ಸರಿಯಾದ ಉದ್ದೇಶಕ್ಕಾಗಿ, ಸರಿಯಾದ ಯೋಜನೆಯೊಂದಿಗೆ ಮತ್ತು ಮರುಪಾವತಿಯ ಸಾಮರ್ಥ್ಯವನ್ನು ಪರಿಗಣಿಸಿ ಪಡೆದ ಸಾಲವು ವ್ಯಕ್ತಿ, ಕುಟುಂಬ ಅಥವಾ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದರೆ ಆಲೋಚನೆಯಿಲ್ಲದೆ ಅಥವಾ ಭಾವನಾತ್ಮಕವಾಗಿ ತೆಗೆದುಕೊಳ್ಳುವ ಸಾಲವು ಆರ್ಥಿಕ ಸಂಕಷ್ಟ, ಮಾನಸಿಕ ಒತ್ತಡ ಮತ್ತು ಕುಟುಂಬದ ಅಶಾಂತಿಗೆ ಕಾರಣವಾಗಬಹುದು. ಆದ್ದರಿಂದ ಸಾಲ ಮಾಡುವ ಮೊದಲು ಹಲವಾರು ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅತ್ಯಗತ್ಯ.
ಮೊದಲನೆಯದಾಗಿ, ಸಾಲದ ಉದ್ದೇಶ ಸ್ಪಷ್ಟವಾಗಿರಬೇಕು. ನಾವು ಸಾಲವನ್ನು ಏಕೆ ಪಡೆಯುತ್ತಿದ್ದೇವೆ ಎಂಬುದಕ್ಕೆ ನಿಖರವಾದ ಉತ್ತರ ನಮ್ಮ ಬಳಿ ಇರಬೇಕು. ಶಿಕ್ಷಣ, ಮನೆ ನಿರ್ಮಾಣ, ಕೃಷಿ, ಉದ್ಯಮ ವಿಸ್ತರಣೆ ಅಥವಾ ಆದಾಯ ಹೆಚ್ಚಿಸುವ ಹೂಡಿಕೆಗಾಗಿ ಪಡೆಯುವ ಸಾಲವು ಸಾಮಾನ್ಯವಾಗಿ ಉತ್ಪಾದಕ ಸಾಲವೆಂದು ಪರಿಗಣಿಸಲಾಗುತ್ತದೆ. ಇಂತಹ ಸಾಲಗಳು ಭವಿಷ್ಯದಲ್ಲಿ ಆದಾಯವನ್ನು ಹೆಚ್ಚಿಸುವ ಅಥವಾ ಆಸ್ತಿಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ವೈಭವದ ಜೀವನಶೈಲಿ, ಅನಗತ್ಯ ಖರೀದಿಗಳು ಅಥವಾ ಪ್ರದರ್ಶನಕ್ಕಾಗಿ ಮಾಡುವ ಖರ್ಚುಗಳಿಗೆ ಸಾಲ ಪಡೆಯುವುದು ಸೂಕ್ತವಲ್ಲ.ಇದರ ಜೊತೆಗೆ ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆದಿದ್ದೇವೆ ಅದಕ್ಕೆ ಮಾತ್ರ ಬಳಸಬೇಕು. ಆ ಹಣವನ್ನು ಯಾವುದೇ ಕಾರಣಕ್ಕೂ ಬೇರೆಯದಕ್ಕೆ ಬಳಸಬಾರದು. ಉದಾಹರಣೆಗೆ ನಾವು ಉದ್ಯಮ ವಿಸ್ತರಣೆಗಾಗಿ ಯಾವುದೋ ಒಂದು ಮಷೀನ್ ಕೊಳ್ಳಬೇಕು ಎಂದು ಸಾಲವನ್ನು ಪಡೆದಿರುತ್ತೇವೆ ಎಂದುಕೊಳ್ಳೋಣ. ನಾವು ಪಡೆದ ಸಾಲದ ಮೊತ್ತ 100 ರೂಪಾಯಿ ಆಗಿದ್ದು. ವಿಶೇಷ ಡಿಸ್ಕೌಂಟ್ ಅಥವಾ ಇನ್ನಿತರ ಕಾರಣದಿಂದ ಆ ಮೆಷಿನರಿ 90 ರುಪಾಯಿಗೆ ಸಿಕ್ಕರೆ ಆಗ ಹೆಚ್ಚವರಿ 10 ರೂಪಾಯಿ ಹಣವನ್ನು ಅನ್ಯ ವಿಚಾರಗಳಿಗೆ ಬಳಸಬಾರದು. ಅದನ್ನು ಹಿಂತಿರುಗಿಸ ಬೇಕು. ಅಷ್ಟರ ಮಟ್ಟಿಗೆ ಲೋನ್ ಎಕ್ಸ್ಪೋಷರ್ ಕಡಿಮೆಯಾಗುತ್ತದೆ.
ಸಾಲ ಮಾಡುವ ಮೊದಲು ಅದು ನಿಜವಾಗಿಯೂ ಅಗತ್ಯವಿದೆಯೇ ಎಂಬುದನ್ನು ಪ್ರಾಮಾಣಿಕವಾಗಿ ಪರಿಶೀಲಿಸಬೇಕು. ಕೆಲವೊಮ್ಮೆ ಉಳಿತಾಯ, ಕುಟುಂಬದ ಸಹಾಯ ಅಥವಾ ಖರ್ಚನ್ನು ಮುಂದೂಡುವ ಮೂಲಕ ಸಾಲವನ್ನು ತಪ್ಪಿಸಬಹುದು. ಸಾಲವು ಮೊದಲ ಆಯ್ಕೆಯಾಗದೆ, ಕೊನೆಯ ಆಯ್ಕೆಯಾಗಿರುವುದು ಉತ್ತಮ ಹಣಕಾಸಿನ ಶಿಸ್ತು ಎಂದು ಪರಿಗಣಿಸಲಾಗುತ್ತದೆ.ಸಾಲ ಮಾಡಿದ ಮರುಕ್ಷಣದಿಂದ ಬಡ್ಡಿಯ ಮೀಟರ್ ಶುರುವಾಗುತ್ತದೆ. ತಿಂಗಳು ಎನ್ನುವುದು ಚಿಟಿಕೆ ಹೊಡೆಯುವಷ್ಟರಲ್ಲಿ ಮುಗಿದು ಹೋಗುತ್ತದೆ.ಕಂತು ಕಟ್ಟುವ ಸಮಯ ಬಂದು ಬಿಡುತ್ತದೆ. ಆದರೆ ಅನವಶ್ಯಕ ಸಾಲಗಳು ಕಂತು ಕಟ್ಟಲು ಬೇಕಾಗುವ ಹಣವನ್ನು ಉತ್ಪತ್ತಿ ಮಾಡುವಲ್ಲಿ ಸೋಲುತ್ತವೆ. ಹೀಗಾಗಿ ಅವಶ್ಯಕತೆ ಆಧಾರದ ಮೇಲೆ ಮಾತ್ರ ಸಾಲ ಮಾಡಬೇಕು.
ಬ್ಯಾಂಕುಗಳು ಏನಾದರೂ ಒತ್ತೆ ಇಡದೆ ಇದ್ದಾಗ ಸಾಲ ನೀಡುವುದು ಅಪರೂಪ. ನಾವು ಏನನ್ನು ಒತ್ತೆ ಇಟ್ಟು ಸಾಲವನ್ನು ಪಡೆಯುತ್ತಿದ್ದೇವೆ ಎನ್ನುವುದನ್ನು ಕೂಡ ಗಮನಿಸಬೇಕಾಗುತ್ತದೆ. ನಮ್ಮ ಬಳಿ ಹತ್ತಾರು ಆಸ್ತಿಗಳು ಇದ್ದಾಗ ಯಾವುದೋ ಒಂದು ಮನೆ ಅಥವಾ ಜಾಗವನ್ನು ಅಡಮಾನವನ್ನಾಗಿ ನೀಡಿ ಸಾಲ ಪಡೆದರೆ ಅಷ್ಟರಮಟ್ಟಿಗೆ ಅದು ಒಪ್ಪವಂತಹುದು. ನಮ್ಮ ಬಳಿ ಇರುವುದೇ ಒಂದು ಆಸ್ತಿ. ಅದೂ ಕೂಡ ವಾಸಿಸುತ್ತಿರುವ ಮನೆ ಎಂದಾಗ , ಸಾಲ ಮಾಡುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಏಕೆಂದರೆ ಒಂದು ಸಣ್ಣ ತಪ್ಪು ಕುಟುಂಬವನ್ನು ಬೀದಿಗೆ ತರುತ್ತದೆ. ಈ ರೀತಿಯ ಸಾಲ ಅತ್ಯಂತ ಅಪಾಯಕಾರಿ. ನಾವು ಅರಗಿಸಿಕೊಳ್ಳಲು ಸಾಧ್ಯವಾಗುವಷ್ಟು ಮಾತ್ರ ಆಹಾರವನ್ನು ಸೇವಿಸಬೇಕು. ಥೇಟ್ ಹಾಗೆ ನಮ್ಮ ಕ್ಷಮತೆಗೆ ತಕ್ಕಷ್ಟು ಮಾತ್ರ ಅಪಾಯವನ್ನು ನಾವು ತೆಗೆದುಕೊಳ್ಳಬಹುದು. ಕುಟುಂಬವನ್ನು , ತೀರಾ ಮೂಲಭೂತವಾಗಿ ಬದುಕಿಗೆ ಬೇಕಾಗುವ ಭದ್ರತೆಯನ್ನು ದಾಳವನ್ನಾಗಿಸಿಕೊಂಡು ಸಾಲ ಮಾಡುವುದು ತಪ್ಪಲ್ಲ , ಅಪರಾಧ.
