

ವಾಷಿಂಗ್ಟನ್: ಉಗ್ರರ ಸ್ವರ್ಗವಾಗಿ ಮಾರ್ಪಾಟಾಗಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದು, ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತದ ನೆರವು ಅಗತ್ಯ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ಸಮೀಪದ ಮಿಲಿಟರಿ ನೆಲೆಯಲ್ಲಿ ಟಿವಿ ಮೂಲಕ ರಾಷ್ಟ್ರವನ್ನುದ್ದೇಶಿಸಿ, ದಕ್ಷಿಣ ಏಷ್ಯಾ ಬಗೆಗಿನ ಅಮೆರಿಕದ ನೂತನ ಭದ್ರತಾ ನೀತಿಯನ್ನು ಪ್ರಕಟಿಸುತ್ತ ಮಾತನಾಡಿದ ಟ್ರಂಪ್, 'ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ನೆಲೆ ಒದಗಿಸುತ್ತಿರುವ ಪಾಕ್ ನೀತಿಯ ಬಗ್ಗೆ ಇನ್ನು ನಾವು ಸುಮ್ಮನಿರಲಾರೆವು. ಅಫ್ಘಾನಿಸ್ತಾನದಲ್ಲಿ ಶಾಂತಿ, ಸ್ಥಿರತೆ ಕಾಪಾಡುವಲ್ಲಿ ನಮ್ಮ ಪ್ರಯತ್ನದ ಜತೆ ಕೈಜೋಡಿಸುವ ಮೂಲಕ ಪಾಕಿಸ್ತಾನ ಸಾಕಷ್ಟು ಪ್ರಯೋಜನಗಳನ್ನು ಗಳಿಸಬಹುದಿತ್ತು. ಆದರೆ ಅದು ಅಪರಾಧಿಗಳು ಮತ್ತು ಉಗ್ರರಿಗೆ ಸುರಕ್ಷಿತ ನೆಲೆಗಳನ್ನು ಒದಗಿಸುತ್ತ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ. ಪಾಕಿಸ್ತಾನವು ಭಯೋತ್ಪಾದಕರನ್ನು ಮಟ್ಟಹಾಕದಿದ್ದರೆ ಅದರೊಂದಿಗಿನ ಮಿಲಿಟರಿ ಮತ್ತು ಇತರ ಸಹಕಾರ ಮುಂದುವರಿಯದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ನಾವು ಪಾಕಿಸ್ತಾನಕ್ಕೆ ಬಿಲಿಯನ್ ಗಟ್ಟಲೆ ಡಾಲರ್‌ಗಳ ನೆರವು ನೀಡುತ್ತಿದ್ದೇವೆ. ಆದರೆ ಅದು ನಮ್ಮ ವಿರುದ್ಧವೇ ಹೋರಾಡುವ ಉಗ್ರರಿಗೆ ಸುರಕ್ಷಿತ ನೆಲೆಗಳನ್ನು ಒದಗಿಸುತ್ತಿದೆ'. ಇದು ತಕ್ಷಣದಿಂದಲೇ ಬದಲಾಗಲೇಬೇಕು. ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾಗರಿಕವಾಗಿ ವರ್ತಿಸಲು ಪಾಕಿಸ್ತಾನಕ್ಕೆ ಇದು ಸಕಾಲ. ದಕ್ಷಿಣ ಏಷ್ಯಾ ಕಡೆಗಿನ ಪರಿಷ್ಕೃತ ರಕ್ಷಣಾ ನೀತಿ ಅನ್ವಯ ಅಫಘಾನಿಸ್ತಾನಕ್ಕೆ ಮತ್ತಷ್ಟು ಯೋಧರನ್ನು ಕಳುಹಿಸಿಕೊಡುವುದಾಗಿ ಟ್ರಂಪ್ ಹೇಳಿದ್ದಾರೆ. ಅಂತೆಯೇ ಇಸ್ಲಾಮಿಕ್ ಭಯೋತ್ಪಾದಕರಿಗೆ ಅಫ್ಘಾನಿಸ್ತಾನ ಸುರಕ್ಷಿತ ನೆಲೆಯಾಗುವುದನ್ನು ತಪ್ಪಿಸಲು ಎಲ್ಲ ತಂತ್ರ ಅನುಸರಿಸಲಾಗುವುದು. ಎಲ್ಲ ಉಗ್ರ ಸಂಘಟನೆಗಳು ಮತ್ತು ಅಪರಾಧಿ ಜಾಲಗಳನ್ನು ಹತ್ತಿಕ್ಕಲು ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗುವುದು ಎಂದು ಇದೇ ವೇಳೆ ಅವರು ಘೋಷಿಸಿದರು. ಪ್ರಸ್ತುತ ಅಮೆರಿಕದ 8.400 ಯೋಧರಿದ್ದು, ಇನ್ನೂ 4,000 ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಲು ಟ್ರಂಪ್ ಆಡಳಿತ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಆಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿರುವ ಅಮೆರಿಕನ್ ಮಿತ್ರಪಡೆಗಳನ್ನು ಅಮೆರಿಕ ವಾಪಸ್ ಕರೆಸಿಕೊಳ್ಳಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶ್ವೇತಭವನದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದ್ದು, ಇದೇ ರೀತಿಯ ಬೆಳವಣಿಗೆ ಮುಂದುವರೆದರೆ ಪಾಕಿಸ್ತಾನ ವಿಶ್ವಸಮುದಾಯದಿಂದ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನವನ್ನು ಉಗ್ರರು ತಮ್ಮ ತವರಾಗಿ ಮಾರ್ಪಡಿಸಿಕೊಳ್ಳುತ್ತಿರುವುದನ್ನು ನೋಡಿಯೂ ನಾವು ತುಂಬಾ ದಿನ ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೀಗಾಗಿ ದಕ್ಷಿಣ ಏಷ್ಯಾದಲ್ಲಿ ನಮ್ಮ ಕಾರ್ಯತಂತ್ರ ಬದಲಿಸುವ ಅವಶ್ಯಕತೆ ಇದೆ ಎಂದು ಟ್ರಂಪ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಪಾಕಿಸ್ತಾನ ಮೂಲದ ಉಗ್ರರ ಹಾವಳಿ ನೆರೆ ರಾಷ್ಟ್ರಗಳಿಗೂ ಪಸರಿಸುತ್ತಿದ್ದು, ಇದರಿಂದ ವಿಶ್ವದ ಭದ್ರತೆ ದೊಡ್ಡ ಪ್ರಶ್ನೆಯಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್ ಪ್ರಸ್ತುತ ಸನ್ನಿವೇಶಗಳಲ್ಲಿ ಆಫ್ಘಾನಿಸ್ತಾನದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂತೆಯೇ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತ ನೆರವು ಅಗತ್ಯ ಎಂದು ಹೇಳಿರುವ ಟ್ರಂಪ್, ಆಫ್ಘಾನಿಸ್ತಾನದಲ್ಲಿ ಭದ್ರತಾ ಸ್ಥಿರತೆಗೆ ಭಾರತದ ಕೊಡುಗೆ ಅಪಾರವಾಗಿದೆ. ಅಂತೆಯೇ ಭಾರತ ಮತ್ತು ಅಮರಿಕ ದೇಶಗಳ ನಡುವೆ ಶತಕೋಟಿ ಡಾಲರ್ ಗಳ ಮೌಲ್ಯದ ವಾಣಿಜ್ಯ ವಪಿವಾಟು ನಡೆಯುತ್ತಿದ್ದು, ಇದು ಉಭಯ ದೇಶಗಳ ಸ್ನೇಹಕ್ಕೆ ಮಾದರಿಯಾಗಿದೆ. ಇದೇ ಕಾರಣಕ್ಕಾಗಿ ಭಾರತದ ಆಫ್ಘಾನಿಸ್ತಾನದಲ್ಲಿ ಆರ್ಥಿಕ ಮತ್ತು ಅಭಿವೃದ್ಧಿಗೆ ನೆರವು ನೀಡುವಂತೆ ಕೋರುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.