ಓದಿನತ್ತ ಗಮನಹರಿಸಿ, ಉತ್ತಂಗದತ್ತ ಸಾಗಿ: ಸಿದ್ದೇಶ್ವರ ಶ್ರೀ
ಹುಮನಾಬಾದ್: ವ್ಯಸನಗಳಿಗೆ ಬಲಿಯಾಗದೆ, ಮನಸ್ಸನ್ನು ಓದಿನತ್ತ ಗಮನಹರಿಸಿ, ಉತ್ತಂಗದತ್ತ ಸಾಗುವ ಕನಸನ್ನು ಹೊಂದುವಂತೆ ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ ಎಂದು ಬಿಜಾಪುರ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಸ್ವಾಮಿ ತಿಳಿಸಿದರು.
ಪಟ್ಟಣದ ವೀರಭದ್ರೇಶ್ವರ ಶಿಕ್ಷಣ ದತ್ತಿಯ ಕಾಲೇಜಲ್ಲಿ ವಿವೇಕಾನಂದರ 150ನೇ ಜನ್ಮ ದಿನೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿ, ಜ್ಞಾನಾರ್ಜನೆ ಹೆಚ್ಚಾದಷ್ಟೂ ವ್ಯಕ್ತಿಯ ಬಹುಮುಖ ಪ್ರದರ್ಶನ ಪ್ರದರ್ಶಿಸಲು ಸಾಧ್ಯ ಎಂದರು.
ಭವಿಷ್ಯ ರೂಪಿಸಿ: ಯುವ ಜನಾಂಗದಲ್ಲಿ ಸಂಘಟನೆ ಶಕ್ತಿ ಇದ್ದು, ಉನ್ನತ ಮಟ್ಟದ ಶಿಕ್ಷಣ ಪಡೆದು, ದೇಶದ ಭವಿಷ್ಯ ರೂಪಿಸಬೇಕು. ಸಂಶೋಧನೆಯತ್ತ ಮುಖ ಮಾಡಿ, ತಮ್ಮ ಗಮನ ಸೆಳೆಯುವ ಪ್ರಯತ್ನಗಳಾಗಬೇಕೆಂದರು.
ಜನಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಉದ್ಯೋಗ ಲಭಿಸದೆ ಯುವಕರು ತಪ್ಪು ದಾರಿ ಅನುಸರಿಸುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಮನಸ್ಸನು ಹಗುರಗೊಳಿಸಿ, ತಮ್ಮ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬಳಸಿ ಕಾಯಕ ಮಾಡುತ್ತಾ ಜೀವನ ಸಾಗಿಸಿ ಎಂದರು.
ದುಡಿದು ಸಾಧನೆ ಮಾಡಲು ಅವಕಾಶವಿದ್ದು, ಯುವಕರು ಇದನ್ನು ಬಳಸಿಕೊಂಡು ಯಾರಿಗೂ ಭಾರವಾಗದಂತೆ ಮುನ್ನಡೆಯುವ ಅವಶ್ಯಕತೆ ಇದೆ ಎಂದರು.
ಸೇವೆಗೆ ಸಂದ ಕೊಡುಗೆ: ಕೋಲಿಂಬಿಯಾ ವಿಶ್ವವಿದ್ಯಾಲಯದಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಆಧರಿಸಿ ಡಾ. ಚಂದ್ರಶೇಖರ ಪಾಟೀಲ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು, ಅವರಿಗೆ ಇನ್ನು ಹೆಚ್ಚು ಸೇವೆ ಮಾಡುವಂತೆ ಮಾಡಿದೆ ಎಂದರು.
ಶಾಸಕ ರಾಜಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ವಿವಿಧ ಶಾಲಾ ಕಾಲೇಜುಗಳು ಪ್ರಾರಂಭಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದರು.ಜನರ ಆಶೋತ್ತರಗಳಿಗೆ ಸ್ಪಂದಿಸಿ ಉನ್ನತ ಶಿಕ್ಷಣ ಲಭಿಸುವಂತೆ ಕಲ್ಪಿಸಲಾಗುತ್ತಿದೆ ಎಂದರು.
ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಚಂದ್ರಶೇಖರ ಪಾಟೀಲ್ರಿಗೆ ಸಿದ್ದೇಶ್ವರ ಸ್ವಾಮಿ ಸತ್ಕರಿಸಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಕಾಲೇಜು ಪ್ರಾಚಾರ್ಯ ಡಿ.ಎಂ. ನಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಎಸ್ ಮಠಪತಿ ಸ್ವಾಗತಿಸಿ, ಸೋಮನಾಥ ಯಾಳವಾರ್ ನಿರೂಪಿಸಿ, ನಿಂಗಣ್ಣಾ ಬಿರಾದಾರ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.