ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ರ್ಯಾಂಡ್ ಮೌಲ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತೊಮ್ಮೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ (Houlihan Lokey) ಬಿಡುಗಡೆ ಮಾಡಿದ 2026 ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ವರದಿ ಪ್ರಕಾರ, ಆರ್‌ಸಿಬಿಯ ಬ್ರ್ಯಾಂಡ್ ಮೌಲ್ಯ 312 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ.
ಐಪಿಎಲ್ ಇತಿಹಾಸದಲ್ಲೇ 300 ಮಿಲಿಯನ್ ಡಾಲರ್ ಗಡಿ ದಾಟಿದ ಮೊದಲ ಕ್ರಿಕೆಟ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವರದಿ ಪ್ರಕಾರ, 2026ರಲ್ಲಿ ಐಪಿಎಲ್‌ನ ಒಟ್ಟು ವ್ಯವಹಾರಿಕ ಮೌಲ್ಯ 20.6 ಬಿಲಿಯನ್ ಡಾಲರ್ (ಸುಮಾರು 1.97 ಲಕ್ಷ ಕೋಟಿ ರೂ) ತಲುಪಿದ್ದು, ಕಳೆದ ವರ್ಷಕ್ಕಿಂತ 11.4 ಶೇಕಡಾ ಏರಿಕೆಯಾಗಿದೆ.
ಸತತ ಎರಡನೇ ವರ್ಷವೂ ಐಪಿಎಲ್ ಎರಡಂಕಿ ಬೆಳವಣಿಗೆ ದಾಖಲಿಸಿದೆ. ಲೀಗ್‌ನ ಬ್ರ್ಯಾಂಡ್ ಮೌಲ್ಯವೂ 4.3 ಬಿಲಿಯನ್ ಡಾಲರ್ (ಸುಮಾರು 41,106 ಕೋಟಿ ರೂ) ತಲುಪಿದ್ದು, 2023ರ ನಂತರ 1.1 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಏರಿಕೆಯಾಗಿದೆ ಎನ್ನಲಾಗಿದೆ.
ದಾಖಲೆ ಬೆಲೆಗೆ ಆರ್‌ಸಿಬಿ ಮಾರಾಟ
ಇನ್ನು 2026ರಲ್ಲಿ ಆರ್‌ಸಿಬಿ ಫ್ರಾಂಚೈಸಿಯನ್ನು ಬ್ಲ್ಯಾಕ್‌ಸ್ಟೋನ್, ಬೋಲ್ಟ್ ವೆಂಚರ್ಸ್, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಒಳಗೊಂಡ ಒಕ್ಕೂಟವು 1.78 ಬಿಲಿಯನ್ ಡಾಲರ್ ಮೌಲ್ಯದಲ್ಲಿ ಖರೀದಿಸಿತು.
ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡವನ್ನು ಮಿತ್ತಲ್ ಕುಟುಂಬ ಮತ್ತು ಆದಾರ್ ಪೂನಾವಾಲಾ ಅವರು 1.65 ಬಿಲಿಯನ್ ಡಾಲರ್ ಮೌಲ್ಯದಲ್ಲಿ ಸ್ವಾಧೀನಪಡಿಸಿಕೊಂಡರು.
ಡಿಜಿಟಲ್ ವೀಕ್ಷಣೆಯಲ್ಲೂ ಐಪಿಎಲ್‌ಗೆ ಭರ್ಜರಿ ಲಾಭ
2026ರ ಐಪಿಎಲ್ ಟೂರ್ನಿ ಡಿಜಿಟಲ್ ವೀಕ್ಷಣೆಯಲ್ಲೂ ಹೊಸ ದಾಖಲೆ ಬರೆದಿದ್ದು, ಒಟ್ಟು 1.06 ಬಿಲಿಯನ್ ಸ್ಕ್ರೀನ್‌ಗಳಲ್ಲಿ ಈ ಟೂರ್ನಿಯ ಪಂದ್ಯಗಳು ವೀಕ್ಷಿಸಲ್ಪಟ್ಟಿವೆ.
ಆರಂಭಿಕ ವಾರಾಂತ್ಯದಲ್ಲೇ 515 ಮಿಲಿಯನ್ ವೀಕ್ಷಕರು ಪಂದ್ಯಗಳನ್ನು ನೋಡಿದ್ದಾರೆ. ಒಟ್ಟು 32.6 ಬಿಲಿಯನ್ ನಿಮಿಷಗಳ ವೀಕ್ಷಣೆ ದಾಖಲಾಗಿದೆ. ಕನೆಕ್ಟೆಡ್ ಟಿವಿ (CTV) ವೀಕ್ಷಣೆ 26% ಹೆಚ್ಚಳ ಕಂಡರೆ, ಸಾಂಪ್ರದಾಯಿಕ ಟಿವಿ ವೀಕ್ಷಣೆ 18.8% ಕುಸಿದಿದೆ.
4ನೇ ಸ್ಥಾನಕ್ಕೆ ಕುಸಿದ ಸಿಎಸ್ ಕೆ, ಆರ್‌ಸಿಬಿ ಐತಿಹಾಸಿಕ ಸಾಧನೆ
ಸತತ 2ನೇ ವರ್ಷವೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಕಾರಣ ಹಾಗೂ ಎಂ.ಎಸ್. ಧೋನಿ ಅವರ ಮೈದಾನದಲ್ಲಿನ ಪಾತ್ರ ಕಡಿಮೆಯಾಗಿರುವುದು ಚೆನ್ನೈ ಸೂಪರ್ ಕಿಂಗ್ಸ್ ವಾಣಿಜ್ಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.
ಇದಕ್ಕೆ ತದ್ವಿರುದ್ಧ ಎಂಬಂತೆ ಮೈದಾನದಲ್ಲಿನ ಯಶಸ್ಸು, ಅಪಾರ ಅಭಿಮಾನಿ ಬಳಗ ಮತ್ತು ಬಲಿಷ್ಠ ಡಿಜಿಟಲ್ ಹಾಜರಾತಿಯ ಬಲದಿಂದ ಆರ್‌ಸಿಬಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಾಗಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.