ಚೀನಾದ ಸರ್ಕಾರಿ ಮಾಧ್ಯಮಗಳ ವರದಿಯ ಪ್ರಕಾರ, ಟಿಬೆಟ್‌ನ ಅತ್ಯಂತ ಉದ್ದದ ನದಿಯಲ್ಲಿ ಬೃಹತ್ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳಲು ಚೀನಾ ಸರ್ಕಾರ ಹಸಿರು ನಿಶಾನೆ ನೀಡಿದೆ. ಚೀನಾದ ಈ ನೂತನ ಯೋಜನೆ, ಚೀನಾದ ತ್ರೀ ಗಾರ್ಜಸ್ ಅಣೆಕಟ್ಟು ಉತ್ಪಾದಿಸುವ ವಿದ್ಯುತ್ತಿನ ಮೂರು ಪಟ್ಟು ವಿದ್ಯುತ್ ಉತ್ಪಾದಿಸುವ ನಿರೀಕ್ಷೆಗಳಿವೆ.
ಚೀನಾದ ಈ ಮಹತ್ತರ ಯೋಜನೆ ಪ್ರತಿವರ್ಷವೂ 300 ಬಿಲಿಯನ್ ಕಿಲೋವ್ಯಾಟ್ ಅವರ್ಸ್ (kWh) ವಿದ್ಯುತ್ ಉತ್ಪಾದಿಸುತ್ತದೆ ಎನ್ನಲಾಗಿದೆ. ಇಷ್ಟೊಂದು ಪ್ರಮಾಣದ ವಿದ್ಯುತ್ 30 ಕೋಟಿಗೂ ಜನರಿಗೆ ಒಂದು ವರ್ಷಕ್ಕೆ ಸಾಕಾಗುತ್ತದೆ. ಇದಕ್ಕೆ ಹೋಲಿಸಿದರೆ, ಪ್ರಸ್ತುತ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆ ಪಡೆದಿರುವ ತ್ರೀ ಗಾರ್ಜಸ್ ಅಣೆಕಟ್ಟು ವರ್ಷಕ್ಕೆ 88.2 ಬಿಲಿಯನ್ kWh ವಿದ್ಯುತ್ ಉತ್ಪಾದಿಸುತ್ತದೆ.
ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಅಂದಾಜು 1 ಟ್ರಿಲಿಯನ್ ಯುವಾನ್‌ಗೂ (ಅಂದಾಜು 137 ಬಿಲಿಯನ್ ಡಾಲರ್) ಹೆಚ್ಚಿನ ಮೊತ್ತ ತಗಲಬಹುದು ಎಂದು ಅಂದಾಜಿಸಲಾಗಿದೆ. ಆ ಮೂಲಕ, ಇದು ಜಗತ್ತಿನ ಅತ್ಯಂತ ವೆಚ್ಚದಾಯಕ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದಕ್ಕೆ ಹೋಲಿಸಿ ನೋಡಿದರೆ, ತ್ರೀ ಗಾರ್ಜಸ್ ಅಣೆಕಟ್ಟಿನ ನಿರ್ಮಾಣಕ್ಕೆ 254.2 ಬಿಲಿಯನ್ ಯುವಾನ್ (ಅಂದಾಜು 34.83 ಬಿಲಿಯನ್ ಡಾಲರ್) ವೆಚ್ಚ ತಗಲಿತ್ತು. ಆದರೆ ಈ ಅಣೆಕಟ್ಟಿನ ನಿರ್ಮಾಣ ಯಾವಾಗ ಆರಂಭವಾಗಲಿದೆ, ಅಥವಾ ಅದನ್ನು ನಿಖರವಾಗಿ ಎಲ್ಲಿ ನಿರ್ಮಿಸಲಾಗುತ್ತದೆ ಎಂಬುದನ್ನು ಹೇಳಿಲ್ಲ.
