ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿದ ಪಾಕಿಸ್ತಾನ ಗುರುವಾರ ಭಾರತದ ಡೆಪ್ಯುಟಿ ಹೈಕಮಿಷನರ್ ಜೆ ಪಿ ಸಿಂಗ್ ಅವರನ್ನು ಕರೆಯಿಸಿಕೊಂಡು ಖಂಡನೆ ವ್ಯಕ್ತಪಡಿಸಿದೆ.
ಮಹಾ ನಿರ್ದೇಶಕ(ದಕ್ಷಿಣ ಏಷ್ಯಾ ಮತ್ತು ಸಾರ್ಕ್) ಡಾ. ಮೊಹಮ್ಮದ್ ಫೈಸಾಲ್ ಅವರು ಭಾರತ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿರುವುದನ್ನು ಖಂಡಿಸಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ನಿನ್ನೆ ಫುಲಿಯಾನ್ ಸೆಕ್ಟರ್ ನಲ್ಲಿ ಭಾರತೀಯ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ.
ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಮಾಡಿ ದಾಳಿ ನಡೆಸುವುದು ಮಾನವರ ಘನತೆಗೆ ಧಕ್ಕೆಯಾಗಲಿದೆ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳಿಗೆ ಹಾಗೂ ಮಾನವೀಯ ಕಾನೂನುಗಳಿಗೆ ವಿರುದ್ಧವಾಗಿದೆ ಪಾಕ್ ವಿದೇಶಾಂಗ ಸಚಿವಾಲಯ ಹೇಳಿದೆ.