

ಕೆಲವೇ ದಿನಗಳ ಹಿಂದೆ ಮಾಧ್ಯಮಗಳಲ್ಲಿ ನವವಿವಾಹಿತ ಆತ್ಮಹತ್ಯೆಗೆ ಬಲಿಯಾದ ಸುದ್ದಿ ಪ್ರಕಟವಾಗಿತ್ತು. ವಿವಾಹಕ್ಕೆ ಮುಂಚೆ ಆ ಹುಡುಗ ಒಬ್ಬಾಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ ಅನಿವಾರ್ಯ ಕಾರಣಗಳಿಂದ ಆ ಪ್ರೀತಿಯ ವಿಷಯ ಅಲ್ಲಿಗೇ ಕೊನೆಯಾಯಿತು. ಮನೆಯವರ ಒತ್ತಾಯದ ಮೇರೆಗೆ ಆತನಿಗೆ ಬೇರೆಯವಳೊಂದಿಗೆ ವಿವಾಹವಾಯಿತು.
ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ಏನನ್ನೂ ಮುಚ್ಚಿಡಲೂ ಇಚ್ಛಿಸದ ಆತ ತನ್ನ ಪತ್ನಿಗೆ ತನ್ನ ಮೊದಲಿನ ಪ್ರೇಮದ ಬಗ್ಗೆ ಹೇಳಿಕೊಂಡಿದ್ದಾನೆ. ಜೊತೆಗೆ ಅದು ಮುಗಿದ ಕಥೆಯಾಗಿಯೂ ಮುಂದೆ ತಾವಿಬ್ಬರೂ ಅನ್ಯೋನ್ಯವಾಗಿ ಬಾಳ್ವೆ ನಡೆಸಬೇಕೆಂದು ಕೇಳಿಕೊಂಡಿದ್ದಾನೆ. ಈಕೆಗೆ ಅದು ನಿಜಕ್ಕೂ ಶಾಕ್ ಆಗಿತ್ತು. ಮೊದಲಿಗೆ ಅದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸದಿದ್ದರೂ ಸಣ್ಣಪುಟ್ಟ ಜಗಳವಾದಾಗಲೆಲ್ಲ ಆತನ ಮೊದಲ ಗೆಳತಿಯ ಹೆಸರನ್ನು ಪ್ರಸ್ತಾಪಿಸಿ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಳು. ಕೊನೆಗೆ ಜಗಳ ಅತಿರೇಕಕ್ಕೆ ಹೋದಾಗ ಹಳೆಯ ಗೆಳತಿಯ ಜೊತೆ ನಿನಗೆ ದೈಹಿಕ ಸಂಬಂಧವೂ ಇತ್ತೆಂದು ಮಾತನಾಡಿ ಅನುಮಾನಿಸಿದಳು. ಮೊದಲೇ ತನ್ನ ಪ್ರೀತಿಸಿದವಳ ಕೈಹಿಡಿಯಲಾಗದ ಸಂಕಟದಿಂದಿದ್ದ ಈತನಿಗೆ ಆ ಮಾತನ್ನು ಕೇಳಿಸಿಕೊಳ್ಳಲಾಗಲಿಲ್ಲ. ಆದರೂ ಹಾಗೇನೂ ಇರಲಿಲ್ಲವೆಂದು ಆಕೆಗೆ ಅರ್ಥಮಾಡಿಸಲು ಯತ್ನಿಸಿದ. ಆದರೆ ಅದನ್ನು ತಿರಸ್ಕರಿಸಿದ ಆಕೆ ಅದೇ ವಿಷಯವನ್ನು ಪದೇಪದೇ ಪ್ರಸ್ತಾಪಿಸಲಾರಂಭಿಸಿದಳು. ಇದರಿಂದ ಬೇಸತ್ತ ಆತ ಪತ್ರ ಬರೆದು ನೇಣಿಗೆ ಶರಣಾದ. ಗಮನಿಸಿ ಆಗ ಮದುವೆಯಾಗಿ ಕೇವಲ ಆರು ವಾರಗಳಾಗಿತ್ತು.
ಮುರಿದ ಮದುವೆ
ಇದೇ ತರಹದ ಇನ್ನೊಂದು ಪ್ರಕರಣದಲ್ಲಿ, ಮನೆಯವರು ಮದುವೆಗೆ ನಿಶ್ಚಯಿಸಿದ್ದ ಹುಡುಗ ಹುಡುಗಿಯರಿಬ್ಬರೂ ದಿನವೂ ಮೊಬೈಲ್ನಲ್ಲಿ ಮಾತಾಡಿಕೊಳ್ಳುತ್ತಿದ್ದರು. ಎರಡು ತಿಂಗಳಾಗಿತ್ತು. ಹುಡುಗ ಮಾತನಾಡುವ ಭರದಲ್ಲಿ ತಾನು ಮಾಂಸಾಹಾರವನ್ನು ಒಂದು ಬಾರಿ ಕೇವಲ ರುಚಿ ನೋಡಲು ಸೇವಿಸಿದ್ದಾಗಿ ಹೇಳಿದ. ಅಲ್ಲಿಯವರೆಗೂ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಹುಡುಗಿ ಆ ವಿಷಯವನ್ನು ಮಾತ್ರ ತನ್ನ ಮನೆಯವರೊಂದಿಗೆ ಚರ್ಚಿಸಿದ್ದಳು. ಸಸ್ಯಾಹಾರಿಗಳಾಗಿದ್ದ ಆ ಮನೆಯವರು ಸಂಬಂಧ ಮುಂದುವರಿಸಲಿಲ್ಲ. ಅವರ ನಿಶ್ಚಿತಾರ್ಥ ಸಮಾರಂಭ ಕೇವಲ ಇನ್ನೊಂದು ವಾರದಲ್ಲಿತ್ತು. ನೆಂಟರಿಷ್ಟರೆಲ್ಲರನ್ನೂ ಆಗಲೇ ಆಹ್ವಾನಿಸಿದ್ದರಿಂದ ಅಮೇಲಾದ ಅವಾಂತರ ಅಷ್ಟಿಷ್ಟಲ್ಲ. ಮುರಿದು ಬಿದ್ದ ಸಂಬಂಧ ಹುಡುಗನನ್ನು ಖಿನ್ನತೆಗೆ ನೂಕಿತು.
