ಅಭಿವೃದ್ಧಿ ಚಟುವಟಿಕೆಯಲ್ಲಿ ಸ್ತ್ರೀ: ಡಾ.ಗೀತಾ
ಕನ್ನಡಪ್ರಭ ವಾರ್ತೆ, ಭಾಲ್ಕಿ, ಮಾ.16
ಇಂದು ಸ್ತ್ರೀಯರು ಸಮಯ ವ್ಯರ್ಥವಾಗಿ ಕಳೆಯದೆ, ಸದಾ ಅಭಿವೃದ್ಧಿಪರ ಚಟುವಟಿಕೆಯಲ್ಲಿ ತೊಡಗಿ ದೇಶದ ಆರ್ಥಿಕ ವಿಕಾಸಕ್ಕೆ ನೆರವಾಗುತ್ತಿದ್ದಾರೆಂದು ಡಾ.ಗೀತಾ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಮ್.ಆರ್.ಎ.ಪದವಿ ಪೂರ್ವ ಕಾಲೇಜಿನಲ್ಲಿ ಆರ್ಬಿಟ್ ಸಂಸ್ಥೆ ಹಾಗೂ ವಿವಿಧ ಮಹಿಳಾ ಮಹಾ ಸಂಘಗಳ ಸಹಯೋಗದೊಂದಿಗೆ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಯರ ಮೇಲಿನ ದೃಷ್ಟಿ ಬದಲಾಗದೆ ಹೋದರೆ, ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದರು.
ತಾಯಿ, ತಂಗಿ, ಅಕ್ಕನಂತೆ ಪರಸ್ತ್ರೀಯರನ್ನು ಗೌರವದಿಂದ ಕಾಣಬೇಕು, ಸ್ತ್ರೀ ಕೇವಲ ಕೆಲಸ ಮಾಡುವ ವಸ್ತು ಎಂದು ಭಾವಿಸದೆ, ಗೌರವಯುತವಾಗಿ ಕಾಣುವುದನ್ನು ಇಂದಿನ ಗಂಡಸರು ರೂಢಿಮಾಡಿಕೊಳ್ಳಬೇಕೆಂದು ತಿಳಿಸಿದರು.
ನಿಸರ್ಗದ ದೇಣಿಗೆ: ಸಿ.ಬಿ.ಕಾಲೇಜಿನ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗಡ್ಡೆ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಮಹಿಳೆಗೆ ಜನ್ಮ ಕೊಡುವ ಶಕ್ತಿ ಕೊಟ್ಟಿದ್ದು ನಿಸರ್ಗದ ದೊಡ್ಡ ದೇಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ.ಅಶೋಕ ರಾಜೋಳೆ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಗಂಡಿನಷ್ಟೇ ಸಮಾನ ಹಕ್ಕು ಪಡೆದಿದ್ದಾಳೆ, ಇಂದು ಮಹಿಳೆ ಅನೇಕ ಅಡೆತಡೆಗಳ ಮಧ್ಯೆವೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದರು.
ಕೃಷ್ಣಾ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಭಾಗವತ ಮಾತನಾಡಿ, ಮಹಿಳೆಯರು ಬ್ಯಾಂಕಿನಿಂದ ಪಡೆದ ಸಾಲ ಉತ್ಪಾದಕ ಚಟುವಟಿಕೆಗಳಿಗೆ ಬಳಸಿ, ಬ್ಯಾಂಕಿನ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಯೇಸು ನಿಲಯ ನಿರ್ದೇಶಕ ಸ್ವಾಮಿ ಜೋಸೆಫ ರೊಡ್ರಿಗಸ್, ಆರ್ಬಿಚ್ ಸಂಸ್ಥೆ ಸತತ 16 ವರ್ಷಗಳಿಂದ ಮಹಿಳಾ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪಂಚಶೀಲ ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷ ಪಾರ್ವತಿ ಎಲ್.ಗುಪ್ತಾ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು, ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸಾಂಪ್ರದಾಯಿಕ ಲಂಬಾಣಿ ನೃತ್ಯ, ಕೋಲಾಟ ಪ್ರದರ್ಶನ ನಡೆಸಿಕೊಟ್ಟರು. ಪುರಸಭೆ ಸದಸ್ಯ ಸುಕನ್ಯ ರೇಷ್ಮೆ, ಜಾಗೃತಿ ಮಹಿಳಾ ಸಂಘದ ಅಧ್ಯಕ್ಷ ಕುಂದನಬಾಯಿ ಠಾಕುರ, ಶೋಭಾ ಟೀಚರ್, ಸಿಸ್ಟರ್ ನೇಬಲ್, ಸಿಸ್ಟರ್ ಮೇರಿ, ಪುರಸಭೆ ಮಾಜಿ ಅಧ್ಯಕ್ಷ ಜೈಶ್ರೀ ಪ್ರಕಾಶ ಮಾನಕರಿ, ಅನಿತಾ ಪಾಟೀಲ, ದೆವಕಿ ಅಳ್ಳೆ ಮುಂತಾದವರು ಉಪಸ್ಥಿತರಿದ್ದರು. ಭಾರತಬಾಯಿ ನಿರುಪಿಸಿ, ರೂಪಾ ರಾಜಕುಮಾರ ಸ್ವಾಗತಿಸಿ ಜ್ಯೋತಿ ಪ್ರಕಾಶ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.