

ತುಳುನಾಡಿನ ಒಂದು ಭಾಗವನ್ನು ಸತತ ಐನೂರು ವರ್ಷ ಆಳಿದ ಪ್ರಸಿದ್ಧವಾದ ಅರಸು ವಂಶ ಅಜಿಲರದ್ದು. ತುಳು ಸಂಸ್ಕೃತಿಗೆ ಶಿಲ್ಪಕಲಾ ವೈಭವಕ್ಕೆ ಅವರಿಂದ ಲಭಿಸಿದ ಕೊಡುಗೆ ದೊಡ್ಡದು. ಈ ಮನೆತನಕ್ಕೆ ನಾಲ್ಕು ಅರಮನೆಗಳು ಸೇರಿದ್ದವು. ಅಳದಂಗಡಿ ವೇಣೂರು ಕೇಳ ಮತ್ತು ಬರಾಯಗಳಲ್ಲಿ ಅವರ ವಾಸಕ್ಕಿದ್ದ ಅರಮನೆಗಳ ಪೈಕಿ ಇಂದು ಪಟ್ಟವಾದವರು ನೆಲೆಸುವ ಅಳದಂಗಡಿ ಹಾಗೂ ಬರಾಯ ಅರಮನೆಗಳು ಮಾತ್ರ ಉಳಿದುಕೊಂಡಿವೆ.
ಹದಿನಾರು ಮಾಗಣೆಗಳ ಧಾರ್ಮಿಕ ಆಚರಣೆಗಳ ಕಟ್ಟುಪಾಡುಗಳು ಇಂದಿಗೂ ಇದೇ ಅರಸರ ಅಧಿಕಾರಕ್ಕೆ ಒಳಪಟ್ಟಿವೆ. ವೈದ್ಯರಾದ ಡಾ. ಪದ್ಮಪ್ರಸಾದ ಅಜಿಲರು ಪ್ರಸ್ತುತ ಅರಸುಗಳಾಗಿದ್ದು 1995ರಲ್ಲಿ ಪಟ್ಟಾಭಿಷಿಕ್ತರಾದವರು.
ಒಂದೊಮ್ಮೆ ವೈಭವದಿಂದ ಮೆರೆಯುತ್ತಿದ್ದ ಬರಾಯದ ಅರಮನೆ ಇಂದು ಸುಸ್ಥಿತಿಯಲ್ಲಿಲ್ಲ. 1684ರಲ್ಲಿ ನಿರ್ಮಾಣಗೊಂಡ ಅರಮನೆಗೆ ಆರಂಭದಲ್ಲಿ ಮುಳಿಹುಲ್ಲಿನ ಚಾವಣಿ ಇತ್ತಂತೆ. ನಂತರ ಇದಕ್ಕೆ ಹೆಂಚು ಹೊದಿಸಲಾಯಿತು. ಇಂದು ಒಂದು ಕಾಲದ ಈ ವೈಭವದ ಅರಮನೆಯಲ್ಲಿ ಜನವಾಸವಿಲ್ಲ.
ಆದರೆ ದೈವಗಳು ನೆಲೆಸಿವೆ. ವರ್ಷದಲ್ಲಿ ಐದು ಸಲ ಅರಸರು ಇಲ್ಲಿಗೆ ಆಗಮಿಸಿ ಪ್ರಾಚೀನ ಕಾಲದಿಂದ ನಡೆದುಬಂದ ಹಾಗೆ ದೀಪಾವಳಿ ಮುಂತಾದ ಪಂಚಪರ್ವಗಳನ್ನು ಸಂಪ್ರದಾಯ ವಿಧಿಗಳಂತೆ ಆಚರಿಸುತ್ತಾರೆ. ಹೊಸದಾಗಿ ಅಧಿಕಾರ ಸ್ವೀಕರಿಸುವ ಅರಸರಿಗೆ ಇದೇ ಅರಮನೆಯಲ್ಲಿ ಖಡ್ಗ ಮತ್ತು ಮರದ ಮಣೆಯನ್ನು ಕೊಡುವುದು ಪದ್ಧತಿ. ಇಂಥ ಇಪ್ಪತ್ತು ಖಡ್ಗ- ಮಣೆಗಳು ಇಲ್ಲಿದ್ದು ಅಷ್ಟು ಸಂಖ್ಯೆಯ ಅರಸರು ಇಲ್ಲಿ ಆಡಳಿತ ನಡೆಸಿದರೆಂದು ನಂಬಬಹುದಾಗಿದೆ. ತೀರ ಶಿಥಿಲವಾಗಿ ಕುಸಿಯುವ ಹಂತದಲ್ಲಿದ್ದರೂ ಅರಮನೆಯನ್ನು ರಕ್ಷಿಸಲು ಅರಸು ಮನೆತನದವರು ತುಂಬ ಶ್ರಮಿಸಿದ್ದಾರೆ.
ಇಲ್ಲಿರುವ ಬೃಹತ್ ಕಾಷ್ಠ ಸಾಮಗ್ರಿಗಳ ಸೂಕ್ಷ್ಮ ಕಲಾ ಕೆತ್ತನೆಗಳು ಚಿತ್ತಾಕರ್ಷಕವಾಗಿವೆ. ಪ್ರತಿ ಕಂಬದ ಕೆತ್ತನೆಯೂ ಒಂದು ಕಾವ್ಯವಾಗಿದೆ. ಬಾಗಿಲು ಚೌಕಟ್ಟುಗಳು ಮೇಲ್ಮುಚ್ಚಿಗೆ ಎಲ್ಲವೂ ಕಾಷ್ಠಶಿಲ್ಪಿಗಳ ಕೌಶಲದಿಂದ ಸಜೀವಗೊಂಡಿವೆ. ಮರದಿಂದ ಕೆತ್ತಿದ ಗಣಪತಿ ವೇಣುಗೋಪಾಲ ಕೃಷ್ಣ ಆನೆಗಳು ಕುದುರೆಗಳು ಗಂಡಭೇರುಂಡ ಮುಂತಾದ ಕೆತ್ತನೆಗಳು ಚಿತ್ತಾಕರ್ಷಕವಾಗಿವೆ. ವಾದ್ಯಮೇಳವಂತೂ ನಯನ ಮನೋಹರವಾಗಿದೆ. ಆದರೆ ಅರಮನೆಯ ಚಾವಣಿ ಮುರಿಯುವ ಹಂತ ತಲುಪಿದೆ. ಮುರಳೀಲೋಲನ ಕೈಯಲ್ಲಿ ಕೊಳಲಿಲ್ಲ. ಗೋಡೆಗಳು ತೀರ ಶಿಥಿಲಗೊಂಡಿವೆ. ಈ ಸಂಪತ್ತನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಹಲವು ದುರಸ್ತಿಗಳನ್ನು ಅರಸರು ಮಾಡುತ್ತ ಬಂದಿದ್ದಾರೆ. ಆದರೆ ಬ್ರಿಟಿಷರು ಕೊಡುತ್ತಿದ್ದ ರಾಜಧನವನ್ನು ನಿಲ್ಲಿಸಿರುವ ಸರ್ಕಾರ ಇಂಥ ಇತಿಹಾಸದ ಸಾಕ್ಷಿಗಳ ಸಂರಕ್ಷಣೆಗೆ ಏನೂ ನೆರವಾಗದಿರುವುದು ವಿಷಾದದ ಸಂಗತಿ.
ತುಳು ಸಂಸ್ಕೃತಿಯನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಈ ಹಳೆಯ ಅರಮನೆಯ ರಕ್ಷಣೆಗೆ ಸಾಕಷ್ಟು ಕಾಯಕಲ್ಪ ಮಾಡಿ ವಿಶಿಷ್ಟ ಆಚರಣೆಗಳನ್ನು ನಡೆಸುತ್ತ ಬಂದಿರುವುದು ಮೆಚ್ಚತಕ್ಕ ಅಂಶ.
- ಪ. ರಾಮಕೃಷ್ಣ ಶಾಸ್ತ್ರಿ