ಸಾಲದ ಮೇಲಿನ ಬಡ್ಡಿದರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ. ಸ್ಥಿರ ಬಡ್ಡಿದರ (Fixed Interest Rate) ಮತ್ತು ಬದಲಾವಣೆಯಾಗುವ ಬಡ್ಡಿದರ (Floating Interest Rate) ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಕಡಿಮೆ ಬಡ್ಡಿದರ ಮಾತ್ರ ಸಾಲವನ್ನು ಉತ್ತಮವಾಗಿಸುವುದಿಲ್ಲ. ಬಡ್ಡಿಯ ಲೆಕ್ಕಾಚಾರ, ಒಟ್ಟು ಮರುಪಾವತಿ ಮೊತ್ತ ಹಾಗೂ ಪರಿಣಾಮಕಾರಿ ಬಡ್ಡಿದರವನ್ನು ಸಹ ಪರಿಶೀಲಿಸಬೇಕು.ಸಮಾಜದಲ್ಲಿನ ಆಗುಹೋಗುಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜಾಗತಿಕ ವಿತ್ತ ಜಗತ್ತು ಹೇಗಿದೆ ಎನ್ನುವುದು ಕೂಡ ಗೊತ್ತಿರಬೇಕು. ಇದರ ಆಧಾರದ ಮೇಲೆ ಕೆಲವೊಮ್ಮೆ ಫಿಕ್ಸೆಡ್ ಇಂಟರೆಸ್ಟ್ ರೇಟ್ ಉತ್ತಮ , ಕೆಲವೊಮ್ಮೆ ಫ್ಲೆಕ್ಸಿಬಲ್ ರೇಟ್ ಉತ್ತಮ. ಯಾವುದು ಆಯ್ದು ಕೊಳ್ಳಬೇಕು ಎನ್ನುವುದು ವಿತ್ತ ವಾತಾವರಣ ತಿಳಿಸುತ್ತದೆ. ಇವತ್ತಿಗೆ , ಈ ಕ್ಷಣಕ್ಕೆ ಲಾಭ ಎನ್ನಿಸಿದ್ದು ಆರು ತಿಂಗಳಲ್ಲಿ ಬದಲಾಗಿರುತ್ತದೆ. ಹೀಗಾಗಿ ಜಾಗತಿಕ ವಿತ್ತ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದರ ಅರಿವು ಇರಬೇಕಾಗುತ್ತದೆ.
