ನೀರು ಸರಬರಾಜು ಯೋಜನೆ ತ್ವರಿತ ಗತಿಗೆ ಆಗ್ರಹ
ಬೀದರ್: ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ 24 ಗಂಟೆ ಕುಡಿಯುವ ನೀರು ಒದಗಿಸುವ ಕಾಮಗಾರಿಗಳು ಅತ್ಯಂತ ನಿಧಾನಗತಿಯಲ್ಲಿ ಸಾಗಿದೆ. ಅದನ್ನು ತ್ವರಿತಗೊಳಿಸುವತ್ತ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.
ಆಮೆಗತಿ ಕಾಮಗಾರಿ: ಈ ಕುರಿತಂತೆ ಸಂಸ್ಥೆಯ ಅಧ್ಯಕ್ಷ ಬಿ.ಜಿ ಶೆಟಕಾರ್ ಅವರು ನಗರಾಭಿವೃದ್ಧಿ ಸಚಿವ ಸುರೇಶಕುಮಾರ ಅವರಿಗೆ ಪತ್ರ ಬರೆದಿದ್ದು ನಗರದಲ್ಲಿ ನಡೆಯುತ್ತಿರುವ ಈ ಎರಡು ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಸದರಿ ಕೆಲಸಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಸಾಕಷ್ಟು ಪ್ರಮಾಣದಲ್ಲಿ ಕೆಲಸಗಾರರನ್ನು ಹೊಂದಿರುವುದಿಲ್ಲ ಅಲ್ಲದೇ ತ್ವರಿತಗತಿಯಿಂದ ಮುಗಿಸುವ ಕುರಿತು ಗಂಭೀರತೆಯನ್ನೂ ಹೊಂದಿಲ್ಲ ಎಂಬುದು ಕಂಡು ಬರುತ್ತಿದೆ ಎಂದಿದ್ದಾರೆ. ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಕೆಲಸ ನಡೆಯುತ್ತಿರುವುದರಿಂದ ಜನರ ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇದೇ ವೇಗದಲ್ಲಿ ಕೆಲಸ ನಡೆದರೆ ಇದು ಪೂರ್ಣಗೊಳ್ಳಲು ಸುಮಾರು 2ರಿಂದ 3 ವರ್ಷಗಳ ಸಮಯ ಬೇಕಾಗಬಹುದು. ಹಾಗಾದಲ್ಲಿ ಜನರು ಕುಡಿಯುವ ನೀರಿಗಾಗಿ ಬಹಳಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಈ ಕುರಿತು ಮುತುವರ್ಜಿ ವಹಿಸಿ ಕೆಲಸದಲ್ಲಿ ತೀವ್ರತೆ ತಂದು ಅದನ್ನು ಬೇಗ ನಿರ್ವಹಿಸುವಂತೆ ಸಂಬಂಧಿತರಿಗೆ ಆದೇಶಿಸಬೇಕು ಅಥವಾ ಗುತ್ತಿಗೆದಾರರು ನಿಗದಿಪಡಿಸಿದ ಸಮಯದಲ್ಲಿ ಕೆಲಸ ಮುಗಿಸುವುದಿಲ್ಲವೆಂದು ಕಂಡು ಬಂದಲ್ಲಿ ಅವರನ್ನು ಬದಲಿಸಬೇಕು ಎಂದು ಶೆಟಕಾರ್ ಮನವಿ ಮಾಡಿದ್ದಾರೆ.
ಇಂದು ಅಭಿನಂದನಾ ಗ್ರಂಥ ಬಿಡುಗಡೆ
ಬೀದರ್: ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರ ಕುರಿತಾದ ಶಾಹೀನ್ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಇದೇ ಮಾ. 17ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಸಾಹಿತಿ ರಂಜಾನ್ ದರ್ಗಾ ಕಾರ್ಯಕ್ರಮ ಉದ್ಘಾಟಿಸಿ ಗ್ರಂಥ ಸಮರ್ಪಿಸಲಿದ್ದಾರೆ. ಹಿರಿಯ ನ್ಯಾಯವಾದಿ ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ. ಮೀನಾಕ್ಷಿ ಬಾಳಿ ಗ್ರಂಥ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಕಲ್ಯಾಣ ಕರ್ನಾಟಕ ಪ್ರತಿಷ್ಠಾದ ಅಧ್ಯಕ್ಷ ಬಸವಕುಮಾರ ಪಾಟೀಲ್, ಗ್ರಂಥದ ಸಂಪಾದಕ ದೇಶಾಂಶ ಹುಡಗಿ ಹಾಗೂ ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಪಾಲ್ಗೊಳ್ಳಲಿದ್ದಾರೆ. ಹಣಮಂತಪ್ಪ ವಲ್ಲೇಪುರೆ ಸ್ವಾಗತಿಸುವರು ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಗಾಯನ ಪ್ರಸ್ತುತಪಡಿಸುವರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅಬ್ದುಲ್ ಖದೀರ್ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಅಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ್, ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಹಾಗೂ ಸಂಚಾಲಕ ಶಂಭುಲಿಂಗ ವಾಲ್ದೊಡ್ಡಿ ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.