ಫೋಟೋಗ್ರಾಫರ್ ಗುಲಾಂ ಮುಂತಕಾ ಇನ್ನಿಲ್ಲ
ಕನ್ನಡಪ್ರಭ ವಾರ್ತೆ, ಬೀದರ್, ಮಾ.16
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಫೋಟೋಗ್ರಾಫರ್, ಕ್ಯಾಮರಾ ಹಿರಿಯ ಎಂಜಿನಿಯರ್ ಗುಲಾಂ ಮುಂತಕಾ(82) ಶನಿವಾರ ಬೆಳಗಿನ ಜಾವ 4.30ರ ಸುಮಾರಿಗೆ ನಗರದ ಮನಿಯಾರ್ ತಾಲೀಮ್ನಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿಜಾಮ್ ಆಡಳಿತ ಅವಧಿಯಲ್ಲಿನ ಪೊಲೀಸ್ ಫೋಟೋಗ್ರಾಫರ್ ಆಗಿದ್ದ ಗುಲಾಂ ಮುಸ್ತಫಾ ಅವರ ಪುತ್ರ ಈ ಗುಲಾಂ ಮುಂತಕಾ. 7ನೇ ವಯಸ್ಸಿನಲ್ಲಿಯೇ ಕ್ಯಾಮರಾಮನ್ ಎನಿಸಿಕೊಂಡಿದ್ದ. ಇವರು 8ನೇ ತರಗತಿವರೆಗೆ ಮಾತ್ರ ಓದಿದ್ದರೂ ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸುವಲ್ಲೂ ಖ್ಯಾತಿ ಹೊಂದಿದ್ದರು.
ಅವರು ಭಾರತದ ಪ್ರಥಮ ಪ್ರಧಾನಿ ನೆಹರು ಅವರಿಂದ ಹಿಡಿದು ಈವರೆಗಿನ ಎಲ್ಲ ಪ್ರಧಾನಮಂತ್ರಿಗಳ ಜೊತೆಗೆ ಕರ್ನಾಟಕದ ಎಲ್ಲ ಸಿಎಂ, ರಾಜ್ಯಪಾಲರು ಹಾಗೂ ಗಣ್ಯ ವ್ಯಕ್ತಿಗಳ ಫೋಟೋಗಳನ್ನು ಸೆರೆ ಹಿಡಿದಿದ್ದು ವಿಶೇಷ.
ಆರಂಭದಲ್ಲಿ ಹಳೆ ವಿಧಾನದಲ್ಲಿ ಗ್ಲಾಸ್ ನೆಗೆಟಿವ್ಗಳಿಂದ ಫೋಟೋ ತೆಗೆಯುತ್ತಿದ್ದ ಇವರು ನಂತರ ಬಂದ ಎಲ್ಲ ಬಗೆಯ ಕ್ಯಾಮೆರಾಗಳನ್ನು ಉಪಯೋಗಿಸಿ ಅಸಂಖ್ಯಾತ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅವರ ಸಂಗ್ರಹದಲ್ಲಿ ನೂರಾರು ಕ್ಯಾಮೆರಾ, ಅಪರೂಪದ ಲೆನ್ಸ್ಗಳಿವೆ.
ಖ್ಯಾತ ಫೋಟೋಗ್ರಾಫರ್: ಮುಂಬೈನ ಗುಜರಿ ಅಂಗಡಿಯೊಂದರಲ್ಲಿ ಕಣ್ಣಿಗೆ ಬಿದ್ದ ಸರ್ಕ್ಯೂಟ್ ಕ್ಯಾಮೆರಾ ಖರೀದಿಸಿ ಅದರ ಮೂಲಕವೇ 1 ಅಡಿ ಅಗಲ ಹಾಗೂ 9 ಅಡಿ ಉದ್ದದ ನೆಗೆಟಿವ್ ತೆಗೆಯುವ ಮೂಲಕ ದೇಶದ ಖ್ಯಾತ ಫೋಟೋಗ್ರಾಫರ್ ಎನಿಸಿಕೊಂಡರು. ಇದೇ ಕ್ಯಾಮೆರಾ ಬಳಸಿ ಪರಸ್ಪರ ಎದುರು ಬದುರಾಗಿದ್ದ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಹಾಗೂ ತಾಜಮಹಲ್ ಹೋಟೆಲ್ನ ಫೋಟೋ ಕ್ಲಿಕ್ಕಿಸಿ ಮತ್ತಷ್ಟು ಜನಮನ್ನಣೆ ಗಳಿಸಿದ್ದರು.
ಫೋಟೋ ಎಂಜಿನಿಯರ್ ಎಂದೆನಿಸಿಕೊಂಡಿದ್ದ ಮುಂತಕಾ 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. 2008ರಲ್ಲಿ ಅವರ ಜೀವನ ಚರಿತ್ರೆ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರಕರ್ತ, ಸಾಹಿತಿ ದೇವು ಪತ್ತಾರ್ ಅವರು ಪುಸ್ತಕ ಪ್ರಕಟಿಸಿದ್ದರು. ಮೈಸೂರು ರಂಗಾಯಣದಿಂದ ಪಡೆದಿದ್ದ ಅದ್ಧೂರಿಯ ಸನ್ಮಾನ ಸ್ಮರಣೀಯ ಎಂದು ಯಾವಾಗಲೂ ಹೇಳಿಕೊಳ್ಳುತ್ತಿದ್ದರು ಮುಂತಕಾ. ಇದೀಗ ಈ ಹಿರಿಯ ಫೋಟೋಗ್ರಾಫರ್ ನೆನಪು ಮಾತ್ರ.
ಗುಲಾಂ ಮುಂತಕಾ ಅಂತ್ಯಕ್ರಿಯೆ: ಮುಂತಕಾ ಒಬ್ಬ ಕಿರಿಯ ಸಹೋದರರನ್ನು ಅಗಲಿದ್ದಾರೆ. ಬೀದರ್ನ ಮನಿಯಾರ್ ತಾಲೀಮ್ನ ಮಜೀದ್ ಮುಜಾಫರ್ ಹುಸೇನಿ ಸ್ಮಶಾನ ಭೂಮಿಯಲ್ಲಿ ಮಧ್ಯಾಹ್ನ ಅಪಾರ ಬಂಧು, ಮಿತ್ರರ ನಡುವೆ ಧಾರ್ಮಿಕ ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಬೀದರ್ ಶಾಸಕ ರಹೀಮ್ಖಾನ್, ಜಿಲ್ಲಾಧಿಕಾರಿ ಡಾ. ಜಾಫರ್, ಜಿಪಂ ಸಿಇಒ ಉಜ್ವಲಕುಮಾರ ಘೋಷ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್, ಗುಲಾಂ ಮುಂತಕಾ ಅವರ ಕುರಿತ ಕ್ಯಾಮೆರಾ ಎಂಜಿನಿಯರ್ ಗುಲಾಂ ಮುಂತಕಾ ಪುಸ್ತಕದ ಲೇಖಕ, ಪತ್ರಕರ್ತ ದೇವು ಪತ್ತಾರ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಸಿದ್ರಾಮಯ್ಯ ಸ್ವಾಮಿ, ಶಶಿಕುಮಾರ ಪಾಟೀಲ ಸಂಗಮ್, ಪತ್ರಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.