ಸಲ ಮರುಪಾವತಿಯ ಕಾಲಾವಧಿ ಕೂಡ ಸಾಲದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚು ಅವಧಿಯ ಸಾಲ ಹೆಚ್ಚು ಬಡ್ಡಿಯನ್ನು ನೀಡುವಂತೆ ಮಾಡುತ್ತದೆ. ಅವಧಿ ಹೆಚ್ಚಾದಂತೆ ಮಾಡಿದ ಸಾಲದ ಮೊತ್ತಕ್ಕಿಂತ ಕಟ್ಟಿದ ಬಡ್ಡಿಯ ಮೊತ್ತವೇ ಹೆಚ್ಚಾಗಿರುತ್ತದೆ. ಹೀಗಾಗಿ ಸಾಲ ಮರುಪಾವತಿ ಅವಧಿ ಬಹಳ ಮುಖ್ಯ. ಕಡಿಮೆ ಅವಧಿಯ ಸಾಲದಲ್ಲಿ ಮಾಸಿಕ ಕಂತು ಹೆಚ್ಚಾಗಿರುತ್ತದೆ ಆದರೆ ಒಟ್ಟು ಬಡ್ಡಿಯ ವೆಚ್ಚ ಕಡಿಮೆಯಾಗುತ್ತದೆ. ದೀರ್ಘಾವಧಿಯ ಸಾಲದಲ್ಲಿ EMI ಕಡಿಮೆ ಇದ್ದರೂ, ಒಟ್ಟು ಪಾವತಿಸಬೇಕಾದ ಬಡ್ಡಿ ಹೆಚ್ಚು ಆಗುತ್ತದೆ. ಆದ್ದರಿಂದ ತಮ್ಮ ಆದಾಯ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮತೋಲನದ ಅವಧಿಯನ್ನು ಆಯ್ಕೆ ಮಾಡಬೇಕು.
ಸಾಲ ಮಾಡುವುದು ಸುಲಭ. ಬ್ಯಾಂಕುಗಳು ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳು ನಮ್ಮ ಹಿಂದಿನ ಕಾರ್ಯ ಕ್ಷಮತೆ , ನಮ್ಮ ಬುಕ್ಸ್ ಆಫ್ ಅಕೌಂಟ್ಸ್ ನೋಡಿ ಸಾಲವನ್ನು ಕೊಟ್ಟು ಬಿಡುತ್ತವೆ. ಆದರೆ ಅದನ್ನು ತೀರಿಸಲು ನಾವು ಒಂದು ರೋಡ್ ಮ್ಯಾಪ್ ಸಿದ್ದ ಪಡಿಸಿಕೊಳ್ಳಬೇಕು. ನಾವು ಸಾಲದ ರೂಪದಲ್ಲಿ ಪಡೆದ ಹಣದಿಂದ ಎಷ್ಟು ಉತ್ಪತ್ತಿಯನ್ನು ತೆಗೆಯಬಹುದು. ಅದರಲ್ಲಿ ಮರುಪಾವತಿಗೆ ಎಷ್ಟು ಹಣವನ್ನು ಮೀಸಲಿಡಬೇಕು. ಆಗೊಮ್ಮೆ ಅಂದುಕೊಂಡ ರೀತಿಯಲ್ಲಿ ಉತ್ಪತ್ತಿ ಬರದಿದ್ದರೆ ಆಗ ಸಾಲ ತೀರಿಸಲು ಅಂದರೆ ಕಂತು ಕಟ್ಟಲು ಪ್ಲಾನ್ ಬಿ ಯಾವುದು ? ಇತ್ಯಾದಿಗಳನ್ನು ನಾವು ಗಮನಿಸಬೇಕಾಗುತ್ತದೆ. ನಾವು ಅಂದುಕೊಂಡ ರೀತಿಯಲ್ಲಿ ದಾರಿ ಸಾಗದಿದ್ದರೆ ಏನಾಗಬಹುದು ? ಎನ್ನವುದರ ಲೆಕ್ಕಾಚಾರ ಮಾಡಿರುವುದು ಕೂಡ ಬಹಳ ಮುಖ್ಯ. ಮರುಪಾವತಿ ಸಾಮರ್ಥ್ಯವು ಸಾಲದ ನಿರ್ಧಾರದಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ವ್ಯಕ್ತಿಯ ಮಾಸಿಕ ಆದಾಯ, ಖರ್ಚು ಮತ್ತು ಉಳಿಕೆಯ ಆಧಾರದ ಮೇಲೆ EMI ಪಾವತಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ಲೆಕ್ಕ ಹಾಕಬೇಕು. ಸಾಮಾನ್ಯವಾಗಿ ಒಟ್ಟು ಮಾಸಿಕ ಸಾಲದ ಕಂತುಗಳು ಆದಾಯದ 30 ರಿಂದ 40 ಶೇಕಡಾವನ್ನು ಮೀರದಿರುವುದು ಸುರಕ್ಷಿತ ಎಂದು ಹಣಕಾಸು ತಜ್ಞರು ಅಭಿಪ್ರಾಯ. ಆದಾಯದ ಬಹುಪಾಲು EMIಗೆ ಹೋಗುವ ಪರಿಸ್ಥಿತಿ ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಎಚ್ಚರವಿರಲಿ.
