ಕುಲ್'ಭೂಷಣ್ ಜಾಧವ್'ಗೆ ರಾಯಭಾರಿ ಕಚೇರಿ ನೆರವು ನೀಡಲ್ಲ: ಪಾಕಿಸ್ತಾನ ಸೇನೆ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರಿಗೆ ರಾಯಭಾರಿ ಕಚೇರಿಯ ನೆರವು ನೀಡುವುದಿಲ್ಲ ಎಂದು ಪಾಕಿಸ್ತಾನ ಸೇನೆ ಸೋಮವಾರ ಹೇಳಿದೆ...
ಕುಲ್'ಭೂಷಣ್ ಜಾಧವ್
ಕುಲ್'ಭೂಷಣ್ ಜಾಧವ್
Updated on: 
ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರಿಗೆ ರಾಯಭಾರಿ ಕಚೇರಿಯ ನೆರವು ನೀಡುವುದಿಲ್ಲ ಎಂದು ಪಾಕಿಸ್ತಾನ ಸೇನೆ ಸೋಮವಾರ ಹೇಳಿದೆ. 
ಜಾಧವ್ ಪ್ರಕರಣ ಸಂಬಂಧ ರಾವಲ್ಪಿಂಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಘಫೂರ್ ಅವರು, ಕುಲ್ ಭೂಷಣ್ ಜಾಧವ್ ಅವರು ಬೇಹುಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನಿನ ಅಡಿಯಲ್ಲಿ ಅವರಿಗೆ ರಾಯಭಾರಿ ಕಚೇರಿ ನೆರವು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಕಾನೂನು ಪಾಲನೆ ಮಾಡುವುದು ಸೇನೆಯ ಜವಾಬ್ದಾರಿಯಾಗಿದೆ. ಇದರಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಜಾಧವ್ ಗೆ ಶಿಕ್ಷೆ ನೀಡಬೇಕಿದೆ. ಭವಿಷ್ಯದಲ್ಲೂ ಪ್ರಕರಣ ಸಂಬಧ ರಾಜಿಯಾಗುವುದಿಲ್ಲ. ಜಾಧವ್ ಕುರಿತ ವಿಚಾರಣೆ ವೇಳೆ ಕಾನೂನು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಹೀಗಾಗಿಯೇ ಅವರಿಗೆ ಶಿಕ್ಷೆ ಪ್ರಕಟಿಸಲಾಗಿತ್ತು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕವೇ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಈ ಆದೇಶವನ್ನು ಯಾವುದೇ ಕಾರಣಕ್ಕೂ ನಾವು ತಿರಸ್ಕರಿಸುವಂತಿಲ್ಲ. 
ಬೇಕಿದ್ದರೆ ಭಾರತೀಯ ವ್ಯಕ್ತಿ ಸೇನಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹಾಗೂ ಪಾಕಿಸ್ತಾನ ರಾಷ್ಟ್ರಪತಿಗಳ ಮೊರೆ ಹೋಗಬಹುದು. ಆದರೆ, ಎಲ್ಲಿಯೋ ಹೋದರೂ ನಾವು ನಮ್ಮ ಆದೇಶವನ್ನು ಸಮರ್ಥಿಸಿಕೊಳ್ಳಲು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ. 
ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾನೆಂದು ಆರೋಪಿಸಿದ್ದ ಪಾಕಿಸ್ತಾನ ಕುಲ್'ಭೂಷಣ್ ಜಾಧವ್ ಅವರನ್ನು ಬಂಧನಕ್ಕೊಳಪಡಿಸಿತ್ತು. ಏಪ್ರಿಲ್ 10 ರಂದು ರಹಸ್ಯವಾಗಿ ವಿಚಾರಣೆ ನಡೆಸಿದ್ದ ಪಾಕಿಸ್ತಾನ ಸೇನಾ ನ್ಯಾಯಾಲಯ ಜಾಧವ್ ಅವರಿಗೆ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. 
ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರರಾಷ್ಟ್ರಗಳ ನಡುವೆ ಆಗಿರುವ ವಿಯೆನ್ನಾ ಒಪ್ಪಂದದ ನಿಯಮದ ಪ್ರಕಾರ. ಯಾವುದೇ ಒಂದು ರಾಷ್ಟ್ರದ ಪ್ರಜೆ ಬೇರೊಂದು ರಾಷ್ಟ್ರದಲ್ಲಿ ತಪ್ಪನ್ನು ಮಾಡಿದ್ದರೆ, ಆ ಪ್ರಜೆಯ ಪರವಾಗಿ ಮಾದ ಮಾಡಲು ನ್ಯಾಯವಾದಿಗಳನ್ನು ನೇಮಿಸಲು ಅವಕಾಶವನ್ನು ಆ ರಾಷ್ಟ್ರಕ್ಕೆ ನೀಡಬೇಕು. ನಂತರ ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಹೀಗೆ ಆ ವ್ಯಕ್ತಿಯ ಪರವಾಗಿ ಆತನ ರಾಷ್ಟ್ರ ನೇಮಿಸಿದ ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಂತರವೂ ತಪ್ಪು ಮಾಡಿರುವುದು ಸಾಬೀತಾದರೆ ಮಾತ್ರ ಆತನಿಗೆ ಶಿಕ್ಷೆ ನೀಡುವ ಅವಕಾಶವಿರುತ್ತದೆ. 
ಆದರೆ, ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದಂತಾಗಿದೆ. ಜಾಧವ್ ಅವರ ಮೇಲೆ ಗೂಢಚಾರದ ಆರೋಪ ಹೊರಿಸಿರುವ ಪಾಕಿಸ್ತಾನ, ಆತನ ಪರವಾಗಿ ನ್ಯಾಯವಾದಿಯನ್ನು ನೇಮಕ ಮಾಡಲು ಭಾರತಕ್ಕೆ ಯಾವುದೇ ಅವಕಾಶವನ್ನು ನೀಡಿಲ್ಲ. ಭಾರತವು ಜಾಧವ್ ಪರವಾಗಿ ನ್ಯಾಯವಾದಿ ನೇಮಕ ಮಾಡುವ ಬಗ್ಗೆ ಸಾಕಷ್ಟು ಬಾರಿ ಪಾಕಿಸ್ತಾನದ ಗಮನಕ್ಕೆ ತಂದಿದ್ದರೂ ಪಾಕಿಸ್ತಾನ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. 
ಜಾಧವ್ ವಿರುದ್ಧದ ಚಾರ್ಜ್ ಶೀಟ್ ಹಾಗೂ ಗಲ್ಲು ಶಿಕ್ಷೆಯ ತೀರ್ಪಿನ ಪ್ರತಿ ನೀಡುವಂತೆ ಹಾಗೂ ವಕೀಲರಿಗೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡುವಂತೆ ನಿನ್ನೆಯಷ್ಟೇ ಭಾರತ ಮನವಿ ಮಾಡಿಕೊಂಡಿತ್ತು. ಕಳೆದ ಒಂದು ವರ್ಷದಿಂದ ಕುಲಭೂಷಣ್ ಜಾಧವ್ ಅವರಿಗೆ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಭಾರತ ಮಾಡಿದ ಮನವಿಯನ್ನು ಪಾಕಿಸ್ತಾನ 13 ಬಾರಿ ತಿರಸ್ಕರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com