ಬದುಕಿನ ಸಿದ್ಧಾಂತ ಬೋಧಿಸಿದ ರೇಣುಕ ಭಗವತ್ಪಾದರು
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.1
ಆದಿ ಜಗದ್ಗುರು ರೇಣುಕ ಭಗವತ್ಪಾದರು ವೀರಶೈವ ಮಹಾಮತ ಸಂಸ್ಥಾಪನಾಚಾರ್ಯರು, ದಶಸೂತ್ರಗಳ ಮೂಲಕ ಮಾನವನ ಬದುಕಿಗೆ ಅಗತ್ಯವಿರುವ ಸಿದ್ಧಾಂತ ಬೋಧಿಸಿದ್ದಾರೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಯಡೆಯೂರು ಕ್ಷೇತ್ರ ಶಿಲಾಮಠಾಧ್ಯಕ್ಷ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯಲ್ಲಿ ಗುರು ರೇಣುಕ ಶಿವಾಚಾರ್ಯ ಜಲಕಲ್ಯಾಣ ಸೇವಾ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಮತ್ತು ಧರ್ಮಚಿಂತನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಾಂತಿ ನೀಡುವ ಧರ್ಮ: ಧರ್ಮ, ವೇದಿಕೆಯ ಸರಕಾಗದೆ ಆಚರಣೆಯ ವಿಚಾರವಾಗಬೇಕು. ನಡೆ ಮತ್ತು ನುಡಿ ಒಂದಾದರೆ ಮಾತ್ರ ಗೌರವ ಬರುತ್ತದೆ. ಮಾನವಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಘೋಷ ನೀಡಿದ ಧರ್ಮ ವೀರಶೈವ ಧರ್ಮ. ರೇಣುಕಾಚಾರ್ಯರು ಯುಗಪುರುಷರಾಗಿ ಮಾನವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಧರ್ಮ ಸಂಸ್ಥಾಪಿಸಿದರು ಎಂದರು.
ತಿಪಟೂರು ಷಡಕ್ಷರ ಮಠಾಧ್ಯಕ್ಷ ಷಡಾಕ್ಷರ ಮಹಾಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮ ಎಂದರೆ ನಂಬಿಕೆ. ನಂಬಿಕೆ ಇರುವಲ್ಲಿ ಒಳಿತು, ದೇವರು, ಧರ್ಮ ಎಲ್ಲವೂ ಇರುತ್ತದೆ. ಮನಸ್ಸನ್ನು ಸಮತೋಲನದಲ್ಲಿಡಲು ಒಳಿತನ್ನು ಬಿತ್ತಲು, ಅಂತರಂಗ ಶುದ್ಧಿಯನ್ನು ಪ್ರತಿಪಾದಿಸಲು ಧರ್ಮ ಚಿಂತನಾ ಸಮಾರಂಭ ಪೂರಕ. ಗುರು- ವಿರಕ್ತರು ಒಂದೆಂಬ ಹೊಸ ಪರಂಪರೆಯಲ್ಲಿ ಮುನ್ನಡೆಯುವ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು.
ತಾವರೆಕೆರೆ ಶಿಲಾಮಠಾಧ್ಯಕ್ಷ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜನಕಲ್ಯಾಣ ಸೇವಾ ಪ್ರತಿಷ್ಠಾನದಿಂದ ವಿವಿಧ ಜನಪರ ಕಾರ್ಯಗಳೊಂದಿಗೆ ಜನಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದರು.
ಆತ್ಮಾವಲೋಕನಕ್ಕೆ ವೇದಿಕೆ: ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮಚಿಂತನಾ ಸಮಾರಂಭ ಆತ್ಮಾವಲೋಕನಕ್ಕೆ ಉತ್ತಮ ವೇದಿಕೆ. ನಾವ್ಯಾರೂ ಶಾಶ್ವತವಲ್ಲ ಎಂಬ ಸತ್ಯ ಅರಿಯಬೇಕು. ಮಿತಿಯ ತೃಪ್ತಜೀವನ ಶಾಂತಿಯನ್ನು ತಂದುಕೊಡುತ್ತದೆ. ದುರಾಸೆಯೇ ಅನ್ಯಾಯ, ಅಕ್ರಮ, ಶೋಷಣೆಗೆ ಕಾರಣ. ಪುರುಷ ಮತ್ತು ಸ್ತ್ರೀ ಸಮಾನತೆ ಇದ್ದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ದೇಶದ ವಿವಿಧೆಡೆ ಸ್ತ್ರೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಜಯಶ್ರೀ ಹೊಸಮನಿ, ಕೊಲ್ಲಿ ಪಾಕಿಯ ಸೋಮೇಶ್ವರ ಲಿಂಗದಲ್ಲಿ ಆವೀರ್ಭವಿಸಿದ ರೇಣುಕ ಭಗವತ್ಪಾದರು, ಸ್ತ್ರೀಯರಿಗೆ ಧಾರ್ಮಿಕ ಸಮಾನತೆಯನ್ನು 8 ಸಾವಿರ ವರ್ಷಗಳ ಹಿಂದೆಯೇ ನೀಡಿ ಧರ್ಮಬೋಧೆ ಮಾಡಿದ ಸಿದ್ಧಿಪುರುಷ. ಆ ದಿವ್ಯಚೇತನದ ಆದಿಶಕ್ತಿ ಜಾಗೃತಗೊಳಿಸುವುದೇ ಯುಗಮಾನೋತ್ಸವದ ಆಶಯ ಎಂದರು.
ಬೀರೂರಿನ ಲಲಿತಮ್ಮ ಶ್ರೀಕಂಠಪ್ಪ, ಗಿರಿಯಾಪುರದ ಕಮಲಮ್ಮ ಗಿರೀಶ್, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ, ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿದರು. ಮಾಜಿ ಗ್ರಾಮಾಧ್ಯಕ್ಷ ಲಲಿತಮ್ಮ ಸೇರಿದಂತೆ 12 ಹಿರಿಯ ಮಹಿಳೆಯರನ್ನು ಗೌರವಿಸಲಾಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ಜಿ.ಮುರುಗೇಶ್ ಸ್ವಾಗತಿಸಿ, ಭಾರ್ಗೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಿಕಾ ಹಾಲಸ್ವಾಮಿ ವಂದಿಸಿ, ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.