ಅಂಕಣಗಳು

ಪಾಸಿಟಿವ್ ಸೈಕಾಲಜಿ: ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳುವುದು ಹೇಗೆ? (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್

ಕೆಲವರಿರುತ್ತಾರೆ ನಿರಾಶಾವಾದಿಗಳು. ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ, ತಮ್ಮ ಉದ್ಯೋಗದ ಬಗ್ಗೆ, ತಮ್ಮ ಧರ್ಮದ ಬಗ್ಗೆ, ತಮ್ಮ ಊರು-ಕೇರಿ ದೇಶದ ಬಗ್ಗೆ, ಅವರಿಗೆ ಕೀಳರಿಮೆ. ಬರೀ ನೆಗೆಟಿವ್ ಆಲೋಚನೆ-ಅಭಿಪ್ರಾಯಗಳೇ.

ಉದಾಹರಣೆಗೆ ನಾನು ಸುಂದರವಾಗಿಲ್ಲ, ನನಗೆ ಬುದ್ಧಿ ಕಡಿಮೆ, ವ್ಯವಹಾರ ಜ್ಞಾನವಿಲ್ಲ. ನಾನು ಓದಿದ್ದು ಕಡಿಮೆ. ಇನ್ನಷ್ಟು ಓದಬಹುದಿತ್ತು. ನನ್ನ ಪ್ರಾರಬ್ಧಕರ್ಮ. ಇಂತಹ ಗಂಡ/ ಹೆಂಡತಿ ದೊರಕಿದ್ದಾನೇ/ಳೆ. ನಾನು ಮಾಡುವ ಉದ್ಯೋಗ ಚೆನ್ನಾಗಿಲ್ಲ. ಸಂಬಳ ಸವಲತ್ತುಗಳು ಕಡಿಮೆ. ತಾಫೆದಾರರಿ ಕೆಲಸ. ಮೇಲಧಿಕಾರಿಯನ್ನು ಮೆಚ್ಚಿಸಲು ಸಾಧ್ಯವಿಲ್ಲ. 
ಸಹೋದ್ಯೋಗಿಗಳೆಲ್ಲ ಘಾತುಕರು. ನಂಬಿಕೆಗೆ ಅರ್ಹರಲ್ಲ. ನನ್ನ ಕೈಕೆಳಗೆ ಕೆಲಸ ಮಾಡುವವರು ಖದೀಮರು, ಮೈಗಳ್ಳರು. ನಾನಿರುವ ಸ್ಥಳಚೆನ್ನಾಗಿಲ್ಲ. ಒಂದು ಒಳ್ಳೆಯ ಪಾರ್ಕಿಲ್ಲ. ನೋಡುವಂತಹ ಕಟ್ಟಡವಿಲ್ಲ ನಾನು ಏಕಾದರೂ ಈ ದೇಶದಲ್ಲಿ ಹುಟ್ಟಿದೆನೋ. ಯಾರೂ ಪ್ರಾಮಾಣಿಕರಲ್ಲ.

ಎಲ್ಲರೂ ಮೋಸ ವಂಚನೆ ಮಾಡಲು ಕಾದುಕೊಂಡು ಕುಳಿತಿದ್ದಾರೆ. ಏಮಾರಿಸಿ ಟೋಪಿ ಹಾಕಿ ಬಿಡುತ್ತಾರೆ. ನಮ್ಮ ಧರ್ಮ ಜಡ್ಡುಗಟ್ಟಿದೆ. ಬರಿ ಮೂಢನಂಬಿಕೆಗಳು. ಕಂದಾಚಾರಗಳು. ಆ ಪೂಜೆ ಮಾಡಿಸಿ. ಶಾಂತಿ ಹೋಮ ಮಾಡಿಸಿ ಎಂದು ತಲೆಸವರಿ ಹಣ ಕೀಳಲು ಪೂಜಾರಿಗಳು ರೆಡಿ ಇದ್ದಾರೆ. ನಾವು ಶ್ರದ್ಧೆಯಿಂದ ಹೋಗುತ್ತೇವೆ ಆದರೆ ಅವರಿಗೆ ಶ್ರದ್ಧೆ ಇಲ್ಲ. ಕಾಟಾಚಾರಕ್ಕೆ ಪೂಜೆ ಮಾಡುತ್ತಾರೆ. 

ಈ ಪ್ರಸಕ್ತ ಕಾಲದಲ್ಲಿ ಯಾವುದು ಸರಿ ಇಲ್ಲ. ಎಲ್ಲಾ ಹದಗೆಟ್ಟಿದೆ ಯಾವ ಇಲಾಖೆಯಲ್ಲೂ ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಲಂಚವಿಲ್ಲದೆ ನಮ್ಮ ಕೆಲಸ ಮಾಡಿಕೊಡುವುದಿಲ್ಲ. ಯಾವುದೇ ಕಛೇರಿಗೆ ಹೋಗಿ ಕೂತುಕೊಳ್ಳಿ ಎನ್ನುವುದಿಲ್ಲ. ಸೌಜನ್ಯದ ಒಂದು ಮಾತನಾಡುವುದಿಲ್ಲ. 

ನಮ್ಮದು ದರಿದ್ರ ದೇಶ. ಒಳ್ಳೆಯ ಸಂಪನ್ಮೂಲವಿದೆ. ಆದರೆ ಭಂಡ ಜನ. ಸೋಮಾರಿ ಜನ ಕಟ್ಟುವುದನ್ನು ಬಿಟ್ಟು ಕೆಡಹಲು ಸಿದ್ಧವಾಗಿರುತ್ತಾರೆ. ಯಾವುದೇ ಊರಿಗೆ ಹೋಗಿ, ಕಂಡಕಂಡ ಕಡೆಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಕಸ ಎಸೆಯುತ್ತಾರೆ. ಸ್ವಚ್ಛತೆಯ ಸೊಲ್ಲೇ ಇಲ್ಲ.

ಯಾವುದೇ ಆಸ್ಪತ್ರೆಗೆ ಹೋಗಿ. ನಿಮ್ಮ ಪರ್ಸ್ ಮೇಲ್ಲೇ ವೈದ್ಯರ ಕಣ್ಣು, ತಪ್ಪು ತಪ್ಪು ರೋಗ ವಿಧಾನ ಮಾಡಿ, ಅನವಶ್ಯಕ ತಪಾಸಣೆ ಮಾಡಿಸಿ, ಹೆಚ್ಚು ಔಷಧಗಳನ್ನು ಬರೆದು ಪ್ರಾಣ ಹಿಂಡುತ್ತಾರೆ… ಇತ್ಯಾದಿ ಇತ್ಯಾದಿ ಈ ಎಲ್ಲಾ ಹೇಳಿಕೆಗಳು ಸ್ವಲ್ಪಮಟಗೆ ನಿಜವಿರಬಹುದು. ಆದರೆ ಅದನ್ನು ಎಲ್ಲರಿಗೆ ಎಲ್ಲ ಸಂದರ್ಭದಲ್ಲಿ ಅನ್ವಯಿಸಲು ಬರುವುದಿಲ್ಲ ಅನ್ವಯಿಸಲೂ ಬಾರದು.

ನಕಾರಾತ್ಮಕ ಆಲೋಚನೆಗಳಿಂದ ಉಂಟಾಗುವ ಸಮಸ್ಯೆಗಳು:

  1. ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ನಮ್ಮ ಬಗ್ಗೆ ಕೀಳರಿಮೆ ಬೆಳೆಯುತ್ತದೆ.
  2. ಧೈರ್ಯ ಮಾಯವಾಗಿ ಆತಂಕ ಭಯ ಮನೆಮಾಡುತ್ತದೆ. ಈ ಆತಂಕ ಭಯದಿಂದ ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿ ಕುಗ್ಗಿ ಹೋಗುತ್ತದೆ.
  3. ಕಷ್ಟ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇದ್ದರೂ ಅದನ್ನು ನಾವು ಬಳಸಲು ಆಗುವುದಿಲ್ಲ.
  4. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ನಾವು ನಿರಾಕರಿಸುತ್ತೇವೆ, ಸೋಲುವ ಭಯ ನಮ್ಮನ್ನು ಕಾಡುತ್ತದೆ ಪ್ರಯತ್ನ ಮಾಡದೇ ಸೋಲನ್ನು ಒಪ್ಪಿಕೊಳ್ಳಲು ನಾವು ತಯಾರಾಗುತ್ತೇವೆ.
  5. ಸಂತೋಷ ಸಂಭ್ರಮ ಪಡುವ ಸಮಯ ಸಂದರ್ಭಗಳಲ್ಲೂ ನಾವು. ವಿಷಣ್ಣ ವದನರಾಗಿ, ಸಂತೋಷ-ಸಂಭ್ರಮದಿಂದ ವಂಚಿತರಾಗುತ್ತೇವೆ. ಉತ್ಸಾಹ- ಉಲ್ಲಾಸ- ಕುತೂಹಲಗಳು ಕಮರಿ ಹೋಗುತ್ತವೆ. ಅದನ್ನು ಕಂಡ ನಮ್ಮ ಮಕ್ಕಳು ವಿಷಣ್ಣ ವದನರಾಗುತ್ತಾರೆ.

ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಹೇಗೆ?:

  1. ನಿಮ್ಮನಿಮ್ಮ ಕುಟುಂಬದವರ ಒಳ್ಳೆಯ ಗುಣಗಳನ್ನು, ಅವರ ಶಕ್ತಿ ಸಾಮರ್ಥ್ಯವನ್ನು, ಸಾಧನೆ ಚಿಕ್ಕದಿರಲಿ, ಮಧ್ಯಮ ಮಟ್ಟದಲ್ಲಿರಲಿ, ಗುರುತಿಸಿ ಶ್ಲಾಘಿಸಿ.
  2. ಜೀವನದಲ್ಲಿ ಕಷ್ಟ-ಸುಖ, ನೋವು-ನಲಿವು, ಲಾಭ –ನಷ್ಟ, ಸನ್ಮಾನ- ಅವಮಾನ ಯಾವಾಗ ಎಷ್ಟು ಬರುತ್ತೆ, ಎಷ್ಟು ಸಲ ಪುನರಾವರ್ತನೆ ಆಗುತ್ತೆ ಗೊತ್ತಿಲ್ಲ. ಚಕ್ರದೋಪಾದಿಯಲ್ಲಿ ಇವು ಮತ್ತೆ ಮತ್ತೆ ಘಟಿಸುತ್ತಲೇ ಇರುತ್ತವೆ. ಕಷ್ಟ ನಷ್ಟ ನೋವು ಅವಮಾನವಾದಾಗ ಅವು ಕ್ಷಣಿಕ ಎಂದುಕೊಳ್ಳಿ. ರಾತ್ರಿಯಾದ ಮೇಲೆ ಹಗಲು ಬರಲೇ ಬೇಕು. ಗ್ರಹಣ ಹಿಡಿದರೆ ಅದು ಬಿಡಲೇಬೇಕು. ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂದು ಹೇಳಿಕೊಳ್ಳಿ. ವಾಸ್ತವಿಕ ಪ್ರಜ್ಞೆ ಇರಲಿ.
  3. ನಿಮ್ಮಲ್ಲಿ ನಿಮ್ಮ ಕುಟುಂಬದಲ್ಲಿ, ನಂಬಿಕೆ ಇಡಿ, ಪರಸ್ಪರ ಸಹಕಾರ ಸಲಹೆಗಳಿಂದ ಯಾವುದೇ ಜವಾಬ್ದಾರಿ -ಸಮಸ್ಯೆಯನ್ನು ನಿಭಾಯಿಸಬಲ್ಲೆ ಎಂದು ಹೇಳಿಕೊಳ್ಳಿ. ನಾನು ಮಾಡಬಲ್ಲೆ, ಜಯಿಸಬಲ್ಲೆ, ಗುರಿ ಮುಟ್ಟ ಬಲ್ಲೆ, ಎಂಬ ಆಶಾವಾದ ಸದಾ ನಿಮ್ಮಲ್ಲಿರಲಿ.
  4. ಬೇಸರ, ನಿರಾಶೆ ಹತಾಶೆಯಾದಾಗ, ಮನಸ್ಸಿನ ಗಮನವನ್ನು ಸಂಗೀತ, ಒಳ್ಳೆಯ ಪುಸ್ತಕದ ಓದು, ಪ್ರವಾಸ ಇತ್ಯಾದಿ ಚಟುವಟಿಕೆಗಳತ್ತ ಹರಿಸಿ.
  5. ಮಾನವಾತೀತ ಶಕ್ತಿಯೊಂದಿದೆ. ಅದು ನಿಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳಿ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com

SCROLL FOR NEXT