

ಎಪ್ಪತ್ತು ವರುಷದ ಜಾನಪದ ಹಾಡುಗಾರ್ತಿ ರುಕ್ಮಿಣಿ ಹರನಾಳ ಅವರಿಗೆ ಸುಮ್ಮನೆ ಕೂರಲು ಮನಸ್ಸಿಲ್ಲ. ಮಾತಿಗೊಂದು ಜಾನಪದ ಹಾಡು ಹಾಡ್ತಾರೆ. 'ರಾತ್ರಿ ನಿದ್ದೆ ಬರುವಲ್ದು, ಹಾಡುಗಳು ತಲೆಯಲ್ಲಿ ಗಿರಕಿ ಹೊಡಿತಾವ, ಹೊಟ್ಟಿಯೊಳಗ ಹಾಡು ಇಟ್ಕೊಂಡು ಭಾಳ ತ್ರಾಸ ಆಕೇತ್ರೀ. ಎಲ್ಲಿ ಹಾಡ್ಲರೀ?' ಎಂದು ತಮ್ಮ ಒಡಲಲ್ಲಿರುವ ಅಗಾಧ ಜನಪದ ಸಂಪತ್ತನ್ನು ಹೊರಹಾಕುತ್ತಾರೆ ಅವರು.
ಮುಂದಿನ ಪೀಳಿಗೆಗೂ ಈ ಹಾಡನ್ನು ತಿಳಿಸುವ ತುಡಿತ ಅವರಲ್ಲಿ. ಆದರೆ ಓದು, ಬರಹ ಬಾರದು. ಮೂಲತಃ ಜಮಖಂಡಿಯ ಹುಸ್ಕೂರಿನವರಾದ ಇವರು, ಶಾಲೆ ಮುಖ ನೋಡಿದ್ದು ಒಂದೇ ದಿನ! ಚಿಕ್ಕಂದಿನಲ್ಲಿ ದನ ಮೇಯ್ಸಿಕೊಂಡು ಪಕ್ಕದ ಮನೆ ಅಜ್ಜಿಯಿಂದ ಹಾಡು ಕಲಿತಿದ್ದಾರೆ. ಈಗ ಅವರೇ ಸ್ವತಃ ಹಾಡನ್ನು ರಚಿಸಿ ಹಾಡುತ್ತಾರೆ!
ಜನಪದ ಸಂಸ್ಕೃತಿ ಬಿಂಬಿಸುವ ಸುಮಾರು 100ಕ್ಕೂ ಹೆಚ್ಚು ಹಾಡುಗಳು ಅವರ ಬಾಯಲ್ಲಿವೆ. 130 ನುಡಿಗಳ ಒಂದು ಹಾಡನ್ನು ನಿರರ್ಗಳವಾಗಿ ಹಾಡಿ ಅಚ್ಚರಿ ಮೂಡಿಸುತ್ತಾರೆ. ಎಲ್ಲ ಹಾಡುಗಳ ಪ್ರತಿ ಸಾಲೂ ಇವರಿಗೆ ಬಾಯಿಪಾಠ. ಅವರ ಕಂಠಸಿರಿಯಲ್ಲಿ ಜನಪದ ಹಾಡು ಕೇಳುವುದೇ ಒಂದು ಸೊಗಸು. ಇವರು ಹಾಡದ ವಿಷಯಗಳೇ ಇಲ್ಲ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ, ಪತಿ ಪತ್ನಿ, ತಂದೆ ಮಗ, ಹೆಣ್ಣು ಜನ್ಮ, ಬಸಿರು ಬಯಕೆ, ಸಾವು ನೋವು, ಬಾಣಂತಿತನ, ಬಂಜೆತನ... ಹೀಗೆಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತದೆ. ಕುಟ್ಟುವ, ಬೀಸುವ, ಹಂತಿ ಹೊಡೆಯುವ, ಸೋಬಾನೆ, ಹಚ್ಚೆ ಹೊಯ್ಯುವಾಗ, ಮಗು ಮಲಗಿಸುವಾಗ ಯಾವ ಕೆಲಸವೇ ಆಗಲಿ ಹಾಡು ಕಲಿತರೆ ಸರಾಗವಾಗಿ ಆಗುತ್ತದೆ ಎನ್ನುತ್ತಾರೆ ರುಕ್ಮಿಣಿ ಹರನಾಳ.
