ಸಾಮಾಜಿಕ ಮಹಿಳೆಗೆ ಗೌರವ ಅಗತ್ಯ
ಕನ್ನಡಪ್ರಭ ವಾರ್ತೆ, ಬೀದರ್, ಮಾ. 9
ಜನ್ಮ ನೀಡುವ ತಾಯಿಗೆ ನಾವು ಸಮಾಜದಲ್ಲಿ ಗೌರವ ನೀಡಿದರೆ ಮಾತ್ರ ನಾವು ಜನ್ಮ ತಾಳಿದ್ದು ಸಾರ್ಥಕವಾಗುತ್ತದೆ ಎಂದು ರಾಜ್ಯ ಸಭೆ ಸದಸ್ಯ ಹಾಗೂ ಗುಲ್ಬರ್ಗದ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.
ನಗರದ ಚಿದಂಬರ ಶಿಕ್ಷಣ ಸಂಸ್ಥೆಯ ಸಿದ್ದಾರೂಢ ಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಆಯೋಜಿಸಲಾದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದಲ್ಲಿ ಮಹಿಳೆಗೆ ಗೌರವಯುತ ಸ್ಥಾನವಿದೆ. ಆದರೆ ಇತ್ತೀಚಿನ ಘಟನೆಗಳನ್ನು ನೋಡಿದರೆ ಸಮಾಜದಲ್ಲಿ ಮಹಿಳೆ ಗೌರವಯುತ ಜೀವನ ನಡೆಸುವುದೇ ಕಷ್ಟಕಾರವಾಗಿದೆ. ಆದ್ದರಿಂದ ಮಹಿಳೆಯರನ್ನು ಗೌರವದಿಂದ ನೋಡಬೇಕು. ಸುಸಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಶೇ. 44 ಜನರಿಗೆ ಕುಡಿಯುವ ನೀರಿಲ್ಲ: ಮನುಷ್ಯನಿಗೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ. ಆದರೆ ಅನ್ನ ನೀಡುವವನಿಗೆ ಸಮಾಜದಲ್ಲಿ ಗೌರವವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇಶಕ್ಕೆ ಭವಿಷ್ಯದ ಪ್ರಜೆಗಳ ಮೇಲೆ ಮಹತ್ವಪೂರ್ಣ ಜವಾಬ್ದಾರಿಯಿದೆ. ಮನುಷ್ಯ ಆರೋಗ್ಯವಂತರಾಗಬೇಕಾದರೆ ಕುಡಿಯಲು ಶುದ್ಧ ನೀರು ಬೇಕು. ಇಂದು 100 ಜನರಲ್ಲಿ 44 ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಯಾರೂ ಇದರ ಬಗ್ಗೆ ಯೋಚಿಸದೆ ಇರುವುದು ಕಳವಳಕಾರಿ ಸಂಗತಿ ಎಂದರು.
ಇಲ್ಲಿಯವರೆಗೆ ಸುಮಾರು 3 ಲಕ್ಷ ವಿದ್ಯಾರ್ಥಿಗಳೊಂದಿಗೆ ನೇರ ಪ್ರಶ್ನಿಸಿದರೆ ಶಿಕ್ಷಣ 5 ಜ್ಞಾನಕ್ಕಾಗಿ ಎಂದಿದ್ದಾರೆ. ಆದರೆ ನಂತರದಲ್ಲಿ ಅದೇ ವಿದ್ಯಾರ್ಥಿಗಳೇ ನೌಕರಿಗಾಗಿ ಓದುತ್ತಿದ್ದೇವೆ ಎನ್ನುತ್ತಾರೆ. ಇಂದು ದೇಶಕ್ಕೆ ಅನ್ನ ನೀಡುವವರಿಗೆ ಗೌರವ ಇಲ್ಲ. ಮಾತೆಯರಿಗೆ ಗೌರವ ಇಲ್ಲ, ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭಾವಿ ಪ್ರಜೇಗಳಾದ ವಿದ್ಯಾರ್ಥಿಗಳು ಅನ್ನ ಹಾಕುವ ರೈತ ತಲೆ ಎತ್ತಿ ಬದುಕುವಂತೆ ಮಾಡಬೇಕು ಎಂದರು.
