3 ರೇಲ್ವೆ ಕೆಳ ಸೇತುವೆಗೆ 3.39 ಕೋಟಿ
ಬೀದರ್: ನಗರದ ಮೂರು ಸ್ಥಳಗಳಲ್ಲಿ ಕೆಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೇಲ್ವೆ ಕೆಳ ಸೇತುವೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ 3.39 ಕೋಟಿ ಅನುದಾನ ಬಿಡುಗಡೆಯಾಗಿದೆ.
ಸಾರ್ವಜನಿಕರ ಸಂಚಾರಕ್ಕೆ ಭಾರಿ ಅಡತಡೆಯಾಗಿದ್ದ ಅಪೂರ್ಣ ಕಾಮಗಾರಿಗಳು ಕೆಲ ಸಾವು ನೋವಿಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಸ್ಥಳೀಯ ಶಾಸಕ ರಹೀಮ್ಖಾನ್ ನೇತೃತ್ವದಲ್ಲಿ ಹಲವು ಸಂಘಟನೆಗಳು, ವ್ಯಾಪಾರಸ್ಥರು ಪ್ರತಿಭಟನೆಯನ್ನೂ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಚುನಾವಣೆ ಹಿನ್ನೆಲೆ ತರಾತುರಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಗೂ ಮುನ್ನ ಅನುದಾನ ಬಿಡುಗಡೆಯಾದಲ್ಲಿ ಕಾಮಗಾರಿಗೆ ಯಾವುದೇ ಅಡತಡೆ ಇರೊಲ್ಲ ಎಂಬ ಮಾತಿನ ಮಧ್ಯೆಯೇ ಇಲಾಖೆಯ ಕಾರ್ಯದರ್ಶಿಗಳು ಅನುದಾನ ಬಿಡುಗಡೆ ಮಾಡಿರುವ ಕುರಿತು ಜಿಲ್ಲಾಡಳಿತಕ್ಕೆ ಪತ್ರ ರವಾನಿಸಿದೆ.
ನಗರದ ಆರ್ಟಿಒ ಕಚೇರಿ ಬಳಿ, ಪೊಲೀಸ್ ಕಲ್ಯಾಣ ಮಂಟಪ ಹಾಗೂ ಅಶೋಕಾ ಹೋಟೆಲ್ ಬಳಿ ನಿರ್ಮಾಣ ಹಂತದಲ್ಲಿರುವ ಮೂರು ರೇಲ್ವೆ ಕೆಳ ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲು ರೇಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಶೇ.50ರ ಅನುಪಾತದಲ್ಲಿ ಖರ್ಚು ಮಾಡಲಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿದ್ದು, ಇನ್ನು ಕೇಂದ್ರದ ರೇಲ್ವೆ ಇಲಾಖೆ ತನ್ನ ಪಾಲಿನ ಖರ್ಚನ್ನು ಬಿಡುಗಡೆ ಮಾಡಬೇಕಿರುವುದು ಬಾಕಿ.
ಯಾವುದಕ್ಕೆ ಎಷ್ಟೆಷ್ಟು ವೆಚ್ಚ?: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಅಶೋಕಾ ಹೋಟೆಲ್ ಸಮೀಪದಲ್ಲಿ ನಿರ್ಮಿಸಲಾಗುತ್ತಿರುವ ರೇಲ್ವೆ ಕೆಳ ಸೇತುವೆಗಾಗಿ 2.38 ಕೋಟಿ ಖರ್ಚು ಮಾಡಲಿದ್ದು, ಆರ್ಟಿಒ ಕಚೇರಿ ಬಳಿ 89.44 ಲಕ್ಷ ಮತ್ತು ಪೊಲೀಸ್ ಕಲ್ಯಾಣ ಮಂಟಪದ ಸಮೀಪ ನಿರ್ಮಿಸಲಾಗುತ್ತಿರುವ ಸೇತುವೆಗೆ 30.45 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದು ಕಾರ್ಯದರ್ಶಿಗಳ ಪತ್ರದಲ್ಲಿ ತಿಳಿಸಲಾಗಿದೆ.
ಭೂ ಸ್ವಾಧೀನ, ಸ್ಥಳಾಂತರ, ರಸ್ತೆ ಅಗಲೀಕರಣ ಮತ್ತು ಸೇತುವೆ ನಿರ್ಮಾಣ ಈ ಕಾಮಗಾರಿಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸದ್ಯಕ್ಕೆ ಮೂರು ಕೆಳ ಸೇತುವೆಗಳು ಬಹುತೇಕ ಪೂರ್ಣಗೊಂಡಿದ್ದು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವುದಲ್ಲದೆ ಸೇತುವೆ ಎರಡೂ ಬದಿಯಲ್ಲಿ ಕೊಂಚ ಕಾಮಗಾರಿ ಬಾಕಿಯಿದೆ.
ಶೀಘ್ರವೇ ಪೈಪ್ಲೈನ್ ಸ್ಥಳಾಂತರ: ಸರ್ಕಾರ ಅನುದಾನ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ವೇಗ ಹೆಚ್ಚಲಿದೆ. ಕುಡಿವ ನೀರಿನ ಪೈಪ್ಲೈನ್ ಸ್ಥಳಾಂತರ ಕಾಮಗಾರಿ ಶೀಘ್ರದಲ್ಲಿ ನಡೆಯಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ತಿಳಿಸಿದ್ದಾರೆ.
ಪೊಲೀಸ್ ಕಲ್ಯಾಣ ಮಂಟಪದ ಸಮೀಪದಲ್ಲಿನ ರೇಲ್ವೆ ಕೆಳ ಸೇತುವೆ ಕಾಮಗಾರಿ ಅಡಿಯಲ್ಲಿ ರಸ್ತೆ ನಿರ್ಮಿಸುವ ಮುನ್ನ ಅಲ್ಲಿನ ಕೆಲ ಪೊಲೀಸ್ ಸಿಬ್ಬಂದಿ ವಾಸಿಸುತ್ತಿರುವ ಮನೆಗಳನ್ನು ತೆರವುಗೊಳಿಸಿ ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಬೇಕಿದೆ. ಇದಲ್ಲದೆ ಸದ್ಯಕ್ಕೆ ವಿದ್ಯಾರ್ಥಿಗಳ ಪರೀಕ್ಷೆ ಸಮಯ ಇದಾಗಿದ್ದರಿಂದ ಪರೀಕ್ಷಾ ಅವಧಿ ಮುಗಿದ ನಂತರ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.