ಕುಡಿವ ನೀರಿಗೆ ಆಗ್ರಹಿಸಿ ಮೆಸ್ಕಾಂಗೆ ಮುತ್ತಿಗೆ
ಕ.ಪ್ರ ವಾರ್ತೆ, ಸಖರಾಯಪಟ್ಟಣ, ಏ.1
ಸಮರ್ಪಕ ಕುಡಿವ ನೀರಿಗೆ ಆಗ್ರಹಿಸಿ ಸಖರಾಯಪಟ್ಟಣ ಗ್ರಾಮ ಪಂಚಾಯ್ತಿ ಹಾಗೂ ಮೆಸ್ಕಾಂ ಕಚೇರಿಗೆ ಸೋಮವಾರ ಗ್ರಾಮಸ್ಥರು ಮುತ್ತಿಗೆ ಹಾಕಿದರು.
ಗ್ರಾಪಂ ಚುನಾಯಿತ ಪ್ರತಿನಿಧಿಗಳ ಹಾಗೂ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿದರು. ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದೆ ಹೋಗಿದ್ದರಿಂದ ಸುಮಾರು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು.
ಸಖರಾಯಪಟ್ಟಣದಲ್ಲಿ ಕುಡಿವ ನೀರಿಲ್ಲದೆ ಜನರಿಗೆ ತುಂಬಾ ತೊಂದರೆಯಾಗಿದೆ. ಹಲವು ದಿನಗಳಿಂದ ಈ ಸಮಸ್ಯೆ ಇದ್ದರೂ ಕೂಡ ಗ್ರಾಮ ಪಂಚಾಯ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿದರು.
ಆಕ್ರೋಶ: ವಿದ್ಯುತ್ ಇಲ್ಲದೆ ಇದ್ದರಿಂದ ಕುಡಿವ ನೀರಿಗೆ ತೊಂದರೆಯಾಗಿದೆ ಎಂದು ಗ್ರಾಮ ಪಂಚಾಯ್ತಿಯವರು ಸಮಜಾಯಿಸಿ ನೀಡಿದ್ದರಿಂದ ಪ್ರತಿಭಟನಾಕಾರರು ಮೆಸ್ಕಾಂಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಗ ಸ್ಥಳಕ್ಕೆ ಆಗಮಿಸಿದ ಕಡೂರು ತಾಲೂಕಿನ ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪರಶುರಾಮಪ್ಪ ಮಾತನಾಡಿ, ದಿನದಲ್ಲಿ 3 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು.
ಅದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ವಿದ್ಯುತ್ ಇಲ್ಲದೆ ನೀರಿನ ಸಮಸ್ಯೆ ಎದುರಾಗಿದೆ. ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಓದಲು ಅನನುಕೂಲವಾಗಿದೆ. ಕೆ.ಎಂ.ರಸ್ತೆಯಲ್ಲಿ ಅಡ್ಡಲಾಗಿ ಪ್ರತಿಭಟನಾಕಾರರು ಕುಳಿತುಕೊಂಡರು.
ತ್ರಿಫೇಸ್ ಭರವಸೆ: ಆಗ ಚಿಕ್ಕಮಗಳೂರು ವಿಭಾಗದ ಮೆಸ್ಕಾಂ ಅಧಿಕಾರಿ ಕರಿಸಿದ್ದಯ್ಯ ಸ್ಥಳಕ್ಕೆ ಆಗಮಿಸಿ ದಿನಕ್ಕೆ 6 ಗಂಟೆ ತ್ರೀಫೇಸ್‌ನಲ್ಲಿ ವಿದ್ಯುತ್ ನೀಡಲಾಗುವುದು. ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುವುದು ಎಂದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಿಂದಾಗಿ ಕೆ.ಎಂ.ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳಿಗೆ ಸುಮಾರು 2 ಗಂಟೆಗೂ ಅಧಿಕ ಕಾಲ ತೊಂದರೆಯಾಯಿತು.