ಸಾಲ ಪಡೆಯುವಾಗ ಕೇವಲ ಬಡ್ಡಿಯನ್ನು ಮಾತ್ರ ಗಮನಿಸಬಾರದು. ಪ್ರೊಸೆಸಿಂಗ್ ಶುಲ್ಕ, ದಾಖಲೆ ಶುಲ್ಕ, ವಿಮಾ ವೆಚ್ಚ, ಕಾನೂನು ಶುಲ್ಕ, GST ಹಾಗೂ ಇತರ ಗುಪ್ತ ಶುಲ್ಕಗಳನ್ನೂ ಪರಿಶೀಲಿಸಬೇಕು. ಅನೇಕ ಬಾರಿ ಈ ಹೆಚ್ಚುವರಿ ವೆಚ್ಚಗಳು ಸಾಲದ ನಿಜವಾದ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ.
ಆದಾಯದಲ್ಲಿನ ಸ್ಥಿರತೆ ಬಗ್ಗೆ ಕೂಡ ಗಮನವಿರಲಿ .
ಸಾಲ ಪಡೆಯುವ ವ್ಯಕ್ತಿಯ ಆದಾಯದ ಸ್ಥಿರತೆಯನ್ನೂ ಪರಿಗಣಿಸಬೇಕು. ಖಾಸಗಿ ಉದ್ಯೋಗ, ಸ್ವಂತ ಉದ್ಯಮ, ಕೃಷಿ ಅಥವಾ ಸ್ವಯಂ ಉದ್ಯೋಗದಿಂದ ಆದಾಯ ಪಡೆಯುವವರು ಭವಿಷ್ಯದಲ್ಲಿ ಆದಾಯದಲ್ಲಿ ಏರುಪೇರಾಗುವ ಸಾಧ್ಯತೆಯನ್ನು ಲೆಕ್ಕಿಸಬೇಕು. ಆದಾಯ ತಾತ್ಕಾಲಿಕವಾಗಿ ಕಡಿಮೆಯಾದರೂ EMI ಪಾವತಿಸಲು ಸಾಧ್ಯವಾಗುವಂತಹ ಯೋಜನೆ ಇರಬೇಕು.
ತುರ್ತು ನಿಧಿ (Emergency Fund) ಹೊಂದಿರುವುದು ಅತ್ಯಂತ ಮುಖ್ಯ. ಅನಾರೋಗ್ಯ, ಉದ್ಯೋಗ ನಷ್ಟ, ಪ್ರಕೃತಿ ವಿಕೋಪ ಅಥವಾ ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ಕನಿಷ್ಠ ಆರು ತಿಂಗಳ ಕುಟುಂಬದ ಖರ್ಚು ಮತ್ತು EMI ಪಾವತಿಸಲು ಸಾಕಾಗುವಷ್ಟು ಉಳಿತಾಯ ಇರಬೇಕು. ತುರ್ತು ನಿಧಿಯಿಲ್ಲದೆ ದೊಡ್ಡ ಪ್ರಮಾಣದ ಸಾಲ ಮಾಡುವುದು ಅಪಾಯಕಾರಿಯಾಗಿದೆ.ಹೊಸ ಸಾಲ ಪಡೆಯುವ ಮೊದಲು ಈಗಾಗಲೇ ಇರುವ ಸಾಲಗಳನ್ನು ಪರಿಶೀಲಿಸಬೇಕು. ಮನೆ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳು ಈಗಾಗಲೇ ಇದ್ದರೆ, ಹೊಸ ಸಾಲದಿಂದ ಒಟ್ಟು ಸಾಲದ ಹೊರೆ ಅತಿಯಾಗಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
ಕ್ರೆಡಿಟ್ ಸ್ಕೋರ್ ಅಥವಾ ಸಾಲ ಮರುಪಾವತಿಯ ಇತಿಹಾಸವೂ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಹಿಂದಿನ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಭವಿಷ್ಯದ ಸಾಲಗಳಿಗೆ ಅನುಕೂಲಕರವಾಗುತ್ತದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಹೆಚ್ಚು ಸುರಕ್ಷಿತ. ಅನಧಿಕೃತ ಹಣಕಾಸು ಸಂಸ್ಥೆಗಳು ಅಥವಾ ಖಾಸಗಿ ಸಾಲಗಾರರು ಹೆಚ್ಚಿನ ಬಡ್ಡಿದರ ಮತ್ತು ಕಠಿಣ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಸಾಲದ ಒಪ್ಪಂದದಲ್ಲಿ ಬಡ್ಡಿದರ, EMI, ವಿಳಂಬ ದಂಡ, ಪೂರ್ವಪಾವತಿ ನಿಯಮಗಳು ಮತ್ತು ಇತರ ಷರತ್ತುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ನಂತರವೇ ಒಪ್ಪಿಕೊಳ್ಳಬೇಕು. ಯಾವುದೇ ಅನುಮಾನವಿದ್ದರೆ ಹಣಕಾಸು ತಜ್ಞರ ಸಲಹೆ ಪಡೆಯುವುದು ಉತ್ತಮ.ಬಹುಪಾಲು ಜನ ಸಾಲದ ದಾಖಲೆಗಳನ್ನು ಪೂರ್ಣವಾಗಿ ಓದುವುದೇ ಇಲ್ಲ. ಬ್ಯಾಂಕಿನವರು ಹೇಳಿದ ಕಡೆ ಸಹಿ ಮಾಡುತ್ತಾರೆ. ಇದು ಅಪರಾಧ. ಇದರ ಜೊತೆಗೆ ಸಾಲವನ್ನು ಮುಂಚಿತವಾಗಿ ತೀರಿಸಲು ಅವಕಾಶ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಕೆಲವು ಸಂಸ್ಥೆಗಳು ಪೂರ್ವಪಾವತಿಗೆ ಹೆಚ್ಚುವರಿ ದಂಡ ವಿಧಿಸುತ್ತವೆ. ಇಂತಹ ಷರತ್ತುಗಳು ಭವಿಷ್ಯದಲ್ಲಿ ಅನಗತ್ಯ ವೆಚ್ಚಕ್ಕೆ ಕಾರಣವಾಗಬಹುದು.
ಸಾಲದ ನಿರ್ಧಾರ ತೆಗೆದುಕೊಳ್ಳುವಾಗ ಕುಟುಂಬದ ಜೊತೆ ಚರ್ಚಿಸುವುದು ಉತ್ತಮ ಅಭ್ಯಾಸ. ಸಾಲದ ಹೊರೆ ಒಬ್ಬ ವ್ಯಕ್ತಿಯ ಮೇಲಷ್ಟೇ ಅಲ್ಲ, ಕುಟುಂಬದ ಒಟ್ಟಾರೆ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪಾರದರ್ಶಕತೆ ಮತ್ತು ಪರಸ್ಪರ ಸಹಕಾರ ಅಗತ್ಯ.ಬಹುಪಾಲು ಕುಟುಂಬದಲ್ಲಿ ಮನೆಯ ಯಜಮಾನ ಮಾಡಿದ ಸಾಲಗಳು ಮನೆಯ ಇತರ ಸದಸ್ಯರಿಗೆ ಗೊತ್ತೇ ಇರುವುದಿಲ್ಲ. ಈ ರೀತಿ ಏಕ ಮುಖ ನಿರ್ಧಾರಗಳು ಸಾಲದ ವಿಚಾರದಲ್ಲಿ ಅವಘಡಕ್ಕೆ ಕಾರಣವಾಗುತ್ತವೆ.
ಪ್ರತಿಷ್ಠೆ, ಸ್ಪರ್ಧೆ, ಇತರರನ್ನು ಅನುಕರಿಸುವ ಮನೋಭಾವ ಅಥವಾ ಕ್ಷಣಿಕ ಆಸೆಗಳ ಆಧಾರದ ಮೇಲೆ ಸಾಲ ಮಾಡಬಾರದು. ಪ್ರತಿಯೊಂದು ಸಾಲದ ನಿರ್ಧಾರವೂ ದೀರ್ಘಕಾಲೀನ ಪರಿಣಾಮವನ್ನು ಉಂಟುಮಾಡುತ್ತದೆ.ವ್ಯಾಪಾರದಲ್ಲಿ ಪ್ರತಿಸ್ಪರ್ಧಿ ಏನೂ ಮಾಡುತ್ತಿದ್ದಾರೆ ಎಂದು ನಾವು ಅವರನ್ನು ಅನುಕರಿಸಲು ಸಾಲ ಮಾಡಲೇಬಾರದು.