ಸಮಯವೇ ಉತ್ತರ
ಮೇಲಿನ ಎರಡೂ ಪ್ರಕರಣಗಳನ್ನು ಅವಲೋಕಿಸಿ ನೋಡಿ. ಮದುವೆಯಾಗಲಿರುವ ಹುಡುಗಿಗೆ ತಾನು ಯಾವ ವಿಷಯವನ್ನೂ ಮುಚ್ಚಿಡಬಾರದು ಎಂಬುದು ಆತನ ಪ್ರಾಮಾಣಿಕ ವಿಚಾರ. ಆದರೆ ಇಲ್ಲಿ ಹಾಗೆ ಮಾಡಲು ಹೋಗಿ ತಂದುಕೊಂಡದ್ದು ಅವಾಂತರ. ಏಕೆಂದರೆ, ಅದು ಸಂಬಂಧಗಳು ಆಗ ತಾನೇ ಚಿಗುರೊಡೆವ ಹಂತ. ಅಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಪರಸ್ಪರರ ಭಾವನೆಗಳನ್ನು, ಅವರಿಬ್ಬರ ಗತ ಇತಿಹಾಸವನ್ನಲ್ಲ. ಏಕೆಂದರೆ ಕೊಂಚ ಸೂಕ್ಷ್ಮ ವಿಷಯಗಳನ್ನು ಅರಗಿಸಿಕೊಳ್ಳಲು ಸಂಬಂಧ ಕೊಂಚ ಮಾಗಬೇಕು. ಕೇವಲ ಆಕೆ / ಆತ ಕ್ಲೋಸ್ ಆಗಿ ಮಾತನಾಡುತ್ತಿದ್ದಾಳೆ/ನೆ ಎಂಬ ಕಾರಣಕ್ಕೆ ತಮ್ಮ ಹಳೆಯದೆಲ್ಲವನ್ನೂ ಹೇಳಿಬಿಡುವ ಧಾವಂತಕ್ಕೆ ಬೀಳಬಾರದು.
ಸಮಯ ಕಳೆದಂತೆ ನಮಗೆ ಸಂಗಾತಿಯ ಮನಸ್ಸು ಅರ್ಥವಾಗಿ ಹೇಳುವುದನ್ನು ಆಕೆ / ಆತ ಸ್ವೀಕರಿಸಬಲ್ಲಳೋ/ನೋ, ಇಲ್ಲವೋ ಎಂಬುದು ಸ್ಪಷ್ಟವಾಗುತ್ತದೆ. ಎಷ್ಟೋ ಬಾರಿ ನಮ್ಮ ಮನಸ್ಸೇ ಕಳೆದ ದಿನಗಳ ಪುಸ್ತಕವನ್ನು ಮರೆತು ಮುಂದೆ ನಡೆ ಎಂದು ಕಿವಿಮಾತು ಹೇಳುತ್ತದೆ. ಆಗ ಬೇಡವೆನಿಸಿದರೆ ಹೇಳಲೇಬೇಕಾದ ಪ್ರಮೇಯವೇ ಇರುವುದಿಲ್ಲ. ಅಥವಾ ಹೇಳಲೇಬೇಕೆನಿಸಿದರೆ ದಿನ ಕಳೆದಂತೆ ಎದುರಿಗಿರುವ ವ್ಯಕ್ತಿ ಈಗ ನಾವು ಹೇಳುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಬಲ್ಲ ಎಂಬುದು ನಮಗೇ ಗೊತ್ತಾಗುತ್ತದೆ. ಆಗ ಉಂಟಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಿಲ್ಲ. ಏಕೆಂದರೆ ಅಷ್ಟರಲ್ಲಾಗಲೇ ನಿಮ್ಮ ಪ್ರೀತಿ, ಬಾಂಧವ್ಯ ಅವೆಲ್ಲವುಗಳನ್ನು ದಾಟಿ ಬಹಳಷ್ಟು ದೂರ ಕ್ರಮಿಸಿರುತ್ತದೆ.
- ಸಂತೋಷ್ ಕುಮಾರ್ ಎಲ್.ಎಂ.