

ಅಕ್ಕ ಊರಿಂದ ಬರ್ತಾಳೆ ಅಂದ್ರೆ ನಂಗೆ ಸಂತೋಷದ ಜತೆಗೆ ಗಾಬರಿಯಾಗುತ್ತಪ್ಪಾ. ರಜೆಗಳಿರುವುದೇ ಬೇಸಗೆಯಲ್ಲಿ. ಅವ್ರೆಲ್ಲ ಬರೋ ಮುಂಚೆನೇ ಒಂದು ಟ್ಯಾಂಕರ್ ನೀರು ಹಾಕಿಸ್ಕೊಂಡು ಬಿಡ್ತೀವಿ. ನಮ್ಮಕ್ಕಂಗೆ ಊರಲ್ಲಿ ನಲ್ಲಿ ತಿರುಗಿಸಿ ಇಟ್ಟುಕೊಂಡೇ ಪಾತ್ರೆ ಉಜ್ಜೋ ಅಭ್ಯಾಸ. ಒಂದು ಬಿಂದಿಗೆ ನೀರು ಸಾಕಾಗೋವಲ್ಲಿ ಅವಳಿಗೆ ಹತ್ತು ಬಿಂದಿಗೆ ನೀರು ಬೇಕು. ಸ್ನಾನಕ್ಕಾದರೂ ಅಷ್ಟೇ. ಬಕೆಟಲ್ಲಿ ನೀರು ತುಂಬಿ ಹರೀತಾ ಇರ್ಬೇಕು ಸ್ನಾನ ಮುಗಿಯೋವರೆಗೂ! ಊರಲ್ಲಿ ನೀರಿಗೆ ಸಮಸ್ಯೆ ಇಲ್ಲದೇ ಇರೋದ್ರಿಂದ ಅವಳಿಗೆ ನೀರನ್ನು ಎಚ್ಚರಿಕೆಯಿಂದ ಬಳಸ್ಬೇಕು ಅಂತ ಅನ್ನಿಸೋದೇ ಇಲ್ಲಾ... ಎಂದು ಸಂಬಂಧಿಕರೊಬ್ಬರು ಮೊನ್ನೆ ಅವಲತ್ತುಕೊಳ್ಳುತ್ತಿದ್ದರು.
ಒಂದೆಡೆ ನೆಂಟರು ಬರುವ ಖುಷಿ, ಮತ್ತೊಂದೆಡೆ ನೀರು ಪೋಲು ಮಾಡುವ ಆತಂಕ. ನಮಗೆ ನಮ್ಮ ಸುತ್ತಲಿನ ಎಲ್ಲವುಗಳ ಮೌಲ್ಯದ ಅರಿವಾಗುವುದು ಅವುಗಳ ಕೊರತೆ ಇದ್ದಾಗಲೇ ಎಂಬ ಮಾತು ಎಷ್ಟು ಸತ್ಯ. ನೀರಿಗೇನೂ ಕೊರತೆಯಾಗದ ನಮ್ಮ ಹಳ್ಳಿಗಳಲ್ಲಿ ನಲ್ಲಿ ಬಿಟ್ಟುಕೊಂಡೇ ಕೆಲಸ ಮಾಡುವ ರೂಢಿ. ಅಲ್ಲಿ ಪಾತ್ರೆ ತೊಳೆದ, ಬಟ್ಟೆ ಒಗೆಯಲು ಬಳಸಿದ ನೀರು ತೆಂಗಿನ ಮರದ ಬುಡಕ್ಕೋ, ಬಸಳೆಬಳ್ಳಿಯ ಬುಡಕ್ಕೋ, ತೊಂಡೆಬಳ್ಳಿಗೋ ಹರಿದು ಹೋಗುತ್ತಿರುತ್ತದೆ. ಇತ್ತ ಕೆಲಸಗಳನ್ನೂ ಮುಗಿಸಿಕೊಂಡಂತಾಗುತ್ತದೆ, ಅತ್ತ ತೆಂಗು ತರಕಾರಿಗೆ ನೀರು ಹರಿಸಿದಂತೆಯೂ ಆಗುತ್ತದೆ. ಆದರೆ ಪಟ್ಟಣದಲ್ಲಿ ನಲ್ಲಿಗೆ ನೀರೆಲ್ಲಿಂದ ಹರಿದು ಬರಬೇಕು ಅಥವಾ ಹೀಗೆ ಬಳಸಿದ ನೀರು ಚರಂಡಿ ಸೇರುತ್ತದೆ ವಿನಾ ಪುನರ್ಬಳಕೆಯಾಗದು.
ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವುದರಿಂದ ನೀರಿನಾಟದ ಗಮ್ಮತ್ತನ್ನು ನಾವೆಲ್ಲ ಅನುಭವಿಸಿದವರೇ. ಇಂದು ಪಟ್ಟಣದಲ್ಲಿ ಕುಳಿತುಕೊಂಡು ನಮ್ಮ ಮಕ್ಕಳಿಗೆ ಆ ಸುಖ ಒದಗಿಸುವ ಭಾಗ್ಯ ನಮಗಿಲ್ಲ. ಹೋದರೆ ನೀರಿನ ಪಾರ್ಕ್ಗೆ ಕರೆದೊಯ್ಯಬೇಕು. ನೀರಿನ ಇಂದಿನ ಸ್ಥಿತಿಯನ್ನು ಗಮನಿಸಿದರೆ ಹೆಂಗಳೆಯರೂ ನೀರಿನ ನಿರ್ವಹಣೆಯಲ್ಲಿ ಹೆಚ್ಚಿನ ಆಸ್ಥೆ ವಹಿಸಬೇಕಾಗಿದೆಯೆನಿಸುತ್ತದೆ.
ಪರಿಚಯದ ಹೆಣ್ಣುಮಗಳೊಬ್ಬಳಿಗೆ ತನ್ನ ಅಂಗಳ ಸ್ವಚ್ಛವಾಗಿರಬೇಕೆಂಬ ಬಯಕೆ. ಬಾಗಿಲು ತೊಳೆದು ರಂಗವಲ್ಲಿಯಿಡುವ ನೆಪದಲ್ಲಿ ಎರಡು ಬಿಂದಿಗೆ ನೀರು ಸುರಿಯುವುದು ಹಾಗಿರಲಿ, ಕಾಂಕ್ರೀಟು ಹಾಕಿರುವ ಅಂಗಳವನ್ನು ವಾರದಲ್ಲೆರಡು ಬಾರಿ ತೊಳೆಯುವುದು ಅವರ ಅಭ್ಯಾಸ. ಅವರು ನಲ್ಲಿಗೆ ಪೈಪು ಸಿಕ್ಕಿಸಿ ಅಂಗಳ ತೊಳೆಯುವ ಪ್ರಕ್ರಿಯೆಯಲ್ಲಿ ಏನಿಲ್ಲವೆಂದರೂ ಇಪ್ಪತ್ತು ಬಿಂದಿಗೆ ನೀರು ವ್ಯರ್ಥವಾಗಿರುತ್ತದೆ. ನೀರು ಸುಮ್ಮನೇ ಹಾಳಾಗುತ್ತದಲ್ಲ ಎಂದರೆ 'ಬೋರ್ ಇದೆಯಲ್ಲ, ತೊಂದರೆಯಿಲ್ಲ' ಎಂದು ತಣ್ಣಗೆ ಹೇಳುತ್ತಾರೆ. ಒಂದು ದಿನ ಅದು ಬತ್ತಿ ಹೋದರೆ ಪುನಶ್ಚೇತನಕ್ಕೆ ಇವರು ಶ್ರಮಿಸಿಯಾರೇ?
ಇನ್ನು ಕೆಲವರು ಪಂಪು ಚಾಲನೆಯಲ್ಲಿಟ್ಟಿದ್ದನ್ನು ಮರೆತು ನಿದ್ದೆ ಹೋಗಿರುತ್ತಾರೋ ಏನೋ ಎಂಬ ಹಾಗೆ ತಾರಸಿ ಮೇಲಿನ ಟ್ಯಾಂಕಿಂದ ನೀರು ಹರಿದು ಹೋಗುತ್ತಲೇ ಇರುತ್ತದೆ. ಈ ಸ್ವಭಾವದ ಮಂದಿಗೆ ಪಾಠ ಹೇಳುವ ಪರಿಯಾದರೂ ಯಾವುದು?
ನಮ್ಮ ಮಕ್ಕಳಿಗೆ ನೀರು ನಲ್ಲಿಯಲ್ಲಿ ಬರುತ್ತದೆ ಎಂಬ ಅರಿವಿರುತ್ತದೆ. ಆದರೆ ಆ ನಲ್ಲಿಗೆ ಎಲ್ಲಿಂದ ಬರಬೇಕು ಎಂಬುದನ್ನು ವಿವರಿಸಿ ಹೇಳಬೇಕಾಗುತ್ತದೆ. ನೀರಾಟವಾಡುವ ಆಸಕ್ತಿ ಅದೆಷ್ಟೇ ಇದ್ದರೂ ಮೇಲಿನ ಟ್ಯಾಂಕಲ್ಲಿ, ಕೆಳಗಿನ ಸಂಪಲ್ಲಿ ನೀರು ಕಡಿಮೆಯಿದೆ ಎಂದರೆ ನೀರು ಚೆಲ್ಲದೆ ಸುಮ್ಮನಿರುತ್ತಾರೆ. ಆದರೆ ದೊಡ್ಡವರಾಗಿದ್ದೂ ನಮ್ಮ ಭೂಮಿಯ ಬಗ್ಗೆ, ಪರಿಸರದ ಬಗ್ಗೆ ಅರಿವಿಲ್ಲದವರಂತೆ ವರ್ತಿಸುವವರಿಗೆ ಏನೆನ್ನುವುದು? ಅವರಿಗೆ ಅರ್ಥೈಸುವ ಪರಿಯಾದರೂ ಯಾವುದು? ಮೋಟರು ಸ್ವಿಚ್ಚು ಅದುಮಿ ಧಾರಾವಾಹಿಗಳ ಮಾಯಾಲೋಕದಲ್ಲಿ ಮುಳುಗಿ ಹೋಗುವ ನೀರೆಯರಿಗೆ ರಿಮೈಂಡರ್ ಇರಿಸಿಕೊಳ್ಳಿ ಎಂದು ತಿಳಿಹೇಳುವ ಬಗೆಯಾದರೂ ಹೇಗೆ?
ಭೂಮಿಯನ್ನು ಭಾರತೀಯ ಸಂಸ್ಕೃತಿಯಲ್ಲಿ ತಾಯಿಯೆಂದು ಕಾಣುವುದು ಸಾಮಾನ್ಯ. ಹಾಗಿದ್ದ ಮೇಲೆ ಅಂಥ ತಾಯಿಯ ಮಕ್ಕಳಾದ ನಮಗೇ ಅಮ್ಮನ ನೋವು ಅರ್ಥವಾಗದೇ ಹೋದರೆ ನಾಳೆ ನಮ್ಮ ಮಕ್ಕಳಿಗೆ ನಾವು ಕಲಿಸುವುದೇನನ್ನು? ತಾಯಿಯೆದೆಯಲ್ಲಿ ಅಮೃತವಾಗಿ ಹರಿಯುವ ಹಾಲನ್ನು ಮಾತ್ರ ಮಗು ಹೀರುತ್ತದೆ ವಿನಾ, ಹೊಟ್ಟೆ ತುಂಬಿಲ್ಲವೆಂದು ರಕ್ತ ಕುಡಿಯುವುದಿಲ್ಲ. ಆದರೆ ದೊಡ್ಡವರಾದ ನಾವು ಮಾತ್ರ ಬಾವಿ, ಕೆರೆ, ನದಿಗಳಿಂದ ನೀರು ಸಾಲದೆಂದು ಲೆಕ್ಕವಿಲ್ಲದಷ್ಟು ಕೊಳವೆಬಾವಿ ಕೊರೆಸುತ್ತಿದ್ದೇವೆ. ಹೆತ್ತೊಡಲು ಬರಿದಾದರೆ ಮುಂದೇನು ಗತಿ? ಮಗುವಿಗೆ ಗೊತ್ತಿರುವ ಅನೇಕ ವಿಷಯಗಳನ್ನು ಪ್ರಜ್ಞಾವಂತ ನಾಗರಿಕರು ಮರೆಯುವುದೇಕೆ?
- ಆರತಿ ಪಟ್ರಮೆ