ಸಾಲದ ಮೊತ್ತದ ಮೇಲೆ ವಿಮೆ ಮಾಡಿಸುವುದು ಇವತ್ತಿನ ದಿನದಲ್ಲಿ ಅತ್ಯಂತ ಅವಶ್ಯಕ.ಅವಘಡಗಳು ಸಂಭವಿಸಿದಾಗ ವಿಮೆ ಇದ್ದಾಗ ಸಾಲದ ಮೊತ್ತವನ್ನು ಕಟ್ಟುವ ಪ್ರಮೇಯ ಬರುವುದಿಲ್ಲ. ವಿಮೆ ಎನ್ನುವುದು ಕಾಣದ ಅಂತಹ ಸನ್ನಿವೇಶಗಳಿಗಾಗಿ ಸೃಷ್ಟಿಯಾಗಿರುವುದು. ಹೀಗಾಗಿ ಇದರ ಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕು.
ಪ್ರಾಚೀನ ಅರ್ಥಶಾಸ್ತ್ರಜ್ಞ ಚಾಣಕ್ಯರ ದೃಷ್ಟಿಕೋನದಲ್ಲಿಯೂ ಸಾಲದ ಬಗ್ಗೆ ವಿಶೇಷ ಎಚ್ಚರಿಕೆ ಕಾಣಬಹುದು. ಅವರ ಅಭಿಪ್ರಾಯದಂತೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಮತ್ತು ಅನಗತ್ಯ ಸಾಲ ಮಾಡುವುದು ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಸಾಲವು ಅಭಿವೃದ್ಧಿಗೆ ಸಹಕಾರಿಯಾಗುವಂತಿರಬೇಕು. ಸಾಲದ ಹಣ ಸಾಲದ ಮೇಲಿನ ಬಡ್ಡಿ ಜೊತೆಗೆ ಲಾಭವನ್ನು ದುಡಿಯು ಕೊಡುವಂತಿದ್ದರೆ ಮಾತ್ರ ಸಾಲ ಮಾಡಬೇಕು . ವೈಭವಕ್ಕಾಗಿ ಅಥವಾ ಪ್ರದರ್ಶನಕ್ಕಾಗಿ ಮಾಡಬಾರದು. ಸಮಯಕ್ಕೆ ಸರಿಯಾಗಿ ಸಾಲ ತೀರಿಸುವುದು ಬಹಳ ಮುಖ್ಯ.
ಕೊನೆಗೆ, ಸಾಲ ಎನ್ನುವುದು ಎರಡು ಅಲುಗಿನ ಖತ್ತಿ. ಅದು ಶಾಪವೂ ಹೌದು, ವಾರವೂ ಹೌದು. ಅದನ್ನು ಯಾವ ಉದ್ದೇಶಕ್ಕಾಗಿ, ಯಾವ ಯೋಜನೆಯೊಂದಿಗೆ ಮತ್ತು ಎಷ್ಟು ಜವಾಬ್ದಾರಿಯಿಂದ ಬಳಸುತ್ತೇವೆ ಎಂಬುದೇ ಅದರ ಪರಿಣಾಮವನ್ನು ನಿರ್ಧರಿಸುತ್ತದೆ. ಸರಿಯಾದ ವಿಶ್ಲೇಷಣೆ, ಆರ್ಥಿಕ ಶಿಸ್ತು ಮತ್ತು ದೂರದೃಷ್ಟಿಯೊಂದಿಗೆ ಪಡೆದ ಸಾಲವು ಅಭಿವೃದ್ಧಿಗೆ ಮೆಟ್ಟಿಲಾಗುತ್ತದೆ. ಆದರೆ ಯೋಚನೆಯಿಲ್ಲದೆ ತೆಗೆದುಕೊಳ್ಳುವ ಸಾಲವು ಆರ್ಥಿಕ ಸಂಕಷ್ಟದ ಆರಂಭವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ “ಮೊದಲು ಯೋಚಿಸಿ, ನಂತರ ಸಾಲ ಮಾಡಿ, ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿ” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com