

ಕಾಬುಲ್: ಅಫ್ಘಾನಿಸ್ತಾನದ ದಕ್ಷಿಣ ಜಬುಲ್ ಪ್ರಾಂತ್ಯದಲ್ಲಿ ಬಸ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ 36 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಶಾರ್-ಇ ಸಫಾ ಜಿಲ್ಲೆಯ ಹೆದ್ದಾರಿಯಲ್ಲಿ ಬಸ್ ಹಾಗೂ ಟ್ಯಾಂಕರ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆ ವೇಳೆ ಬಸ್ ನಲ್ಲಿದ್ದ 36 ಮಂದಿ ಸಾವನ್ನಪ್ಪಿ, 25ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡೂ ವಾಹನಗಳ ಚಾಲಕರ ನಿರ್ಲಕ್ಷ್ಯದಿಂದಾಗಿಯೇ ಘಟನೆ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ವೇಳೆ ಗಾಯಗೊಂಡ 25 ಮಂದಿಯಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಂದಹಾರ್ ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿಗಳಿ ಮಾಹಿತಿ ನೀಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿಯೂ ಘಜ್ನಿ ಪ್ರಾಂತ್ಯದಲ್ಲಿ ಇದೇ ರೀತಿ ದುರ್ಘಟನೆಯೊಂದು ಸಂಭವಿಸಿತ್ತು. ಪೆಟ್ರೋಲ್ ಹೊತ್ತು ತೆರಳುತ್ತಿದ್ದ ಟ್ಯಾಂಕರ್ ವೊಂದು ಎರಡು ಬಸ್ ಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 52 ಜನರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದರು.