ಸಾಮಾನ್ಯವಾಗಿ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಹಿಂದಿನಿಂದಲೂ ಪೋಷಕರು ವಯಸ್ಸಾದ ಮೇಲೆ ತಮ್ಮ ಮಕ್ಕಳ ಆಸರೆಯಲ್ಲಿ ಬದುಕುವುದು ಸಹಜ ಎಂಬ ನಂಬಿಕೆ ಇತ್ತು. ಅವಿಭಕ್ತ ಕುಟುಂಬ ಪದ್ಧತಿ ಚಾಲ್ತಿಯಲ್ಲಿದ್ದಾಗ, ಹಲವು ತಲೆಮಾರುಗಳು ಒಟ್ಟಿಗೆ ವಾಸಿಸುತ್ತಿದ್ದವು, ಆದಾಯವನ್ನು ಹಂಚಿಕೊಳ್ಳಲಾಗುತ್ತಿತ್ತು, ಮತ್ತು ಹಿರಿಯರ ಆರೈಕೆಯ ಜವಾಬ್ದಾರಿಯನ್ನು ಎಲ್ಲರೂ ಸೇರಿ ನಿಭಾಯಿಸುತ್ತಿದ್ದರು. ಆದರೆ ಇಂದಿನ ಕಾಲಘಟ್ಟದಲ್ಲಿ, ಬಹುಪಾಲು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಮಾದರಿ ಕ್ರಮೇಣ ಅಪ್ರಾಯೋಗಿಕವಾಗುತ್ತಿದೆ, ನಂಬಲರ್ಹವೂ ಆಗಿ ಉಳಿದಿಲ್ಲ. ಇದಕ್ಕೆ ಕಾರಣಗಳೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ:
ಶಿಕ್ಷಣದ ಬೆನ್ನೇರಿ ಅಪ್ಪ-ಅಮ್ಮನಿಂದ ದೂರವಾಗುತ್ತಿರುವ ಮಕ್ಕಳು!
ನಗರೀಕರಣ, ಉತ್ತಮ ಉದ್ಯೋಗಾವಕಾಶಗಳು ಮತ್ತು ಶಿಕ್ಷಣದ ಬೆನ್ನೇರಿ ಅವಿಭಕ್ತ ಕುಟುಂಬ ವ್ಯವಸ್ಥೆಗಳು ಕಡಿಮೆ ಆಗುತ್ತಿದೆ. ಯಾಕಂದ್ರೆ, ಉತ್ತಮ ಶಿಕ್ಷಣ ಪಡೆದ ಮಕ್ಕಳು ಕೆಲಸಕ್ಕೆ ಹೆಚ್ಚಾಗಿ ಬೇರೆ ನಗರಗಳಿಗೆ ಅಥವಾ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಅನೇಕ ಹಿರಿಯ ನಾಗರಿಕರು ಒಬ್ಬಂಟಿಯಾಗಿ ಅಥವಾ ಕೇವಲ ಪತಿ-ಪತ್ನಿ ಇಬ್ಬರೇ ವಾಸಿಸುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಮಕ್ಕಳಿಗೆ ಸಹಾಯ ಮಾಡುವ ಮನಸ್ಸಿದ್ದರೂ, ಅವರು ದೂರದಲ್ಲಿ ವಾಸಿಸುತ್ತಿರುವಾಗ ದೈನಂದಿನ ಆರೈಕೆ, ಭಾವನಾತ್ಮಕ ಬೆಂಬಲ ಅಥವಾ ಎಮರ್ಜೆನ್ಸಿ ಹಣದ ಸಹಾಯ ಮಾಡುವುದು ಕಷ್ಟಕರವಾಗುತ್ತದೆ.
ಕಡಿಮೆ ಜನ ಆದ್ರೆ ಹೆಚ್ಚು ಜವಾಬ್ದಾರಿ!
ಭಾರತದ ಒಟ್ಟು ಫ಼ರ್ಟಿಲಿಟಿ ರೇಟ್ ಈಗ ಸುಮಾರು 2.0ಕ್ಕೆ ಇಳಿದಿದೆ. ಹೌದು, ಒಂದು ಕಾಲದಲ್ಲಿ ನಾಲ್ಕೈದು ಮಕ್ಕಳಿದ್ದ ಕುಟುಂಬಗಳ ಬದಲಿಗೆ, ಇಂದು ಬಹುತೇಕ ದಂಪತಿಗಳಿಗೆ ಒಂದು ಅಥವಾ ಎರಡು ಮಕ್ಕಳಷ್ಟೇ ಇರುತ್ತಾರೆ. ಇದರೊಂದಿಗೆ ಮಕ್ಕಳ ಸಂಖ್ಯೆ ಕಡಿಮೆಯಾದಂತೆ, ಪ್ರತಿಯೊಬ್ಬ ಮಗುವಿನ ಮೇಲಿನ ಆರ್ಥಿಕ ಮತ್ತು ಆರೈಕೆಯ ಹೊರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತದೆ.
ಸ್ಯಾಂಡ್‌ವಿಚ್ ಜನರೇಷನ್
ಇಂದಿನ ಮಧ್ಯವಯಸ್ಕರು (ಸುಮಾರು 35–55 ವರ್ಷ ವಯಸ್ಸಿನವರು) ತಮ್ಮ ವಯಸ್ಸಾದ ಪೋಷಕರು ಮತ್ತು ತಮ್ಮ ಸ್ವಂತ ಮಕ್ಕಳ ಶಿಕ್ಷಣ, ಮದುವೆ ಹಾಗೂ ವಸತಿ ಎರಡನ್ನೂ ಆರ್ಥಿಕವಾಗಿ ಬೆಂಬಲಿಸುತ್ತಿದ್ದಾರೆ. ಇದನ್ನೇ ಸ್ಯಾಂಡ್‌ವಿಚ್ ಜನರೇಷನ್ ಎಂದು ಕರೆಯಲಾಗುತ್ತದೆ. ಆದ್ರೆ, ಈ ವೇಳೆ ಅವರು ದೊಡ್ಡ ಮಟ್ಟದಲ್ಲಿ ಕೆಲ ಸವಾಲುಗಳನ್ನ ಎದುರಿಸುತ್ತಿದ್ದಾರೆ. ಅವುಗಳು:
ಗೃಹ ಸಾಲ ಮತ್ತು ಕಾರು ಸಾಲಗಳ ಮೇಲಿನ ಹೆಚ್ಚಿನ ಇಎಂಐಗಳು (EMI)
ಮಕ್ಕಳ ಶಿಕ್ಷಣ ವೆಚ್ಚದಲ್ಲಿ ಏರಿಕೆ (ವಿಶೇಷವಾಗಿ ವಿದೇಶದಲ್ಲಿದ್ದರು)
ಅವರ ಸ್ವಂತ ನಿವೃತ್ತಿ ಉಳಿತಾಯ ಗುರಿಗಳು
ವೈದ್ಯಕೀಯ ವೆಚ್ಚಗಳು
ಹೌದು, ತಿಂಗಳಿಗೆ ₹1–1.5 ಲಕ್ಷ ಗಳಿಸುವ ಅನೇಕ ಮಧ್ಯಮ ವರ್ಗದ ಕುಟುಂಬಗಳಲ್ಲಿ, ಇತರೆ ಮೂಲಭೂತ ವೆಚ್ಚಗಳು ಮತ್ತು EMIಗಳ ನಂತರ ಪೋಷಕರನ್ನು ಬೆಂಬಲಿಸಲು ಬಹಳ ಕಡಿಮೆ ಹಣ ಉಳಿಯುತ್ತಿದೆ.
ಗಗನಕ್ಕೇರುತ್ತಿರುವ ಆರೋಗ್ಯ ವೆಚ್ಚಗಳು
ಪ್ರಸ್ತುತ ಜನರ ಆಯುಷ್ಯ ಗಮನಾರ್ಹವಾಗಿ ಹೆಚ್ಚಾಗಿದೆ. ಅದರಂತೆ, ಈಗ ನಿವೃತ್ತಿಯ ನಂತರದ ಜೀವನ 30 ವರ್ಷಗಳವರೆಗೂ ಮುಂದುವರಿಯಬಹುದು. ಅದೇ ಸಮಯದಲ್ಲಿ, ಭಾರತದಲ್ಲಿ ವೈದ್ಯಕೀಯ ಹಣದುಬ್ಬರ ವಾರ್ಷಿಕ ಶೇಕಡ 12ರಿಂದ 14ರಷ್ಟಿದೆ. ಅಂದ್ರೆ, ಒಂದು ಗಂಭೀರ ಕಾಯಿಲೆ ಅಥವಾ ಶಸ್ತ್ರಚಿಕಿತ್ಸೆಗೆ ಹಲವು ಲಕ್ಷ ರೂಪಾಯಿ ಖರ್ಚಾಗಬಹುದು. ಅದರಲ್ಲೂ, ಒಂದೇ ಮಗುವಿದ್ದರೆ, ಅವರ ಸಂಬಳವು ಅನೇಕ ವರ್ಷಗಳ ಕಾಲ ಇಬ್ಬರು ಪೋಷಕರ ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಭರಿಸಲಾರದು. ಜೊತೆಗೆ ಇದೆ ವೇಳೆ ಅವರ ಕುಟುಂಬದ ಅಗತ್ಯಗಳನ್ನು ಸಹ ನಿಭಾಯಿಸಲು ಸಾಧ್ಯವಾಗುವುದಿಲ್ಲ.
ಬದಲಾಗುತ್ತಿದೆ ಸಾಮಾಜಿಕ ಮತ್ತು ಆರ್ಥಿಕ ವಾಸ್ತವ
ಇಂದಿನ ಯುವ ಜನಾಂಗ ತಮ್ಮ ವೃತ್ತಿಜೀವನ, ಜೀವನಶೈಲಿ ಮತ್ತು ಸ್ವಂತ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜೊತೆಗೆ ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿರುವುದರಿಂದ, ಪೋಷಕರ ಆರೈಕೆಗೆ ಸಮಯ ಕಡಿಮೆಯಾಗುತ್ತದೆ. ಇದರೊಂದಿಗೆ ಅನೇಕ ಯುವ ವೃತ್ತಿಪರರು ಶಿಕ್ಷಣ ಸಾಲದ ಹೊರೆ ಹೊತ್ತಿದ್ದಾರೆ, ಗಿಗ್ ಆರ್ಥಿಕತೆಯಲ್ಲಿ ಉದ್ಯೋಗ ಅಸ್ಥಿರತೆ ಎದುರಿಸುತ್ತಿದ್ದಾರೆ, ಅಥವಾ ದೊಡ್ಡ ಆಕಾಂಕ್ಷೆಗಳನ್ನು ಹೊಂದಿದ್ದಾರೆ. ಹಾಗಾಗಿ, ಹೆಚ್ಚಿನ ಮಕ್ಕಳು ಪೋಷಕರ ನಿವೃತ್ತಿಯ ನಂತರವೂ ಅವರನ್ನ ಬೆಂಬಲಿಸಲು ಬಯಸಿದರೂ, ಗಮನಾರ್ಹ ವೈಯಕ್ತಿಕ ತ್ಯಾಗವಿಲ್ಲದೆ ಅದನ್ನು ಮಾಡಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ.
ಕಾನೂನು ರಕ್ಷಣೆ ಅಸ್ತಿತ್ವದಲ್ಲಿದ್ದರೂ...
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ಪ್ರಕಾರ, ಮಕ್ಕಳು ತಮ್ಮ ಪೋಷಕರನ್ನು ನೋಡಿ ಕೊಳ್ಳುವುದು ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ಜೊತೆಗೆ ನ್ಯಾಯಮಂಡಳಿಗಳು ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಜೀವನಾಂಶ ನೀಡಲು ಆದೇಶಿಸಬಹುದು. ಆದರೆ, ಅನೇಕ ಪ್ರಕರಣಗಳಲ್ಲಿ ಇದರ ಜಾರಿ ದುರ್ಬಲವಾಗಿದೆ. ವಿಚಾರಣಾ ಪ್ರಕ್ರಿಯೆ ನಿಧಾನವಾಗಿದ್ದು, ಮಾನಸಿಕವಾಗಿ ಬಳಲಿಸುವಂತಹದ್ದಾಗಿದೆ. ಜೊತೆಗೆ ಅನೇಕ ಪೋಷಕರು ಸಾಮಾಜಿಕ ಕಳಂಕ ಮತ್ತು ಕೌಟಂಬಿಕ ಸಂಬಂಧ ಇನ್ನಷ್ಟು ಹದಗೆಡುವ ಭಯದಿಂದ ನ್ಯಾಯಾಲಯಕ್ಕೆ ಹೋಗಲು ಇಷ್ಟಪಡುವುದಿಲ್ಲ.
ಮಕ್ಕಳು ಪ್ರೀತಿ, ಭಾವನಾತ್ಮಕ ಬೆಂಬಲ ಮತ್ತು ಕೆಲವು ಆರ್ಥಿಕ ನೆರವು ನೀಡಬಹುದು, ಮತ್ತು ಸಾಮಾನ್ಯವಾಗಿ ನೀಡುತ್ತಾರೆ ಕೂಡ. ಆದರೆ ಆಧುನಿಕ ಜೀವನಶೈಲಿಯಲ್ಲಿ ಅವರನ್ನೇ ನಿಮ್ಮ ಸಂಪೂರ್ಣ ನಿವೃತ್ತಿ ಯೋಜನೆಯಾಗಿ ನಿರೀಕ್ಷಿಸುವುದು ಅವಾಸ್ತವಿಕ. ಅದರಂತೆ, ಅತ್ಯಂತ ವಿಶ್ವಾಸಾರ್ಹ ಯೋಜನೆ ಎಂದರೆ ನೀವೇ ನಿರ್ಮಿಸಿಕೊಳ್ಳುವ ಯೋಜನೆ. ಇದೇ ಕಾರಣಕ್ಕೆ ಸರ್ಕಾರ ಸ್ವಂತ ಉಳಿತಾಯದ ಮೂಲಕ ನಿವೃತ್ತಿ ಯೋಜನೆ ರೂಪಿಸಿಕೊಳ್ಳುವಂತೆ ಬಲವಾಗಿ ಪ್ರೋತ್ಸಾಹಿಸುತ್ತಿದೆ. ಅದರಂತೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಮ್ಯೂಚುವಲ್ ಫಂಡ್ SIPಗಳು, EPF + PPF, ಆರೋಗ್ಯ ವಿಮೆ ಯಂತವುಗಳಲ್ಲಿ ಮುಂಚಿತವಾಗಿ ಹೂಡಿಕೆ ಮಾಡಿದ ಹಲವು ಪೋಷಕರು ಇಂದು ವೃದ್ಧಾಪ್ಯದಲ್ಲಿ ಘನತೆ ಮತ್ತು ಸ್ವಾವಲಂಬನೆಯಿಂದ ಬದುಕುತ್ತಿದ್ದಾರೆ, ಜೊತೆಗೆ ತಮ್ಮ ಮಕ್ಕಳ ಮೇಲಿನ ಆರ್ಥಿಕ ಹೊರೆಯನ್ನೂ ಕಡಿಮೆಗೊಳಿಸಿದ್ದಾರೆ.