ಮುಂಬೈ: 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಬಳಿಕ ಜಗತ್ತಿನಲ್ಲಿ ಯಾವುದೂ ಒಳ್ಳೆಯದಾಗಿಲ್ಲ ಎಂದು SonuNigam Singh ಹೇಳಿದ್ದಾರೆ.
ಅನಿಷ್ಟೆಕ್ಕಲ್ಲಾ ಶನೇಶ್ವರನೇ ಕಾರಣ ಎಂಬಂತೆ ಆರ್ ಸಿಬಿ ಕಪ್ ಗೆದ್ದ ಬಳಿಕ ಆರ್ ಸಿಬಿ ವಿರೋಧಿಗಳು ಒಂದಲ್ಲಾ ಒಂದು ರೀತಿ ಪೋಸ್ಟ್ ಮಾಡುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಸೋನು ನಿಗಮ್ ಸಿಂಗ್...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಅದರಲ್ಲೂ 17 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದಿದೆ. ಈ ಸಂಭ್ರಮ ಬಹಳ ದಿನಗಳ ಕಾಲ ಇರಲಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು. ಇದಾದ ಬಳಿಕ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳು ನೋವಿನಲ್ಲಿದ್ದಾರೆ. ಇದರ ನಡುವೆಯೇ ಆರ್ ಸಿಬಿ ಕುರಿತು SonuNigam Singh ಆಕ್ಷೇಪಾರ್ಹ ಪೋಸ್ಚ್ ಮಾಡಿದ್ದಾರೆ.
ಇತ್ತೀಚೆಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸೋನು ನಿಗಮ್ ಸಿಂಗ್ ‘ಆರ್‌ಸಿಬಿ ಐಪಿಎಲ್ ಗೆದ್ದಾಗಿನಿಂದ, ಜಗತ್ತಿನಲ್ಲಿ ಏನೂ ಒಳ್ಳೆಯದಾಗುತ್ತಿಲ್ಲ ಎಂದು ಬರೆದಿದ್ದಾರೆ. ಈ ಟ್ವೀಟ್ ಬಳಿಕ, ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿನ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಜೂನ್ 12 ರಂದು, ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ವಿಮಾನವು ಟೇಕ್ ಆಫ್ ಆದ 2 ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು. ಈ ಭೀಕರ ಅಪಘಾತದಲ್ಲಿ 242 ಜನರು ಸಾವನ್ನಪ್ಪಿದರು. ಇದರ ನಂತರ, ಜೂನ್ 15 ರಂದು, ಕೇದಾರಘಾಟಿ ಬಳಿ ಹೆಲಿಕಾಪ್ಟರ್ ಅಪಘಾತ ಸಂಭವಿಸಿತು, ಇದರಲ್ಲಿ ಪೈಲಟ್ ಸೇರಿದಂತೆ 7 ಜನರು ಸಾವನ್ನಪ್ಪಿದರು ಎಂದು ಸೋನು ನಿಗಮ್ ಸಿಂಗ್ ಆರೋಪಿಸಿದ್ದರು.
