ವೃತ್ತಿಯನ್ನೇ ಬಾಡಿಗೆಗೆ ನೀಡಿದ ಸರ್ಕಾರಿ ಶಿಕ್ಷಕ!
ಕನ್ನಡಪ್ರಭ ವಾರ್ತೆ, ಬೀದರ್, ಮಾ. 16
ಸರ್ಕಾರಿ ಶಾಲಾ ಶಿಕ್ಷಕನ ಹುದ್ದೆಯಲ್ಲಿರುವ ಶಿಕ್ಷಕನೋರ್ವ ತನ್ನ ಹುದ್ದೆಯನ್ನು ಬೇರೊಬ್ಬರಿಗೆ ಬಾಡಿಗೆಗೆ ನೀಡಿ ಶಿಕ್ಷಣ ವೃತ್ತಿಯಿಂದ ದೂರವುಳಿದಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಅಲಿಪುರ ತಾಂಡಾದ ಸರ್ಕಾರಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಗಮನ: ಹುಮನಾಬಾದ್ ತಾಲೂಕಿನ ಅಲಿಪುರ ತಾಂಡಾದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಭೇಟಿ ನೀಡಿದ್ದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ ಅವರಿಗೆ ಅಲ್ಲಿನ ಸಾರ್ವಜನಿಕರು ಶಾಲೆಯ ದುಸ್ಥಿತಿ ಬಗ್ಗೆ ವಿವರಿಸಿ ಗಮನ ಸೆಳೆದಿದ್ದಾರೆ.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಪುಂಡಲಿಕ ಎಂಬುವವರೇ ಇಂಥದ್ದೊಂದು ಕರಾಮತ್ತು ಮಾಡಿದವರು. ತಾಂಡಾದಲ್ಲಿ ಎಸ್ಎಸ್ಎಲ್ಸಿ ಓದಿದ ರಾಮು ರಾಠೋಡ ಎಂಬ ಯುವಕನಿಗೆ ತಿಂಗಳಿಗೆ ಒಂದು ಸಾವಿರ ರು. ನೀಡಿ ತಿಂಗಳಿಗೆ ಸುಮಾರು 24 ಸಾವಿರ ಸಂಬಳ ಕಿಸೆಗಿಳಿಸಿಕೊಳ್ಳುತ್ತಾರಂತೆ.
ಶಿಕ್ಷಣದಿಂದ ವಂಚಿತ: ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಕೋಟ್ಯಂತರ ರು. ಖರ್ಚು ಮಾಡುತ್ತಿದ್ದರೆ ಜಿಲ್ಲೆಯಲ್ಲಿನ ತಾಂಡಾದ ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ.
ಕಳೆದ 6 ತಿಂಗಳಿಂದ ಗ್ರಾಮದ ಈ ಶಾಲೆಗೆ ಒಬ್ಬರೆ ಶಿಕ್ಷಕರಿದ್ದು, ಅದೂ ಅವರು ಗ್ರಾಮದಲ್ಲಿನ ಖಾಸಗಿ ವ್ಯಕ್ತಿಗೆ ಇಂತಿಷ್ಟು ಸಂಬಳ ನೀಡಿ ಮಕ್ಕಳಿಗೆ ವಿದ್ಯಾಭಾಸ ನೀಡಲು ನಿಯೋಜಿಸಿ ತಾವು ಬೇರೆಡೆ ಉಳಿದಿದ್ದಾರೆಂದು ಗ್ರಾಮಸ್ಥರು ದೂರಿದರು.
ಸಮಸ್ಯೆಯನ್ನು ಆಲಿಸಿದ ಶಾಸಕ ಬಂಡೆಪ್ಪ ಖಾಶೆಂಪುರ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದೂ ನಡೆದಿದೆ. ಅಧಿಕಾರಿಗಳು ಕಚೇರಿಗೆ ಸೀಮಿತವಾಗಿರದೆ ಗ್ರಾಮಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ, ಕುಂದುಕೊರತೆ, ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸುವುದು ಅವಶ್ಯಕವಾಗಿದ್ದರೂ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.