ಉಚಿತ ಚೆಸ್, ಷಟಲ್ ತರಬೇತಿ
ಶೃಂಗೇರಿ: ಪಟ್ಟಣದ ಜೆಸಿಸ್ ಶಾಲಾ ಆವರಣದಲ್ಲಿ ತುಂಗಾ ಸ್ಪೋಟ್ಸ್ ಕ್ಲಬ್‌ನಿಂದ ಉಚಿತ ಚೆಸ್ ಹಾಗೂ ಷಟಲಲ್ಬ್ಯಾಡ್ಮಿಟನ್ ತರಬೇತಿ ಶಿಬಿರ ನಡೆಯಿತು.
ಕೆ.ಬಿ. ಲಕ್ಷ್ಮಿನಾರಾಯಣ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜೊತೆಗೆ ಕ್ರೀಡಾಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವುದರ ಜೊತೆಗೆ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು. ಶಿಬಿರವು ಹತ್ತು ದಿನಗಳ ಕಾಲ ನಡೆಯಲಿದೆ. ಜೆಸಿಸ್ ಶಾಲೆಯ ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್, ಗಣೇಶ್ ಕುಡ್ವ, ಮನೋಹರ ಮೊದಲಾದವರು ಇದ್ದರು.
5ರಂದು ಶ್ರೀಗಳ ಪುರಪ್ರವೇಶ
ಶೃಂಗೇರಿ: ಇಲ್ಲಿನ ಶಾರದಾ ಪೀಠದ 36ನೇ ಪೀಠಾಧಿಪತಿ ಭಾರತೀ ತೀರ್ಥ ಶ್ರೀಗಳವರು ದೀರ್ಘ ವಿಜಯಯಾತ್ರೆ ಯಶಸ್ವಿಯಾಗಿ ಪೂರೈಸಿ ಏ. 5ರ ಶುಕ್ರವಾರ ಪುರಪ್ರವೇಶ ಮಾಡಲಿದ್ದು, ಅಂದು ಪಟ್ಟಣದಲ್ಲಿ ಶ್ರೀಗಳಿಗೆ ಭವ್ಯ ಸ್ವಾಗತ ನೀಡುವುದರ ಜೊತೆಗೆ ಪುರಪ್ರವೇಶ ಉತ್ಸವ ನಡೆಯಲಿದೆ.
ಸಂಜೆ 5 ಗಂಟೆಗೆ ಶೃಂಗೇರಿಗೆ ಆಗಮಿಸಲಿದ್ದು, ಪುರದ್ವಾರದಿಂದ ಜಗದ್ಗುರುಗಳು ಬ್ರಹ್ಮರಥದಲ್ಲಿ ಕುಳಿತು ಪುರಪ್ರವೇಶಗೈಯಲಿದ್ದಾರೆ. ಛತ್ರ, ಚಾಮರ, ಆಕರ್ಷಕ ಸ್ತಬ್ದಚಿತ್ರ, ಜಾನಪದ ಕಲಾತಂಡಗಳು ಉತ್ಸವಕ್ಕೆ ಮೆರಗು ನೀಡಲಿವೆ. ಪಟ್ಟಣವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ.
ತರೀಕೆರೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ
ಕ.ಪ್ರ ವಾರ್ತೆ, ತರೀಕೆರೆ, ಏ.1
ಪ್ರಕೃತಿಶ್ರೀ ಕಲಾ ಕುಟೀರ ವತಿಯಿಂದ ಸೋಮವಾರ, ಉಮಾ ಪ್ರಕಾಶ್ ಅವರ ನಿವಾಸದಲ್ಲಿ ಮಕ್ಕಳ 10 ದಿನದ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.
ಮಮತಾ ಮಹಿಳಾ ಸಮಾಜದ ಶಾರದ ಅಶೋಕ್‌ಕುಮಾರ್ ಶಿಬಿರದ ಉದ್ಘಾಟನೆ ನೆರವೇರಿಸಿ ಶಿಬಿರದಲ್ಲಿ ಕಲೆ, ಸಂಗೀತ, ಹಾಡುಗಾರಿಕೆ, ಕಲಿಕೆ ಇತ್ಯಾದಿ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಮಕ್ಕಳು ಶಿಬಿರದ ಪ್ರಯೋಜನ ಪಡೆಯಬೇಕು. ಶಿಬಿರ ಯಶಸ್ವಿಯಾಗಲಿ ಎಂದು ತಿಳಿಸಿದರು.
ಪ್ರಕೃತಿಶ್ರೀ ಕಲಾ ಕುಟೀರದ ಉಮಾ ಪ್ರಕಾಶ್, ಶೋಭ ಮತ್ತು ಮಕ್ಕಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೆಜೆಪಿಗೆ ಅಭಿವೃದ್ಧಿಯೇ ಶ್ರೀರಕ್ಷೆ: ಸುರೇಶ್
ತರೀಕೆರೆ: ಅಭಿವೃದ್ಧಿ ಮತ್ತು ಸಂಘಟನೆಯೇ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಎಂದು ಕೆಜೆಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಕೆಜೆಪಿ ತಾಲೂಕು ಘಟಕದ ವತಿಯಿಂದ ಸಮೀಪದ ಬೇಲೇನಹಳ್ಳಿ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಏರ್ರ್ಪಡಿಸಲಾಗಿದ್ದ ಪಕ್ಷದ ಕಸಬಾ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬೇಲೇನಹಳ್ಳಿ ಸೋಮಶೇಖರ್ ಮಾತನಾಡಿ, ಬೇಲೇನಹಳ್ಳಿ ಜಿ.ಪಂ. ವ್ಯಾಪ್ತಿಯಲ್ಲಿ ಬರುವ 6 ಗ್ರಾಮ ಪಂಚಾಯಿತಿಯಲ್ಲಿ ರಸ್ತೆ ನಿರ್ಮಾಣ, ಕುಡಿಯುವ ನೀರು ಇತ್ಯಾದಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಗಿದ್ದು, ಪಕ್ಷ ಗೆಲ್ಲಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಲೋಕೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್, ಮಾಜಿ ಪುರಸಭಾಧ್ಯಕ್ಷ ಟಿ.ಕೆ. ರಮೇಶ್, ಚಂದ್ರಣ್ಣ ಮತ್ತಿತರರು ಮಾತನಾಡಿದರು.