ಬಿತ್ತನೆ ಮಾಡುವಾಗ, ಕೂರಿಗೆ ಹೊಡೆಯುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ, ಬೆಳೆ ಕೊಯ್ಯುವಾಗ, ಕಾಳು ಒಕ್ಕುವಾಗ, ಮಣ್ಣು ಹೊರುವಾಗ, ಗಾಡಿ ಹೊಡೆಯುವಾಗ ಹಾಡು ಹರಿಯಲೇಬೇಕು. ಹಬ್ಬ ಹರಿದಿನ, ಯಾವುದೇ ಶುಭಕಾರ್ಯ, ಶಾಸ್ತ್ರವೇ ಆಗಲೀ ಹಾಡಿನಿಂದಲೇ ಮೊದಲಾಗಬೇಕು. ಹಾಡಿನಿಂದಲೇ ಅಂತ್ಯವಾಗಬೇಕು. ಹಳ್ಳಿಗರ ಆಸರು ಬೇಸರುಗಳಿಗೆ ಇವೇ ಮದ್ದು ಎಂದು ತಮ್ಮ ಹಳ್ಳಿಯ ಜೀವನವನ್ನು ಮೆಲಕುಹಾಕುತ್ತಾರೆ ರುಕ್ಮಿಣಿ ಹರನಾಳ.
ಗೌರವದ ಗರಿ
ಇವರ ಹಾಡುಗಾರಿಕೆಗೆ ಸಂಘ-ಸಂಸ್ಥೆಗಳ ಸಾಕಷ್ಟು ಪ್ರಶಸ್ತಿಗಳು ದಕ್ಕಿವೆ. ರಾಜೀವ್ಗಾಂಧಿ ಪ್ರತಿಭಾ ಪುರಸ್ಕಾರ, ರಂಗಪ್ರಪಂಚ ಪ್ರಶಸ್ತಿ, ಡಾ. ರಾಜ್ಕುಮಾರ್ ಸುವರ್ಣರತ್ನ, ರಾಜ್ಕುಮಾರ್ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ.
ತಾರಸಿಯಲ್ಲಿ ತರಕಾರಿ ತೋಟ!
ಹರನಾಳ ಅವರು ಬೆಂಗಳೂರಿನ ರಾಜಾಜಿನಗರದ ಬಾಡಿಗೆ ಮನೆಯ ತಾರಸಿಯಲ್ಲಿ ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ಶೇಂಗಾ, ಅವರೆಕಾಯಿ, ಜೋಳ ಮುಂತಾದ ತರಕಾರಿಗಳನ್ನೆಲ್ಲ ಈ ಎಪ್ಪತ್ತರ ಇಳಿ ವಯಸ್ಸಿನಲ್ಲೂ ಬೆಳೆದು ಅಚ್ಚರಿ ಮೂಡಿಸಿದ್ದಾರೆ. 13 ವರ್ಷಗಳಿಂದ ಯಾರ ಸಹಾಯವಿಲ್ಲದೆ, ತುಂಬಾ ಕಷ್ಟದಿಂದ ಜೀವನ ನಡೆಸುತ್ತಿರುವ ರುಕ್ಮಿಣಿ ಹರನಾಳ (9986982611), 'ಸದ್ಯ ನನಗೆ ಕೇಂದ್ರ ಸರಕಾರ ಕೊಡುವ ಕಲಾವಿದರ ಮಾಸಾಶನ ಸಿಕ್ಕಿದರೆ ಸಾಕು' ಎಂದು ಹತಾಶೆಯಿಂದ ನುಡಿಯುತ್ತಾರೆ. ಜಾನಪದ ಕಲೆಯನ್ನು ಕೇವಲ ವೈಭವೀಕರಿಸಿದರೆ ಸಾಲದು, ಜಾನಪದ ಕಲಾವಿದರನ್ನು ಪೋಷಿಸಬೇಕು, ಗೌರವಿಸಬೇಕು. ಅಂಥ ಜವಾಬ್ದಾರಿ ಸರ್ಕಾರ ಹಾಗೂ ಸಾರ್ವಜನಿಕರ ಮೇಲಿದೆ.
- ಶಶಿರೇಖಾ ಹೆಗಡೆ