ಎಲ್ಲ ಅನುದಾನ ಸದ್ಬಳಕೆಯಾಗಲಿ
ಬೀದರ್: ವಿವಿಧ ಅಭಿವೃದ್ಧಿಗಾಗಿ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಅನುದಾನ ಹಿಂತಿರುಗಿ ಹೋಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಿಕಾ ರಾಠೋಡ ಅಧಿಕಾರಿಗಳಿಗೆ ಸೂಚಿಸಿದರು.
ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಶಾಲಾ ಮಕ್ಕಳಿಗಾಗಿ ನಿರ್ಮಿಸಿರುವ ಶೌಚಾಲಯಗಳಿಗೆ ಕೀಲಿ ಹಾಕಲಾಗುತ್ತಿದ್ದು, ಈ ಕುರಿತಂತೆ ಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಪುನಃ ಶಾಲೆಗೆ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಕಾರ್ಯ, ಕಡ್ಡಾಯವಾಗಿ ಶಾಲೆಗೆ ಬರಲು ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ಸೈಕಲ್ ವಿತರಣೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ 586 ನ್ಯಾಯಬೆಲೆ ಅಂಗಡಿಗಳು ಗ್ರಾಮೀಣ ಭಾಗಗಳಲ್ಲಿ ಹಾಗೂ 157 ನಗರ, ಪಟ್ಟಣಗಳಲ್ಲಿದ್ದು ಜಿಲ್ಲೆಯಲ್ಲಿ ಒಟ್ಟು 5,41,114 ಪಡಿತರ ಚೀಟಿಗಳಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ 36564 ಮಕ್ಕಳಿದ್ದು (0-5 ವಯೋವುತಿಯುಳ್ಳ) 28, 860 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಬಿಸಿಜಿ ಧಡಾರ, ಕುಷ್ಠರೋಗ ನಿಯಂತ್ರಣ ಇತ್ಯಾದಿಗಳಲ್ಲಿ ಶೇ.90 ಗುರಿ ಸಾಧಿಸಿರುವ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಪೂರ್ಣ: ಲೋಕೋಪಯೋಗಿ ಇಲಾಖೆಯಿಂದ 643 ಕಾಮಗಾರಿಗಳ ಮಂಜೂರಾತಿಯಿದ್ದು, ಇವುಗಳಲ್ಲಿ 480 ಕಾಮಗಾರಿಗಳ ಗುರಿಯಿಟ್ಟುಕೊಂಡು 423 ಕಾಮಗಾರಿಗಳ ಪೂರ್ಣಗೊಳಿಸಿರುವುದಾಗಿ ತಿಳಿಸಿದರು. ಔರಾದ್ ತಾಲೂಕಿನಲ್ಲಿ ಕುಡಿವ ನೀರಿನ ಸರಬರಾಜು ಮಾಡಲು 31.5 ಲಕ್ಷ ಅನುದಾನವಿದ್ದು ಕಳೆದ ನ. 29ರಂದು ಕಾಮಗಾರಿ ಆರಂಭಿಸಿದ್ದು 18 ತಿಂಗಳಲ್ಲಿ ಪೂರ್ತಿಗೊಳಿಸುವುದಾಗಿ ನಗರ ನೀರು ಸರಬರಾಜ ಒಳಚರಡಿ ಮಂಡಳಿಯ ಅಧಿಕಾರಿ ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿ ನಿಗಮದಿಂದ ಕಳೆದ ವರ್ಷ 405 ಕೊಳವೆ ಬಾವಿ ಕೊರೆಯುವ ಗುರಿಯಿದ್ದು 187 ಗುರಿ ಸಾಧಿಸಿದೆ. ಈ ವರ್ಷ ಫಲಾನುಭವಿಗಳ ಪಟ್ಟಿ ಪಡೆಯಲಾಗಿದ್ದು ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತೋಟಗಾರಿಕೆ, ಅರಣ್ಯ, ದೇವರಾಜ ಅರಸು ಹಿಂದುಳಿದ ವರ್ಗಗಳ, ಸಣ್ಣ ನೀರಾವರಿ, ಸಹಕಾರ ಸಂಘ, ರೇಷ್ಮ, ತೋಟಗಾರಿಕೆ, ಪಶು ಸಂಗೋಪನ, ಮೀನುಗಾರಿಕೆ ಮಂತಾದ ಇಲಾಖೆಗಳ ಪ್ರಗತಿ ಪರಿಶೀಲಿಸಿ ಜಿಪಂ ಅಧ್ಯಕ್ಷೆ ದೀಪಿಕಾ ರಾಠೋಡ್ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ ಜಿಪಂ ಸಿಇಒ ಉಜ್ವಲಕುಮಾರ ಘೋಷ್ ಉಪಸ್ಥಿತರಿದ್ದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.