ಕ್ರಿಕೆಟ್

ವಿಂಡೀಸ್ ಬ್ಯಾಟಿಂಗ್ ಅಬ್ಬರಕ್ಕೆ ಬ್ರೇಕ್ ಹಾಕಿದ ಮಳೆರಾಯ, ಅಂಗಳದಿಂದ ಹೊರ ನಡೆದ ಆಟಗಾರರು!

Srinivasamurthy VN

ಗೇಯ್ಲ್, ಎವಿನ್ ಲೂಯಿಸ್ ಅಬ್ಬರದ ಬಳಿಕ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು

ಟ್ರಿನಿಡಾಡ್: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ದಾಂಡಿಗರ ಸ್ಫೋಟಕ ಬ್ಯಾಟಿಂಗ್ ಗೆ ಮಳೆರಾಯ ಬ್ರೇಕ್ ಹಾಕಿದ್ದು, ಗೇಯ್ಲ್, ಎವಿನ್ ಲೂಯಿಸ್ ಔಟಾದ ಬೆನ್ನಲ್ಲೇ ಮೈದಾನದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಆಟ ನಿಂತಿದ್ದು, ಪಂದ್ಯ ಮುಂದುವರಿಕೆಯ ಮೇಲೆ ಕಾರ್ಮೋಡ ಕವಿದಿದೆ.

ಟ್ರಿನಿಡಾಡ್ ನ, ಪೋರ್ಟ್ ಆಫ್ ಸ್ಪೈನ್ ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ 3ನೇ ಏಕದಿನ ಪಂದ್ಯ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಂಡೀಸ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ವಿಂಡೀಸ್ ನ ಆರಂಭಿಕ ದಾಂಡಿಗರಾದ ಕ್ರಿಸ್ ಗೇಯ್ಲ್ ಮತ್ತು ಎವಿನ್ ಲೂಯಿಸ್ ಮೊದಲ ವಿಕೆಟ್ ಗೆ 115 ರನ್ ಕಲೆ ಹಾಕಿದರು. ಅದು ಕೂಡ ಮೊದಲ 10 ಓವರ್ ನಲ್ಲಿಯೇ...

ಮೊದಲ ಓವರ್ ನಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ರಿಸ್ ಗೇಯ್ಲ್, ಕೇವಲ 41 ಎಸೆತಗಳಲ್ಲಿ 72 ರನ್ ಸಿಡಿಸಿದರು. ಅವರ ಈ ಭರ್ಜರಿ ಬ್ಯಾಟಿಂಗ್ ನಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿ ಸೇರಿತ್ತು, ಇನ್ನು ಗೇಯ್ಲ್ ಗೆ ಉತ್ತಮ ಸಾಥ್ ನೀಡಿದ ಎವಿನ್ ಲೂಯಿಸ್, 29 ಎಸೆತಗಳಲ್ಲಿ 43 ರನ್ ಪೇರಿಸಿದರು. ಅವರೂ ಕೂಡ 3 ಸಿಕ್ಸರ್ ಹಾಗೂ 5 ಬೌಂಡರಿ ಗಳಿಸಿದ್ದರು. ಈ ಜೋಡಿಯನ್ನು ಯಜುವೇಂದ್ರ ಚಹಲ್, 11ನೇ ಓವರ್ ನಲ್ಲಿ ಬೇರ್ಪಡಿಸಿ ಭಾರತೀಯ ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿದರು.

11ನೇ ಓವರ್ ನ 5ನೇ ಎಸೆತದಲ್ಲಿ ಎವಿನ್ ಲೂಯಿಸ್ ರನ್ನು ಚಹಲ್ ಔಟ್ ಮಾಡಿದರು. ನಂತರದ ಓವರ್ ನಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಕ್ರಿಸ್ ಗೇಯ್ಲ್ ರನ್ನೂ ಕೂಡ ಖಲೀಲ್ ಅಹ್ಮದ್ ಔಟ್ ಮಾಡುವುದರೊಂದಿಗೆ ವಿಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಈ ಹಂತದಲ್ಲಿ ದಿಢೀರ್ ಕುಸಿತ ಕಂಡ ವಿಂಡೀಸ್ ತಂಡಕ್ಕೆ ಶಾಯ್ ಹೋಪ್ ಹಾಗೂ ಶಿಮ್ರಾನ್ ಹೇಟ್ಮರ್ ಬೆನ್ನೆಲುಬಾಗಿ ನಿಂತರು. ರಕ್ಷಣಾತ್ಮಕ ಆಟದ ಮೊರೆ ಹೋದ ಇವರು, ಮತ್ತೆ ವಿಂಡೀಸ್ ಗೆ ಆಘಾತವಾಗದಂತೆ ಎಚ್ಚರಿಕೆ ವಹಿಸಿದರು. 

ಇತ್ತೀಚಿನ ವರದಿಗಳು ಬಂದಾಗ ಮಳೆ ಬಂದು ಆಟ ನಿಂತಾಗ ಶಾಯ್ ಹೋಪ್ 19 (40 ಎಸೆತ) ಮತ್ತು ಶಿರ್ಮಾನ್ ಹೇಟ್ಮರ್ 18ರನ್ (23 ಎಸೆತ) ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಂತೆಯೇ ವಿಂಡೀಸ್ ತಂಡ 22 ಓವರ್ ಗಳಲ್ಲಿ 158ರನ್ ಗಳಿಸಿದೆ. ಭಾರತದ ಪರ ಚಹಲ್ ಮತ್ತು ಖಲೀಲ್ ಅಹ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.
 

SCROLL FOR NEXT