ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪೊಲೀಸರ ಕ್ಷಮೆ ಯಾಚನೆಗೆ ಆಗ್ರಹಿಸಿ ಪ್ರತಿಭಟನೆ

Lingaraj Badiger
Updated On : 2 Apr 2013, 10:49 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.1
ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲು ಸಚಿವರ ಮನೆಗೆ ತೆರಳಿದ್ದ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿರುವ ಪೊಲೀಸರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ವ್ಯಕ್ತಿಯೊಬ್ಬರು ಸೋಮವಾರ ಏಕಾಂಗಿಯಾಗಿ ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿರುವ ಸಮಾಜಶಾಸ್ತ್ರ ಪ್ರಾಧ್ಯಾಪಕ ಚಂದ್ರಮೌಳಿ,  ಬೇಡಿಕೆ ಈಡೇರಿಸುವಂತೆ ಸಚಿವ ಸಿ.ಟಿ. ರವಿ ಮನೆಗೆ ತೆರಳಿದ್ದ ತಮ್ಮೊಂದಿಗೆ ಬಸವನಹಳ್ಳಿ ಪೊಲೀಸ್ ಠಾಣಾಧಿಕಾರಿ ಆನಂದ್ ಹಾಗೂ ಪೇದೆ ಧರ್ಮಾಚಾರಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದರು.
ಅಸಭ್ಯವಾಗಿ ವರ್ತಿಸಿರುವ ಪೊಲೀಸರು ಕ್ಷಮೆ ಯಾಚಿಸಬೇಕು. ನಗರದಲ್ಲಿ ನಡೆಯುತ್ತಿರುವ ಮನೆಪಾಠವನ್ನು  ಕೂಡಲೇ ಸ್ಥಗಿತಗೊಳಿಸಬೇಕು. ಈ ಬೇಡಿಕೆಗಳು ಈಡೇರುವವರೆಗೂ ಧರಣಿ ಮುಂದುವರೆಸುವುದಾಗಿ ಹೇಳಿದರು.
ಬಡ ವಿದ್ಯಾರ್ಥಿಗಳಿಗೆ ತೊಂದರೆ: ನಗರದಲ್ಲಿ ಸರ್ಕಾರಿ ಕಾಲೇಜುಗಳ ಹಲವು ಉಪನ್ಯಾಸಕರು ಕಾಲೇಜಿನಲ್ಲಿ ಪಾಠ ಮಾಡದೆ ಖಾಸಗಿಯಾಗಿ ವಿದ್ಯಾರ್ಥಿಗಳಿಗೆ ಮನೆಪಾಠ ಮಾಡುತ್ತಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೆ ಮನೆಪಾಠ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ  ಈ ಹಿಂದೆಯೇ ತಿಳಿಸಲಾಗಿತ್ತು ಎಂದು ಹೇಳಿದರು.
ಇದೇ ವಿಚಾರವಾಗಿ ಸಚಿವ ಸಿ.ಟಿ. ರವಿ ಅವರಿಗೆ ಮನವಿ ಸಲ್ಲಿಸಲು ಭಾನುವಾರ ಬೆಳಿಗ್ಗೆ ಅವರ ಮನೆಗೆ ತೆರಳಿದ್ದೆ. ಈ ಸಂದರ್ಭ ಸ್ಥಳಕ್ಕೆ ಬಂದ ಬಸವನಹಳ್ಳಿ ಠಾಣೆಯ ಪೇದೆ ಧರ್ಮಾಚಾರಿ ಎಂಬವರು ತಮ್ಮ ತೋಳನ್ನು  ಹಿಡಿದು ಬಲವಂತವಾಗಿ ತಮ್ಮನ್ನು ಬಸವನಹಳ್ಳಿ ಠಾಣೆಗೆ ಕರೆದೊಯ್ದರು ಎಂದರು.
ಅವಾಚ್ಯ ಶಬ್ದಗಳಿಂದ ನಿಂದನೆ: ಸಚಿವರನ್ನು ಭೇಟಿ ಮಾಡಲೂ ತಮಗೆ ಅವಕಾಶ ನೀಡಲಿಲ್ಲ. ಠಾಣೆಯಲ್ಲಿದ್ದ ಸಬ್‌ಇನ್‌ಸ್ಪೆಕ್ಟರ್ ಆನಂದ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ದೂರು ದಾಖಲಿಸಿಕೊಳ್ಳಲು ಸಬ್ ಇನ್ಸ್‌ಪೆಕ್ಟರ್ ಮುಂದಾಗಿದ್ದರು. ವಿಚಾರ ತಿಳಿದು ಕೂಡಲೆ ಸ್ಥಳಕ್ಕೆ ಆಗಮಿಸಿದ ಸಿಪಿಐ ಮುಖಂಡರು ತಮ್ಮನ್ನು ಠಾಣೆಯಿಂದ ಬಿಡಿಸಿಕೊಂಡು ಬಂದರು ಎಂದು ಘಟನೆ ಕುರಿತು ಚಂದ್ರಮೌಳಿ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement