

ನ್ಯೂಯಾರ್ಕ್ (ಅಮೆರಿಕ): RSS ಸ್ಥಾಪನೆಯ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಮತ್ತು ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ, ಭಾಗವತ್ ಅವರು, ಅಮೆರಿಕದ ಅಹೆಡ್ ಫೋರಂ ವತಿಯಿಂದ ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ ಸಮಾವೇಶದಲ್ಲಿ ಭಾಗಹವಹಿಸಲಿದ್ದಾರೆ. ಆದರೆ, ಈ ಕಾರ್ಯಕರ್ಮಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿರುವ, ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಾಮ್ದಾನಿ, ನಾನು ಈ ರ‍್ಯಾಲಿಯನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದರೊಂದಿಗೆ, ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಅದನ್ನು ರದ್ದುಗೊಳಿಸಲು ನಗರ ಆಡಳಿತಕ್ಕೆ ಸಂಪೂರ್ಣ ಕಾನೂನು ಅಧಿಕಾರ ಇಲ್ಲದಿರುವುದು ಬೇಸರ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಝೋಹ್ರಾನ್ ಮಾಮ್ದಾನಿ ಹೇಳಿದ್ದೇನು?
ಆರ್‌ಎಸ್‌ಎಸ್ ಸಂಘಟನೆಯ ಎಲ್ಲರನ್ನೂ ಒಳಗೊಳ್ಳದ ಪ್ರತ್ಯೇಕತಾವಾದಿ ದೃಷ್ಟಿಕೋನ ತಮಗೆ ತೀವ್ರ ಕಳವಳ ಉಂಟುಮಾಡಿದೆ ಎಂದ ಮಾಮ್ದಾನಿ, ನನ್ನ ಕುಟುಂಬ ನನಗೆ ಕಲಿಸಿದ ಮತ್ತು ನಾನು ಬೆಳೆದು ಬಂದ ಭಾರತದ ಕಲ್ಪನೆ ಎಂದರೆ ಅದು ಬಹುತ್ವದ ಸಮಾಜ ಹಾಗೂ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಸ್ಥಾನಮಾನ ನೀಡುವ ಜಾತ್ಯತೀತ ಗಣರಾಜ್ಯ. ಆದರೆ, ಆರ್‌ಎಸ್‌ಎಸ್‌ನ ಸಿದ್ಧಾಂತಗಳು ಈ ತತ್ವಕ್ಕೆ ವಿರುದ್ಧವಾಗಿವೆ ಎಂದು ತಿಳಿಸದರು.
ಮುಂದುವರೆದು, ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಅದನ್ನು ರದ್ದುಗೊಳಿಸಲು ನಗರ ಆಡಳಿತಕ್ಕೆ ಸಂಪೂರ್ಣ ಕಾನೂನು ಅಧಿಕಾರ ಇಲ್ಲದಿರುವುದನ್ನು ಮೇಯರ್ ಒಪ್ಪಿಕೊಂಡಿದ್ದಾರೆ. ಅದರಂತೆ, ಇದು ಸಂಪೂರ್ಣವಾಗಿ ಖಾಸಗಿಯಾಗಿ ಆಯೋಜಿಸಲಾದ ಕಾರ್ಯಕ್ರಮವಾಗಿರುವುದರಿಂದ, ಅದನ್ನು ರದ್ದುಗೊಳಿಸುವ ಕಾನೂನು ವ್ಯಾಪ್ತಿ ಅಥವಾ ಹಕ್ಕು ನ್ಯೂಯಾರ್ಕ್ ನಗರ ಸರ್ಕಾರಕ್ಕೆ ಇಲ್ಲದಿರಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏನಿದು ಕಾರ್ಯಕ್ರಮ?
ಕೃತಕ ವಿಭಜನೆಗಳನ್ನು ಮೀರಿ ಇಡೀ ಜಗತ್ತನ್ನು ಒಂದೇ ಕುಟುಂಬ ಎಂದು ಪರಿಗಣಿಸುವ ಜಾಗತಿಕ ಸಾಮರಸ್ಯದ ಸಂದೇಶದೊಂದಿಗೆ, ಅಮೆರಿಕದ ಅಹೆಡ್ ಫೋರಂ ವತಿಯಿಂದ ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ ಹೆಸರಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಅದರಲ್ಲೂ, ಆರ್‌ಎಸ್‌ಎಸ್ ಸ್ಥಾಪನೆಯ ಶತಮಾನೋತ್ಸವದ (100ನೇ ವರ್ಷ) ಅಂಗವಾಗಿ ಹಮ್ಮಿಕೊಳ್ಳಲಾದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಮತ್ತು ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆಯೇ, ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುಮಾರು 5,000 ಅನಿವಾಸಿ ಭಾರತೀಯರು ಭಾಗವಹಿಸುವ ನಿರೀಕ್ಷೆಯಿದೆ.
ಮತ್ತೊಂದೆಡೆ, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಸೇರಿದಂತೆ ಹಲವು ಸಂಸ್ಥೆಗಳು ಈ ಐತಿಹಾಸಿಕ ವೇದಿಕೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಆಡಳಿತ ಮಂಡಳಿಯನ್ನು ಒತ್ತಾಯಿಸಿವೆ.