

ನ್ಯೂಯಾರ್ಕ್: ಚೀನಾ ಲ್ಯಾಬ್ ನಲ್ಲಿ ಕೊರೋನಾ ವೈರಸ್ ಸೃಷ್ಟಿಯಾಗಿದೆ ಎಂಬ ಅಮೆರಿಕಾದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಊಹಾತ್ಮಕ ಆರೋಪಗಳಿಗೆ ಸಮರ್ಪಕವಾದ ಸಾಕ್ಷ್ಯಾಧಾರಗಳಿಲ್ಲ ಎಂದು ಡಬ್ಲ್ಯು ಹೆಚ್ಒ ಹೇಳಿದೆ. ಈ ಮೂಲಕ ಕೊರೋನಾಗೆ ಸಂಬಂಧಿಸಿದಂತೆ ಅಮೆರಿಕ-ವಿಶ್ವಸಂಸ್ಥೆ ನಡುವೆ ನಡೆಯುತ್ತಿದ್ದ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ.
ಕೊರೋನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಸೃಷ್ಟಿಯಾಗಿದ್ದು ಎಂಬುದಕ್ಕೆ ಅಮೆರಿಕ ಈ ವರೆಗೂ ಸ್ಪಷ್ಟ ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾ ಹೇಳುತ್ತಿರಿವ ಕೊರೋನಾ ಜನ್ಮ ರಹಸ್ಯ ಈ ವರೆಗೂ ಊಹಾತ್ಮಕವಾಗಿಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಅಗತ್ಯತೆಗಳ ವಿಭಾಗದ ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾದ ವೈರಾಣು ಎಂದು ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ. ಇತ್ತೀಚೆಗೆ ಕೊರೋನಾ ಸೃಷ್ಟಿಯಾಗಿದ್ದು ಹೇಗೆ ಎಂಬ ಬಗ್ಗೆ ಅಮೆರಿಕ ಸರ್ಕಾರ ತನಿಖೆಯನ್ನೂ ಪ್ರಾರಂಭಿಸಿದ್ದಾಗಿ ಅಧ್ಯಕ್ಷರು ಹೇಳಿದ್ದರು.