ಯಾರ್ಲಂಗ್ ತ್ಸಾಂಗ್‌ಪೋ ನದಿ ಟಿಬೆಟಿಯನ್ ಪ್ರಸ್ಥಭೂಮಿಯ ಮೂಲಕ ಸಾಗಿ, ಜಗತ್ತಿನ ಅತ್ಯಂತ ಆಳವಾದ ಕಣಿವೆಯನ್ನು ನಿರ್ಮಿಸುತ್ತದೆ. ಭಾರತಕ್ಕೆ ಹರಿಯುವ ಮುನ್ನ, ಈ ನದಿ 7,667 ಮೀಟರ್ (25,154 ಅಡಿ) ಕೆಳಗಿಳಿಯುತ್ತದೆ. ಅರುಣಾಚಲ ಪ್ರದೇಶದಲ್ಲಿ ಹರಿಯುವಾಗ, ಯಾರ್ಲಂಗ್ ತ್ಸಾಂಗ್‌ಪೋ ನದಿ ಬ್ರಹ್ಮಪುತ್ರಾ ಎಂಬ ಹೆಸರು ಪಡೆಯುತ್ತದೆ.
ಚೀನಾದ ಸರ್ಕಾರಿ ಸ್ವಾಮ್ಯದ ಪವರ್ ಕನ್ಸ್‌ಟ್ರಕ್ಷನ್ ಕಾರ್ಪೋರೇಶನ್ ಆಫ್ ಚೈನಾದ ಅಧ್ಯಕ್ಷರಾಗಿದ್ದ ಯಾನ್ ಜಿ಼ಯಾಂಗ್ ಅವರು 2020ರಲ್ಲಿ ಮಾತನಾಡುತ್ತಾ, ಯಾರ್ಲಂಗ್ ತ್ಸಾಂಗ್‌ಪೋ ನದಿಗೆ ಜಗತ್ತಿನಲ್ಲೆ ಅತ್ಯಧಿಕ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದೆ ಎಂದು ಹೇಳಿಕೆ ನೀಡಿದ್ದರು.
ಈ ನದಿಯ ಕೆಳ ಪಾರ್ಶ್ವ, ಹರಿಯುತ್ತಾ ಹರಿಯುತ್ತಾ 50 ಕಿಲೋಮೀಟರ್‌ಗಳ ಅಂತರದಲ್ಲಿ (31 ಮೈಲಿ) 2,000 ಮೀಟರ್‌ಗಳಿಗೂ ಕೆಳಗೆ ಇಳಿಯುತ್ತದೆ. ಆ ಮೂಲಕ, ಅಂದಾಜು 70 ಮಿಲಿಯನ್ ಕಿಲೋವ್ಯಾಟ್ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಈ ಪ್ರಮಾಣದ ವಿದ್ಯುತ್ 22.5 ಮಿಲಿಯನ್ ಕಿಲೋವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ತ್ರೀ ಗಾರ್ಜಸ್ ಅಣೆಕಟ್ಟಿನ ಸಾಮರ್ಥ್ಯದಿಂದ ಮೂರು ಪಟ್ಟು ಹೆಚ್ಚಾಗಿದೆ.
ಯಾರ್ಲಂಗ್ ತ್ಸಾಂಗ್‌ಪೋ ನದಿಗೆ ಟಿಬೆಟ್‌ನಲ್ಲಿ ನಿರ್ಮಿಸಲು ಪ್ರಯತ್ನಿಸುತ್ತಿರುವ ಈ ಬೃಹತ್ ಅಣೆಕಟ್ಟು ವಿಶಿಷ್ಟವಾದ ಮತ್ತು ಅತ್ಯಂತ ಮುಖ್ಯವಾದ ಇಂಜಿನಿಯರಿಂಗ್ ಸವಾಲುಗಳನ್ನು ಎದುರಿಸಲಿದೆ. ನದಿಯ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾದರೆ, ಟಿಬೆಟ್‌ನಲ್ಲಿರುವ ನಮ್ಚಾ ಬರ್ವಾ ಪರ್ವತದ ಮೂಲಕ 20 ಕಿಲೋಮೀಟರ್ ಉದ್ದನೆಯ, ನಾಲ್ಕರಿಂದ ಐದು ಸುರಂಗಗಳನ್ನು ನಿರ್ಮಿಸಬೇಕಾಗುತ್ತದೆ. ಈ ಸುರಂಗಗಳು ನದಿಯಲ್ಲಿ ಹರಿಯುವ ನೀರಿನ ಅರ್ಧದಷ್ಟು ನೀರನ್ನು (ಪ್ರತಿ ಸೆಕೆಂಡಿಗೆ ಅಂದಾಜು 2,000 ಘನ ಮೀಟರ್) ಬೇರೆಡೆಗೆ ಹರಿಸುತ್ತವೆ.
