಬಳಸಬಹುದು. ಕಡು ಹಸಿರು ಬಳಸುವುದರಿಂದ ನಿಮ್ಮ ಮನಸ್ಸು ಸಕಾರಾತ್ಮಕ ಚಿಂತನೆಗೆ ಒಗ್ಗಿಕೊಳ್ಳುತ್ತದೆ ಎಂಬುದು ಪ್ರತೀತಿ.ಟಿ
ಎಲೆಕ್ಟ್ರಿಕ್ ಬ್ಲ್ಯೂ
ಈ ಬಣ್ಣ ಕ್ರಿಯಾಶೀಲ ಬದುಕಿನ ಸಂಕೇತ. ರೂಮ್, ಹಾಲ್ ಅಥವಾ ಮನೆಯ ಆರಂಭ ಭಾಗದಲ್ಲಿ ಈ ಬಣ್ಣ ಬಳಸುವುದರಿಂದ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬದ ದರ್ಶನವಾಗುತ್ತದೆ. ಬದುಕು ಬಲಯುತ ಹಾಗೂ ಚೈತನ್ಯಮಯವಾಗಿರಲು ಎಲೆಕ್ಟ್ರಿಕ್ ಬ್ಲ್ಯೂ ಪೂರಕವಾಗಿರುತ್ತದೆ.
- ಅಶ್ವಿನಿ ಮೂಲಿಮನಿ