ಕೇಂದ್ರ ಬಜೆಟ್ಟಲ್ಲಿ 50 ಸಾವಿರ ಕೋಟಿ ಮೀಸಲಿಡಲಿ
ಬೀದರ್: ಕೇಂದ್ರ ಸರ್ಕಾರದಿಂದ ಮಂಡಿಸಲಾಗುತ್ತಿರುವ ಮುಂದಿನ ಬಜೆಟ್ನಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸುಮಾರು ರು. 50 ಸಾವಿರ ಕೋಟಿ ಅನುದಾನವನ್ನು ಮೀಸಲಿಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರದ ಕಾಂಗ್ರೆಸ್ ಸರ್ಕಾರ 371(ಜೆ) ಜಾರಿಗೊಳಿಸಿದ್ದನ್ನು ಪರಿಗಣಿಸಿ ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಹೈ-ಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಸುಮಾರು ರು. 5 ಸಾವಿರ ಕೋಟಿ ನೀಡಿದ್ದೇವೆ. ಅದರಂತೆ ಕೇಂದ್ರ ಸರ್ಕಾರವೂ ವಿಶೇಷ ಪ್ಯಾಕೇಜ್ ಮೂಲಕ ರು. 50 ಸಾವಿರ ಕೋಟಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
ವಿಮಾನ ನಿಲ್ದಾಣಕ್ಕೆ ಬ್ರೇಕ್: ಬೆಂಗಳೂರಿನಿಂದ ನೂರಾರು ಕಿ.ಮೀ ದೂರದಲ್ಲಿರುವ ಬೀದರ್ ನಗರಕ್ಕೆ ಪ್ರಯಾಣಿಕರ ದಟ್ಟಣೆಯನ್ನು ಅರಿತು ನೇರ ರೈಲು ಸೇವೆ ಆರಂಭಿಸಬೇಕು. ಬೀದರ್ನಲ್ಲಿರುವ ಸುಮಾರು 1,500 ಎಕರೆ ಕೈಗಾರಿಕಾ ಪ್ರದೇಶವು ಸಂಪೂರ್ಣವಾಗಿ ಸ್ಮಶಾನ ಭೂಮಿಯಂತಾಗಿದೆ. ಆದ್ದರಿಂದ ಈ ಬಜೆಟ್ನಲ್ಲಿ ಜಿಲ್ಲೆಯನ್ನು ಕೈಗಾರಿಕೆ ರಹಿತ ಜಿಲ್ಲೆಯನ್ನಾಗಿ ಘೋಷಿಸಿ, ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಬೇಕೆಂದರು.
ಕಾಂಗ್ರೆಸ್ನ ಹಿರಿಯ ನಾಯಕರಾದ ಧರಂಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಶಂಕೆ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಉದಾಹರಣೆಯಂತೆ ಬೀದರ್ ನಾಗರಿಕ ವಿಮಾನ ನಿಲ್ದಾಣ ಆರಂಭಿಸಿದ್ದರೆ ಗುಲ್ಬರ್ಗ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತದೆ ಎಂಬ ಏಕೈಕ ಉದ್ದೇಶದಿಂದ ಇದನ್ನು ಆರಂಭಿಸದೇ ಗುಲ್ಬರ್ಗದಲ್ಲಿ ಆರಂಭವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
371 ಕಲಂ ತಿದ್ದುಪಡಿಗೆ ಕಾಂಗ್ರೆಸ್ ಮೊಹರು ಸರಿಯಲ್ಲ: ಹೈದ್ರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ನಾವು ಜಾರಿ ಮಾಡಿದ್ದೇವೆ ಎಂದು ಕಾಂಗ್ರೆಸ್ನವರು ಜಂಬ ಕೊಚ್ಚಿಕೊಂಡು ಹೇಳುತ್ತಿರುವುದು ಸರಿಯಲ್ಲ. ಸಂಸತ್ನಲ್ಲಿ ಎಲ್ಲ ಪಕ್ಷದವರು ಒಮ್ಮತದಿಂದ ಇದನ್ನು ಜಾರಿ ಮಾಡಲು ಸಹಕರಿಸಿದ್ದಾರೆ. ಒಂದು ವೇಳೆ ಇವರೊಬ್ಬರೇ ಮಾಡಿದ್ದೆ ಆಗಿದ್ದರೆ, ಕಳೆದ 40-45 ವರ್ಷದಿಂದ ತಮ್ಮ ಆಡಳಿತದ ಅವಧಿಯಲ್ಲಿ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ 30 ವರ್ಷಗಳ ಹಿಂದೆ ಹಾಗೂ ಆಂಧ್ರದ ತೆಲಂಗಾಣಾದವರು 25 ವರ್ಷಗಳ ಹಿಂದೆ ಈ ಸೌಲಭ್ಯವನ್ನು ಪಡೆದಿದ್ದಾರೆ. ಆದರೆ ಈ ಭಾಗದ ಕಾಂಗ್ರೆಸ್ ನಾಯಕರಿಂದಲೇ ಹೈ-ಕ ಭಾಗಕ್ಕೆ ಸೌಲಭ್ಯ ಪಡೆಯಲು ವಿಳಂಬವಾಗಿದೆಂದು ದೂರಿದ್ದರು.
ಹೈ-ಕ ಭಾಗಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಬಂಪರ್ ಕೊಡುಗೆಯಾಗಿದೆ. ಹೈ-ಕ ಭಾಗದ ಗ್ರಾಮೀಣ ಅಭಿವೃದ್ಧಿಗಾಗಿ ರು. 316 ಕೋಟಿ ನಗರಾಭಿವೃದ್ಧಿಗೆ ರು. 583 ಕೋಟಿ ಹಾಗೂ ಡಾ. ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ರಾಜ್ಯದ 114 ತಾಲೂಕುಗಳಿಗೆ ಸುಮಾರು ರು. 10,814 ಕೋಟಿ ಇದರಲ್ಲಿ ಹೈ-ಕ ಭಾಗದ ಸುಮಾರು 40 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹಾಗೂ ಸಾವಿರ ಕೋಟಿ ರು. ಮೀಸಲಿಡಲಾಗಿದೆ ಎಂದರು.
ಬಂಪರ್ ಕೊಡುಗೆ: ಬೀದರ್-ಗುಲ್ಬರ್ಗ ರೈಲ್ವೆ ಹಳಿ ನಿರ್ಮಾಣಕ್ಕಾಗಿ ರು. 193 ಕೋಟಿ ಅಗತ್ಯವಿದ್ದು, ಹೈ-ಕ ಭಾಗಕ್ಕೆ ಸರಿಸುಮಾರು ರು. 5 ಸಾವಿರ ಕೋಟಿ ನೀಡಲಾಗಿದೆ. ಇದರಲ್ಲಿ ಸುಮಾರು ರು. 900 ಕೋಟಿ ಜಿಲ್ಲೆಯ ಪಾಲಿಗೆ ಬರಲಿದೆ ಎಂದರು. ಹೈ-ಕ ಭಾಗದ 6 ಜಿಲ್ಲೆಗಳು ಹಾಗೂ ಮುಂಬೈ-ಕರ್ನಾಟಕದ 8 ಜಿಲ್ಲೆಗಳಲ್ಲಿ 36 ನೂತನ ತಾಲೂಕುಗಳನ್ನು ರಚಿಸಲಾಗಿದೆ. ಅದರಲ್ಲಿ ಬೀದರ್ ಜಿಲ್ಲೆಯಲ್ಲಿ ಕಳೆದ 30-40 ವರ್ಷಗಳಿಂದ ನೂತನ ತಾಲೂಕು ರಚನೆಗಗಾಗಿ ಹೋರಾಟ ನಡೆದಿದ್ದವು. ಇದರಿಂದ ಜಿಲ್ಲೆಯ ಕಮಲನಗರ, ಚಿಟಗುಪ್ಪ ಹಾಗೂ ಹುಲಸೂರ ಪಟ್ಟಣಗಳನ್ನು ತಾಲೂಕುಗಳನ್ನಾಗಿ ಘೋಷಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಬಾಬು ವಾಲಿ, ಬಸವರಾಜ ಜೋಜನಾ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.