ಮತಕ್ಕಾಗಿ ಹಣ ಹಂಚುವ ಸಂಸ್ಕೃತಿ ನಮ್ಮದಲ್ಲ
ಕಪ್ರವಾರ್ತೆ, ಚಿಕ್ಕಮಗಳೂರು, ಏ.1
ಮತಕ್ಕಾಗಿ ಹಣ, ಹೆಂಡ ಹಂಚುವ ಸಂಸ್ಕೃತಿ ನಮ್ಮದಲ್ಲ. ಜನರಿಗೆ ಕೊಟ್ಟ ಆಶ್ವಾಸನೆಯಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ನಾನು ಮಾಡಿರುವ ಕ್ಷೇತ್ರದ ಅಭಿವೃದ್ಧಿ ತಮಗೆ ತೃಪ್ತಿ ನೀಡಿದ್ದಲ್ಲಿ ಮಾತ್ರ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ತಾಲೂಕಿನ ಶಿರವಾಸೆ ಗ್ರಾಮದಲ್ಲಿ ಸೋಮವಾರ ನಡೆದ ಜಾಗರ ಹೋಬಳಿ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ರು. 800 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ಶಿರವಾಸೆ ಗ್ರಾಪಂಗೆ ರು. 9 ಕೋಟಿಗೂ ಅಧಿಕ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದೇನೆ. ಆರ್ಜಿಜಿವೈ ಯೋಜನೆಯಡಿ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ನೀಡಲಾಗಿದೆ ಎಂದು ತಿಳಿಸಿದರು.
ಸ್ವಾವಲಂಬಿಗಳಾಗಿ: ಈ ಹಿಂದೆ ಕಾಂಗ್ರೆಸ್ನ ಮೂರು ಜನ ಮಂತ್ರಿಗಳು ಜಿಲ್ಲೆಯಲ್ಲಿದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕ್ಷೇತ್ರ ನಿರ್ಲಕ್ಷಿಸಿದ್ದರು. ಸಚಿವನಾಗಿ 6 ತಿಂಗಳಲ್ಲಿಯೇ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಿಸಿದ್ದೇನೆ. ಯುವಕರು ವಿದ್ಯಾಭ್ಯಾಸದ ಮೂಲಕ ಸ್ವಾವಲಂಬಿಗಳಾಗಬೇಕು ಎಂದರು.
ಬಿಜೆಪಿ ಸರ್ಕಾರದಲ್ಲಿ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಹಲವು ಯೋಜನೆಗಳ ಮೂಲಕ ಜನಸಾಮಾನ್ಯರ ಜೊತೆ ಸರ್ಕಾರ ಇರುವಂತೆ ಮಾಡಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳಿಗೆ ಸೈಕಲ್, ಅಂಗವಿಕಲರಿಗೆ ಒಂದು ಸಾವಿರ ಮಾಶಾಸನ, ವೃದ್ಧರಿಗೆ ರು. 500 ಮಾಸಾಶನ ನೀಡುತ್ತಿರುವುದು ಇದಕ್ಕೆ ಕೆಲವು ಉದಾಹರಣೆಗಳಾಗಿವೆ ಎಂದು ಹೇಳಿದರು.
ಮನೆ ನಿರ್ಮಿಸಲು ರು. 20 ಸಾವಿರ ನೀಡಲು ಎಪ್ಪತ್ತು ಬಾರಿ ಅಲೆದಾಡಿಸುತ್ತಿದ್ದರು. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಅವನ ತಲೆಯ ಮೇಲೊಂದು ಸೂರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂದು ದಾಖಲೆ ಮಟ್ಟದಲ್ಲಿ ಆಶ್ರಯ ಮನೆಗಳನ್ನು ನೀಡಿ ಪ್ರತಿಯೊಬ್ಬ ಬಡವನಿಗೂ ಮನೆ ನಿರ್ಮಾಣಕ್ಕೆ ರು. 75 ಸಾವಿರ ನೀಡಲಾಗುತ್ತದೆ ಎಂದರು.
ಪುಸ್ತಕ ನಿಮಗೆ: ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಡಿ. ಲೋಕೇಶ್ ಮಾತನಾಡಿ, ಬಿಜೆಪಿ ಅಭಿವೃದ್ಧಿ ಕೆಲಸಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಿ ನಿಮಗೆ ನೀಡಿದ್ದೇವೆ. ಕಾಂಗ್ರೆಸ್ನ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರು ಏನು ಕೆಲಸ ಮಾಡಿದ್ದಾರೆ ಹಾಗೂ ಏತಕ್ಕಾಗಿ ಅವರಿಗೆ ಮತ ನೀಡಬೇಕೆಂದು ಬಹಿರಂಗವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು. ಶಿರವಾಸೆ ಗ್ರಾಮಕ್ಕೆ ಹಿಂದೆ ಬರಲು ದುರ್ಗಮ ಹಾದಿಯಿಂದ ಬರಬೇಕಾಗಿತ್ತು. ಆದರೆ, ಇಂದು ಇಲ್ಲಿಗೆ ಸಂಪರ್ಕಿಸುವ ರಸ್ತೆಗಳು ಉತ್ತಮ ಗುಣಮಟ್ಟದಿಂದ ನಿರ್ಮಾಣವಾಗಿದೆ. ಪ್ರತಿ ಪಕ್ಷದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬಿಜೆಪಿ ಕಾರ್ಯಕರ್ತರಾಗಿ ಹೆಮ್ಮೆಯಿಂದ ಮತ ಕೇಳಬಹುದು. ಪಕ್ಷಬೇಧ ಮಾಡದೆ ಎಲ್ಲಾ ಅರ್ಹ ಫಲಾನುಭವಿಗಳಿಗೂ ಬಿಪಿಎಲ್ ಕಾರ್ಡ್ ವಿತರಿಸಿ ಬಡವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಜಾಗರ ಶಕ್ತಿ ಕೇಂದ್ರದ ಅಧ್ಯಕ್ಷ ನಂದೀಶ್, ಬಿಜೆಪಿ ಮುಖಂಡರಾದ ವಾಸು ಪೂಜಾರಿ, ಗಿರೀಶ್, ಶಿವಾನಂದ, ಸುಬ್ರಹ್ಮಣ್ಯ, ರಮೇಶ್, ರವಿ, ಸೀತಾ, ಸರೋಜಿನಿ, ಆಲಿಯಾ ಭಾಷ ಉಪಸ್ಥಿತರಿದ್ದರು.