ಇಸ್ಲಾಮಾಬಾದ್: ಜಾಗತಿಕ ಉಗ್ರನ ಪರವಾಗಿ ನಿಂತಿರುವ ಪಾಕಿಸ್ತಾನ, ಕಾಶ್ಮೀರದಲ್ಲಿ ಸ್ವಯಂ ನಿರ್ಧಾರದ ಹಕ್ಕಿಗಾಗಿ ಹೋರಾಡುತ್ತಿರುವವರನ್ನು ಬೆಂಬಲಿಸುವ ವ್ಯಕ್ತಿಯನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಿಸಿರುವು ದೊಡ್ಡ ಅನ್ಯಾಯ ಎಂದು ಮಂಗಳವಾರ ಹೇಳಿದೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಕೆಲವೇ ಗಂಟೆಗಳ ಮುನ್ನ ಅಮೆರಿಕ ಪಾಕಿಸ್ತಾನ ಪ್ರಾಯೋಜಿತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಾವುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿತ್ತು.
ಈ ಕುರಿತು ಇಂದು ಪಾಕ್ ವಿದೇಶಾಂಗ ಸಚಿವಾಲಯ ಪ್ರಕಟಣೆ ನೀಡಿದ್ದು, ಸ್ವಯಂ ನಿರ್ಧಾರದ ಹಕ್ಕಿಗಾಗಿ ಹೋರಾಡುತ್ತಿರುವ ಕಾಶ್ಮೀರಿ ಜನತೆಗೆ ಪಾಕಿಸ್ತಾನದ ರಾಜಕೀಯ, ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ಮುಂದುವರೆಯಲಿದೆ ಎಂದು ಹೇಳಿದೆ.
ಕಾಶ್ಮೀರದಲ್ಲಿ ಸ್ವಯಂ ನಿರ್ಧಾರದ ಹಕ್ಕಿಗಾಗಿ ಹೋರಾಡುತ್ತಿರುವವರನ್ನು ಬೆಂಬಲಿಸುವ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವುದು ಸಮರ್ಥನೀಯವಲ್ಲ ಎಂದು ಪಾಕಿಸ್ತಾನ ತನ್ನ ಪ್ರಕಟಣೆಯಲ್ಲಿ ನೇರವಾಗಿ ಸಲಾವುದ್ದೀನ್ ಹೆಸರು ಪ್ರಸ್ತಾಪಿಸದೇ ಉಗ್ರನಿಗೆ ಪರೋಕ್ಷ ಬೆಂಬಲ ನೀಡಿದೆ.