ಆರ್ ಸಿಬಿ ಅಭಿಮಾನಿಗಳ ವ್ಯಾಪಕ ಆಕ್ರೋಶ
ಇನ್ನು ಸೋನು ನಿಗಮ್ ಸಿಂಗ್ ಪೋಸ್ಟ್ ಗೆ ವ್ಯಾಪಕ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗುತ್ತಿದ್ದು, ನಿಮ್ಮದ ಕೆಟ್ಟ ಅಭಿರುಚಿ ಎಂದು ಒಬ್ಬರು ಟ್ವೀಟ್ ಮಾಡಿದರೆ, ಆರ್ ಸಿಬಿ ಅಭಿಮಾನಿಗಳು ಬರುತ್ತಾರೆ ಹುಷಾರಾಗಿರಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೋರ್ವ ಎಕ್ಸ್ ಬಳಕೆದಾರ ನಿಮ್ಮಂಥವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ತಮ್ಮ ಪೋಸ್ಟ್ ಗೆ ವಿರೋಧ ವ್ಯಕ್ತವಾಗುತ್ತಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ನಿಗಮ್ ಸಿಂಗ್, 'ನಾನು ಹೇಳಿದ್ದು ವಿಡಂಬನಾತ್ಮಕ ಅರ್ಥದಲ್ಲಿ. ದಯವಿಟ್ಟು ಇದನ್ನು ಹಗುರವಾಗಿ ತೆಗೆದುಕೊಳ್ಳಿ. ಇದು ಕೇವಲ ತಮಾಷೆಗಾಗಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಷ್ಟಕ್ಕೂ ಯಾರು ಈ ಸೋನು ನಿಗಮ್ ಸಿಂಗ್
ಆರ್ ಸಿಬಿ ಕುರಿತು ವಿಡಂಬನಾತ್ಮಕ ಟ್ವೀಟ್ ಮಾಡಿರುವ ಸೋನು ನಿಗಮ್ ಸಿಂಗ್ ಬಾಲಿವುಡ್ ಗಾಯಕ ಸೋನು ನಿಗಮ್ ಅಲ್ಲ... ಈತನ ಹೆಸರು ಸೋನು ನಿಗಮ್ ಸಿಂಗ್ (@SonuNigamSingh). ಈ ಸೋನು ನಿಗಮ್ ಸಿಂಗ್ ಎಕ್ಸ್ ಖಾತೆಯಲ್ಲಿನ ಮಾಹಿತಿಯಂತೆ ಈತ ಬಿಹಾರ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವಕೀಲ ಎಂದು ಹೇಳಿಕೊಂಡಿದ್ದಾನೆ.
ಈ ಹಿಂದೆಯೂ ಕೂಡ ಬೆಂಗಳೂರಿನ ಬ್ಯಾಂಕ್ ವೊಂದರಲ್ಲಿ ನಡೆದ ಗಲಾಟೆ ವಿಚಾರವಾಗಿ ಸೋನು ನಿಗಮ್ ಸಿಂಗ್ ಟ್ವೀಟ್ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಸಂಸದ ತೇಜಸ್ವಿ ಸೂರ್ಯರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್ ಸಿಂಗ್, ‘ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆಯೇ’ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಮತ್ತೆ ಆರ್ ಸಿಬಿ ಕುರಿತು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಟ್ವೀಟ್ ಮಾಡಿದ್ದು ಗಾಯಕ ಸೋನು ನಿಗಮ್ ಅಲ್ಲ..
ಅಂತೆಯೇ ಈ ಟ್ವೀಟ್ ಮಾಡಿದ್ದು ಗಾಯಕ ಸೋನು ನಿಗಮ್ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಗಾಯಕ ಸೋನು ನಿಗಮ್ ಅವರು ಟ್ವಿಟರ್ ಬಳಕೆ ಮಾಡೋದು ನಿಲ್ಲಿಸಿ ಏಳು ವರ್ಷಗಳು ಕಳೆದಿವೆ. ಆದರೆ, ಅವರ ಹೆಸರಲ್ಲಿ ಬೇರೊಬ್ಬರು ಖಾತೆ ತೆರೆದಿದ್ದಾರೆ. ಈ ಬಗ್ಗೆ ಸೋನು ನಿಗಮ್ ಪ್ರಶ್ನೆ ಮಾಡಿದ್ದರು. ಆದರೆ, ಆ ವ್ಯಕ್ತಿ ನನ್ನ ಹೆಸರು ಸೋನು ನಿಗಮ್ ಎಂದು ದಾಖಲೆ ನೀಡಿದ್ದರು. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸೋನು ನಿಗಮ್ಗೆ ಬೈಯ್ಯುತ್ತಿದ್ದಾರೆ.