ವಿದ್ಯಾದಾನ ಮಾಡಿ: ಸತ್ತವರ ಹೆಸರಿನಲ್ಲಿ ಲಕ್ಷಾಂತರ ರು. ಖರ್ಚು ಮಾಡುವವರು ಬಡ ಮಕ್ಕಳಿಗೆ ವಿದ್ಯಾದಾನ ಮಾಡಿ ಅವರನ್ನು ಒಳ್ಳೆಯ ಮಾನವರನ್ನಾಗಿ ಮಾಡಿದರೆ ಸಿಗುವ ಪುಣ್ಯ ಎಲ್ಲೂ ಸಿಗುವುದಿಲ್ಲ ಎಂದರು. ಇಂದು ತೋರಿಕೆಗಾಗಿ ಮಾಡದೆ ಒಳ ಮನಸ್ಸಿನಿಂದ ಮಾಡಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.
ಸಿದ್ದಾರೂಢ ಮಠದಲ್ಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮನಸ್ಸಿಗೆ ಖುಷಿ ನೀಡಿದೆ. ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಬಡವರು, ನಿರ್ಗತಿಕ ಮಕ್ಕಳಿಗೆ ಆಸರೆಯಾಗುವುದು ಆವಶ್ಯವಾಗಿದೆ. 10 ವರ್ಷಗಳಲ್ಲಿ ಮಾಡುವ ಸಾಧನೆಗೆ ಈಗಿನಿಂದಲೇ ಯೋಜನೆ ಹಾಕಿಕೊಳ್ಳಬೇಕು. ಆಗ ಮಾತ್ರ ಸಾಧನೆಯಲ್ಲಿ ಯಶಸ್ಸು ಕಾಣಬಹುದು ಎಂದರು.
ಚಿದಂಬರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಸ್ವಾಮಿ ಸಾನಿಧ್ಯ ವಹಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ಲಕ್ಷ್ಮೀಬಾಯಿ, ವೀರಶೆಟ್ಟಿ ಗಂಗಶೆಟ್ಟಿ, ಸಹ ಕಾರ್ಯದರ್ಶಿ ಶಿವರಾಜ ಶೆಟಕಾರ, ನಿರ್ದೇಶಕರಾದ ಶಿವಶರಣಪ್ಪ ಸಾವಳಗಿ, ಉದಯಭಾನು ಹಲವಾಯಿ, ಭಾರತಿಬಾಯಿ ಕಣಜಿ, ಶರಣಪ್ಪ ತಿರ್ಲಾಪೂರೆ, ಬಿಜಿ ಶೆಟಕಾರ, ರೇವಣಸಿದ್ದಪ್ಪ ಜಲಾದೆ, ಬಸವರಾಜ ವ್ಯಾಗೋರಿ, ಆಡಳಿತಾಧಿಕಾರಿ ಅಮರನಾಥ ಕಣಜಿ, ಸದಾನಂದ ಕಂದಗೂಳೆ, ವಿಎಸ್ ಪಾಟೀಲ್, ಆರ್ಯುವೇದಿಕೆ ಕಾಲೇಜಿನ ಪ್ರಾಚಾರ್ಯ ಕೆವಿಎಲ್ ಆಚಾರ್ಯ ಮತ್ತಿತರರು ಇದ್ದರು.
ಲಕ್ಷ್ಮಣ ಪೂಜಾರ ಸ್ವಾಗತಿಸಿ, ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷರಾದ ವಿರೂಪಾಕ್ಷ ಗಾದಗಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ನೇಹ ಸಮ್ಮಿಲನದ ಸ್ಮರಣ ಸಂಚಿಕೆಯನ್ನು ಪೂಜ್ಯರು ಬಿಡುಗಡೆ ಮಾಡಿದರು. ಹಳೆಯ ನೆನಪುಗಳ ಸಾಕ್ಷ್ಯಚಿತ್ರದ ಸಿಡಿಯನ್ನು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.