ಟಿಬೆಟ್‌ನಲ್ಲಿ ಕಾರ್ಯರೂಪಕ್ಕೆ ತರಲಿರುವ ಈ ಯೋಜನೆಗಾಗಿ ಎಷ್ಟು ಜನರನ್ನು ಸ್ಥಳಾಂತರಗೊಳಿಸಬೇಕಾಗಬಹುದು ಎಂದು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಈ ಯೋಜನಾ ತಾಣ ಟೆಕ್ಟಾನಿಕ್ ಪ್ಲೇಟ್ ಬಳಿ ಇದೆ. ಅಂದರೆ, ಇದು ಭೂಮಿಯ ಹೊರಪದರವಾದ ಕ್ರಸ್ಟ್‌ನ ವಿಶಾಲವಾದ ಭಾಗಗಳು ಒಂದನ್ನೊಂದು ಸೇರುವ ಜಾಗವಾಗಿದ್ದು, ಭೂಕಂಪಗಳಿಗೆ ಹೆಚ್ಚಾಗಿ ತುತ್ತಾಗುವ ಸಾಧ್ಯತೆಗಳಿವೆ. ಅದರೊಡನೆ, ಟಿಬೆಟಿಯನ್ ಪ್ರಸ್ಥಭೂಮಿಯ ಭೌಗೋಳಿಕತೆ, ಸುತ್ತಮುತ್ತಲಿನ ಬಯಲುಗಳಿಗಿಂತ ಭಿನ್ನವಾಗಿದೆ.
ಚೀನಾದ ಸರ್ಕಾರಿ ಮಾಧ್ಯಮವಾದ ಕ್ಸಿನ್ಹುವಾ ಪ್ರಕಾರ, ಈ ಜಲವಿದ್ಯುತ್ ಯೋಜನೆ ಪರಿಸರ ಸಂರಕ್ಷಣೆಯ ಉದ್ದೇಶವನ್ನು ಹೊಂದಿದೆ. ಈ ಯೋಜನೆಯನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಉನ್ನತ ಗುಣಮಟ್ಟದಲ್ಲಿ ಕೈಗೊಳ್ಳಲು ಭೂವೈಜ್ಞಾನಿಕ ಅಧ್ಯಯನ ಮತ್ತು ಆಧುನಿಕ ತಂತ್ರಜ್ಞಾನಗಳ ತಳಹದಿಯನ್ನು ಚೀನಾ ಹೊಂದಿದೆ ಎಂದು ಕ್ಸಿನ್ಹುವಾ ಹೇಳಿದೆ. ಚೀನೀ ಮಾಧ್ಯಮದ ಪ್ರಕಾರ, ಈ ಅಣೆಕಟ್ಟು ಸನಿಹದಲ್ಲಿ ಸೌರ ವಿದ್ಯುತ್ ಮತ್ತು ವಾಯುಶಕ್ತಿಯನ್ನು ಬಳಸಲು ನೆರವು ನೀಡಲಿದೆ. ಆ ಮೂಲಕ, ಒಟ್ಟಾರೆ ಪ್ರದೇಶದ ಹಸಿರು ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ಅಣೆಕಟ್ಟು ಕೊಡುಗೆ ನೀಡಲಿದೆ. ವರದಿಯ ಪ್ರಕಾರ, ಹಸಿರು ಇಂಧನ ಮತ್ತು ಕನಿಷ್ಠ ಇಂಗಾಲದ ವಿದ್ಯುತ್ ಶಕ್ತಿಯತ್ತ ಚೀನಾದ ಹೊರಳುವಿಕೆಗೆ ಇದು ಬಹುದೊಡ್ಡ ಹೆಜ್ಜೆಯಾಗಿದೆ.
2020ರಲ್ಲಿ ಬೀಜಿಂಗ್ ಅಣೆಕಟ್ಟು ನಿರ್ಮಿಸುವ ತನ್ನ ಯೋಜನೆಯನ್ನು ಬಹಿರಂಗಪಡಿಸಿದಾಗ ಭಾರತದ ಪಾಲಿಗೆ ಕಳವಳಗಳು ಹೆಚ್ಚಾದವು. ಈ ಅಣೆಕಟ್ಟೆಯ ನಿರ್ಮಾಣ ಭಾರತದ ನೀರಿನ ಸರಬರಾಜು ಮತ್ತು ಆಹಾರ ಉತ್ಪಾದನೆಯ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ಭಾರತೀಯರು ಚಿಂತಿತರಾಗಿದ್ದಾರೆ. ಚೀನಾ ಈ ಅಣೆಕಟ್ಟನ್ನು ಬಳಸಿ, ನೀರಿನ ಹರಿವಿನ ಮೇಲೆ ಹಿಡಿತ ಸಾಧಿಸಿ, ಆ ಬಳಿಕ ಉದ್ದೇಶಪೂರ್ವಕವಾಗಿ ನದಿ ಪಾತ್ರದಲ್ಲಿ ಪ್ರವಾಹ ಮತ್ತು ಬರ ತಲೆದೋರುವಂತೆ ಮಾಡಬಹುದು ಎಂಬ ಆತಂಕಗಳೂ ಎದುರಾಗಿವೆ.
2023ರಲ್ಲಿ, ಚೀನಾದ ತ್ಸಿಂಗುವಾ ವಿಶ್ವವಿದ್ಯಾಲಯದ ಹೈಡ್ರಾಲಿಕ್ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಒಂದು ವೇಳೆ ಭಾರತ, ಚೀನಾ ಮತ್ತು ಬಾಂಗ್ಲಾದೇಶಗಳು ಜಂಟಿಯಾಗಿ ಈ ಯೋಜನೆಯಲ್ಲಿ ಕಾರ್ಯಾಚರಿಸಿದರೆ, ಮೂರೂ ದೇಶಗಳಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದು ಸಲಹೆ ನೀಡಿದ್ದರು. ಈ ಅಣೆಕಟ್ಟಿನ ನಿರ್ಮಾಣದಿಂದ, ಬೇಸಿಗೆಯಲ್ಲಿ ನದಿಯ ನೀರಿನ ಮಟ್ಟವನ್ನು ಹೆಚ್ಚಿಸಿ, ಬ್ರಹ್ಮಪುತ್ರಾ ನದಿಯ ನೀರು ಭಾರತದಲ್ಲಿ ಜಲ ಸಂಚಾರಕ್ಕೆ ಪ್ರತಿವರ್ಷವೂ ಹೆಚ್ಚುವರಿಯಾಗಿ ಒಂದರಿಂದ ನಾಲ್ಕು ತಿಂಗಳು ಲಭಿಸುವಂತೆ ಮಾಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಪ್ರವಾಹವನ್ನು ನಿಯಂತ್ರಿಸಲು ಈ ಅಣೆಕಟ್ಟನ್ನು ಬಳಸುವುದರಿಂದ, ಪ್ರವಾಹ ಪೀಡಿತ ಪ್ರದೇಶಗಳನ್ನು ಪ್ರವಾಹದಿಂದ ರಕ್ಷಿಸಬಹುದು ಎಂದೂ ಈ ಅಧ್ಯಯನ ಹೇಳಿದೆ. ಪ್ರಸ್ತುತ ಅಣೆಕಟ್ಟು ಭಾರತದಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು 32.6%ದಷ್ಟು ಕಡಿಮೆಗೊಳಿಸಿದರೆ, ಬಾಂಗ್ಲಾದೇಶದಲ್ಲಿ 14.8%ದಷ್ಟು ಕಡಿಮೆಗೊಳಿಸಲಿದೆ. ನದಿಯ ಮುಖ್ಯ ಭಾಗದಲ್ಲಿ ಅಣೆಕಟ್ಟೆಗಳು ಮತ್ತು ಜಲವಿದ್ಯುತ್ ಸ್ಥಾವರಗಳ ಸರಣಿಯನ್ನು ನಿರ್ಮಿಸುವುದರಿಂದ ಬಹಳಷ್ಟು ಪ್ರಯೋಜನಗಳಾಗಲಿವೆ. ಇದು ಹೆಚ್ಚಿನ ವಿದ್ಯುತ್ ಉತ್ಪಾದನೆ, ಯಾರ್ಲಂಗ್ ತ್ಸಾಂಗ್‌ಪೋ - ಬ್ರಹ್ಮಪುತ್ರಾ ನದಿ ಪಾತ್ರದಲ್ಲಿ ಹೆಚ್ಚಿನ ಜಲ ಸಂಚಾರ ಮತ್ತು ಕೃಷಿಗೆ ನೆರವಾಗಬಲ್ಲದು.
ತ್ರೀ ಗಾರ್ಜಸ್ ಅಣೆಕಟ್ಟು ಎಂದರೆ ಮೂರು ಅಣೆಕಟ್ಟುಗಳ ಗುಂಪು ಎಂಬ ಅರ್ಥವಲ್ಲ. ಇದು ಕೇವಲ ಒಂದು ಬೃಹತ್ ಅಣೆಕಟ್ಟೆಯಾಗಿದ್ದು, ಇದಕ್ಕೆ ಚೀನಾದ ಯಾಂಗ್‌ತ್ಸೆ ನದಿಯ ಬಳಿ ಇರುವ ತ್ರೀ ಗಾರ್ಜಸ್ ಪ್ರದೇಶದ ಹೆಸರನ್ನು ಇಡಲಾಗಿದೆ. ಈ ಪ್ರದೇಶ ಅದು ಹೊಂದಿರುವ ಮೂರು ಕಿರಿದಾದ, ಸುಂದರವಾದ ಮೂರು ಕೊರಕಲುಗಳನ್ನು ಹೊಂದಿದೆ. ಅವುಗಳು ಆಳವಾದ, ಕಿರಿದಾದ, ಮತ್ತು ಕಡಿದಾದ ಅಂಚನ್ನು ಹೊಂದಿದ್ದು, ಇವುಗಳು ನದಿಯ ಹರಿವಿನ ಪರಿಣಾಮವಾಗಿ ಉಂಟಾಗಿದೆ. ಇವುಗಳಿಗೆ ಕುತಾಂಗ್ ಗಾರ್ಜ್, ವು ಗಾರ್ಜ್, ಮತ್ತು ಕ್ಸಿಲಿಂಗ್ ಗಾರ್ಜ್ ಎಂದು ಹೆಸರಿಡಲಾಗಿದೆ. ಇವುಗಳು ತಮ್ಮ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿವೆ. ಅಣೆಕಟ್ಟೆಯೂ ಈ ಮೂರು ಕೊರಕಲುಗಳ ಸನಿಹದಲ್ಲಿದೆ.
ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಉತ್ಪಾದನಾ ಅಣೆಕಟ್ಟೆಯಾಗಿರುವ ತ್ರೀ ಗಾರ್ಜಸ್ ಅಣೆಕಟ್ಟು ಹಲವು ಮುಖ್ಯ ಉದ್ದೇಶಗಳನ್ನು ಪೂರೈಸುತ್ತದೆ. ಇದು ಅಪಾರ ಪ್ರಮಾಣದ ವಿದ್ಯುತ್ತನ್ನು ಉತ್ಪಾದಿಸುವುದು ಮಾತ್ರವಲ್ಲದೆ, ಈ ಪ್ರದೇಶದಲ್ಲಿನ ಪ್ರವಾಹವನ್ನು ಕಡಿಮೆಗೊಳಿಸಿ, ನದಿಯಲ್ಲಿ ಸಂಚಾರವನ್ನು ಉತ್ತಮಗೊಳಿಸುತ್ತದೆ. ಅಣೆಕಟ್ಟೆಯ ಒಳಗೆ ಒಂದು ಸರಣಿ ಟರ್ಬೈನ್‌ಗಳು ಜೊತೆಯಾಗಿ ಕಾರ್ಯಾಚರಿಸುತ್ತಾ ವಿದ್ಯುತ್ ಉತ್ಪಾದಿಸುತ್ತವೆ. ಈ ಮೂಲಕ, ತ್ರೀ ಗಾರ್ಜಸ್ ಅಣೆಕಟ್ಟು ವಿದ್ಯುತ್ ಉತ್ಪಾದನೆ ಮತ್ತು ನೀರಿನ ನಿರ್ವಹಣೆಗೆ ಅತ್ಯಂತ ಮಹತ್ವದ ಅಣೆಕಟ್ಟೆಯಾಗಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)