

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಮನಸಾರೆ ಕೊಂಡಾಡಿ ಹೃದಯಪೂರ್ವಕ ಧನ್ಯವಾದ ಹೇಳಿದ್ದಾರೆ. ಉಭಯ ನಾಯಕರ ಕಳೆದ ರಾತ್ರಿಯ ಔತಣಕೂಟಕ್ಕೆ ಮುನ್ನ ಭಾರತೀಯ ಪರಂಪರೆಯ ಉಡುಪನ್ನು ಧರಿಸಿದಕ್ಕಾಗಿ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿವೆ.
ತಮ್ಮ ಎಕ್ಸ್ ಖಾತೆಯಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಿದ ಬೆಂಜಮಿನ್ ನೆತನ್ಯಾಹು, “ನಮ್ಮ ಭೋಜನಕ್ಕೂ ಮುನ್ನ, ನಾನು ಪರಂಪರಾಗತ ಭಾರತೀಯ ಉಡುಪನ್ನು ಧರಿಸುವ ಮೂಲಕ ನನ್ನ ಸ್ನೇಹಿತ ಪ್ರಧಾನಮಂತ್ರಿ ಮೋದಿ ಅವರಿಗೆ ಅಚ್ಚರಿ ಮೂಡಿಸಿದೆ,” ಎಂದು ಬರೆದಿದ್ದಾರೆ.
ಈ ಸ್ನೇಹಪೂರ್ಣ ನಡೆಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಮೋದಿ, X ನಲ್ಲಿ ಪ್ರತಿಕ್ರಿಯಿಸಿ, “ಅತ್ಯಂತ ಅದ್ಭುತ! ಭಾರತೀಯ ಉಡುಪಿನ ಮೇಲಿನ ನಿಮ್ಮ ಅಭಿರುಚಿ ನಮ್ಮ ದೇಶದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಗಳ ಮೇಲಿನ ನಿಮ್ಮ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ನಿನ್ನೆ ಬುಧವಾರ ಇಸ್ರೇಲ್ ಸಂಸತ್ತು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಸರ್ಕಾರ Medal of the Knesset ಪ್ರದಾನ ಮಾಡಿ ಗೌರವಿಸಿದೆ. ಈ ಗೌರವವನ್ನು ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಿದ್ದಾರೆ. ಇದು ಇಸ್ರೇಲ್ ಸರ್ಕಾರದ ಅತ್ಯುನ್ನತ ಗೌರವವಾಗಿದೆ.
ಭಾರತ ಮತ್ತು ಇಸ್ರೇಲ್ ನಡುವಿನ ತಂತ್ರಜ್ಞಾನದ ಹಾಗೂ ರಣತಂತ್ರದ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಧಾನಮಂತ್ರಿ ಮೋದಿಯವರ ವೈಯಕ್ತಿಕ ನಾಯಕತ್ವದ ಮೂಲಕ ನೀಡಿದ ವಿಶಿಷ್ಟ ಕೊಡುಗೆಗೆ ಗೌರವವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಮಂತ್ರಿಗಳ ಭಾಷಣದ ನಂತರ ಈ ಪದಕವನ್ನು ನೀಡಲಾಯಿತು.
ಭಾಷಣದ ನಂತರ ಪ್ರಧಾನಮಂತ್ರಿ ಮೋದಿ ಅವರು ನೆಸ್ಸೆಟ್ ಸದಸ್ಯರೊಂದಿಗೆ ಸಂವಾದ ನಡೆಸಿದರು. ಸಂಸದರು ಅವರೊಂದಿಗೆ ಸೆಲ್ಫಿ ಹಾಗೂ ಛಾಯಾಚಿತ್ರಗಳನ್ನು ತೆಗೆದುಕೊಂಡರು. ಭಾಷಣದ ವೇಳೆ ಅವರಿಗೆ ನಿಂತು ಕರತಾಡನದ ಮೂಲಕ ಭರ್ಜರಿ ಸ್ವಾಗತ ದೊರಕಿತು.
Advertisement