ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೀದರ್

ಕೆಂಭಾವಿ ತಾಲೂಕು ರಚನೆಗೆ ಆಗ್ರಹ

Parashurama
Updated On : 10 Feb 2013, 11:00 am

ಕೆಂಭಾವಿ: ತಾಲೂಕು ಕೇಂದ್ರವನ್ನಾಗಿ ಮಾಡಲು ಎಲ್ಲ ಅರ್ಹತೆ ಇದ್ದರೂ ಪರಿಗಣಿಸದೇ ಇರುವ ಸರ್ಕಾರದ ಕ್ರಮವನ್ನು ಖಂಡಿಸಿ ಇಲ್ಲಿಯ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
  ಕೆಲವು ವರ್ಷಗಳ ಹಿಂದೆಯೇ ಕೆಂಭಾವಿ ಪಟ್ಟಣವು ತಾಲೂಕು ಕೇಂದ್ರವಾಗಬೇಕಾಗಿತ್ತು. ಎಲ್ಲ ಅರ್ಹತೆ ಹೊಂದಿದ್ದರೂ ಪರಿಗಣಿಸದೇ ಇರುವುದು ಇಲ್ಲಿಯ ಜನತೆಗೆ ಮಾಡಿದ ಅನ್ಯಾಯವಾಗಿದೆ. ತಾಲೂಕಾ ಕೆಂದ್ರವಾಗುವ ನಿರೀಕ್ಷೆಯಲ್ಲಿದ್ದ ಜನರಿಗೆ ತುಂಬಾ ನಿರಾಶೆಯಾಗಿದೆ ಎಂದು ಸರ್ಕಾರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
  ಗ್ರಾಪಂ ಕಾರ್ಯಾಲಯದಿಂದ ಬಸವೇಶ್ವರ ವೃತ್ತದವರೆಗೆ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.ಸುಮಾರು 20 ವರ್ಷಗಳಿಂದ ಹೋರಾಟ: ಕೆಂಭಾವಿ ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಸುಮಾರು 20 ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಹೊಸದಾಗಿ 43 ತಾಲೂಕು ಕೇಂದ್ರಗಳನ್ನು ರಚಿಸಿ ಘೋಷಿಸಲಾಗಿದೆ. ಇದರಲ್ಲಿ ತಾಲೂಕು ಪುನರ್ ವಿಂಗಡನಾ ಸಮಿತಿಯು ಶಿಫಾರಸು ಮಾಡದ ಕೆಲವು ಪಟ್ಟಣಗಳನ್ನು ಸರ್ಕಾರ ತಾಲೂಕುಗಳನ್ನಾಗಿ ಘೋಷಿಸಿದೆ. ಆದರೆ ತಾಲೂಕು ರಚನಗೆ ಎಲ್ಲ ಸೌಕರ್ಯಗಳನ್ನು ಹೊಂದಿರುವ ಕೆಂಭಾವಿಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
  ತಾಲೂಕು ಪುನರ್ ರಚನಾ ಸಮಿತಿಗಳ ವರದಿಗಳಲ್ಲಿ ಕೆಂಭಾವಿ ತಾಲೂಕು ರಚನೆಗೆ ಯೋಗ್ಯ ಎಂದು ಹೇಳಲಾಗಿದೆ. ಧಾರ್ಮಿಕ, ಐತಿಹಾಸಿಕ ಶರಣರ ನಾಡೆಂದು ಪ್ರಸಿದ್ಧವಾಗಿದೆ. ಕೆಂಭಾವಿಯ ವಲಯದಲ್ಲಿ ಸುಮಾರು 60- 70 ಹಳ್ಳಿಗಳಿದ್ದು, ಪಟ್ಟಣದ ಗ್ರಾಪಂ.ನಲ್ಲಿ 33 ಸದಸ್ಯರನ್ನು ಕೂಡಾ ಹೊಂದಿದೆ. 31 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿದ್ದರೂ ಸರ್ಕಾರ ತಾಲೂಕು ಕೇಂದ್ರವನ್ನಾಗಿ ಪರಿಗಣಿಸದಿರುವುದು ಖಂಡನೀಯ.
ಸರ್ಕಾರದ ಕ್ರಮಕ್ಕೆ ಖಂಡನೆ: ಮುಖ್ಯಮಂತ್ರಿ ಶೆಟ್ಟರ್ ಅವರು ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಪರಿಗಣನೆಗೆ ತೆಗೆದುಕೊಳ್ಳದಿರುವುದು ಕೆಂಭಾವಿ ವಲಯದ ಜನತೆಗೆ ದಿಗ್ಭ್ರಮೆ ಉಂಟುಮಾಡಿದೆ ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಭೀಮನಗೌಡ ಕಾಚಾಪುರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
  ಕನ್ನಡ ಕ್ರಾಂತಿ ದೀಪದ ಉತ್ತರ ಕರ್ನಾಟಕ ಸಂಚಾಲಕ ಅನೀಲ್ ರಾಜ್ ತುಂಬಗಿ, ಕೆಂಭಾವಿ ತಾಲೂಕು ಕೇಂದ್ರವನ್ನು ಮಾಡಿದರೆ ಸರ್ಕಾರಕ್ಕೆ ಯಾವುದೇ ಹೊರೆಯಾಗುತ್ತಿರಲಿಲ್ಲ. ಕೆಂಭಾವಿ ವಲಯವು ಬಹುತೇಕ ನೀರಾವರಿ ಪ್ರದೇಶವಾಗಿದ್ದು, ತಾಲೂಕು ಕೇಂದ್ರವನ್ನಾಗಿ ಮಾಡಲು ಎಲ್ಲ ಸೌಕರ್ಯ ಮತ್ತು ಅರ್ಹತೆಯನ್ನು ಹೊಂದಿದೆ. ಇಷ್ಟೆಲ್ಲ ಸೌಕರ್ಯಗಳನ್ನು ಹೊಂದಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ತಾಲೂಕು ಕೇಂದ್ರದಿಂದ ಕೆಂಭಾವಿ ವಂಚಿತವಾಗಲು ಕಾರಣ ಎಂದು ಆರೋಪಿಸಿದರು.
  ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕೆಂಭಾವಿ ವಲಯವು ಜನಪ್ರತಿನಿಧಿಗಳಿಗೆ ನೆನಪಾಗುತ್ತದೆ ಎಂದು ಕಿಡಿಕಾರಿದರು. ಎಂ.ಡಿ. ಜಾಫರ್, ಹಳ್ಳೆಪ್ಪ ಕವಲ್ದಾರ್, ನಾಗರೆಡ್ಡಿ ಧರಿ, ಸುಭಾಷ್ ಮ್ಯಾಗೇರಿ, ರಂಗಪ್ಪ ಮ್ಯಾಗೇರಿ, ಗೀರಿಶ್ ಭಂಗ್, ಆನಂದ ಆಶಿಂಗಾಳ್, ವಿಶ್ವನಾಥ್ ಬಂಡೋಳಿ, ತಿರುಪತಿ, ಕೆಂಚಪ್ಪ ಹಿರೆಕುರಬರ, ಶ್ರೀಶೈಲ್ ಕುಮಾರ, ಭೀಮು ಶಾಪುರ, ಕೆಂಚಪ್ಪ ತುಂಬಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments