ಸಿದ್ದರಾಮಯ್ಯರಿಂದ ಶೂನ್ಯ ಬಹುಮಾನ: ಕೆಂಪರಾಜು
ಕಡೂರು: ಸಿದ್ದರಾಮಯ್ಯನವರನ್ನು ಬೆಂಬಲಿಸಿಕೊಂಡು ಬಂದಿದ್ದ ತಮಗೆ ಟಿಕೆಟ್ ನೀಡದೆ ಪಕ್ಷದ್ರೋಹ ಮಾಡಿದವರಿಗೆ ಟಿಕೆಟ್ ನೀಡಲಾಗಿದ್ದು ನನ್ನ ಮತದಾರರು ಹಾಗು ಕಾರ್ಯಕರ್ತರು ನೀಡುವ ಅಭಿಪ್ರಾಯದಂತೆ ಶೀಘ್ರ ಮುಂದಿನ ರಾಜಕೀಯ ನಡೆ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಎಂ.ಕೆಂಪರಾಜು ಹೇಳಿದ್ದಾರೆ.
ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಟ್ಟಣದ ವೀರಭದ್ರಸ್ವಾಮಿ ಸಮುದಾಯ ಭವನದಲ್ಲಿ ನಡೆದ ಬೆಂಬಲಿಗರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ನಾಯಕರಾದ ಎಂ.ಎಲ್.ಮೂರ್ತಿ, ಶಾಂತೇಗೌಡ ಮತ್ತಿತರ ನಾಯಕರು ಸಿದ್ದರಾಮಯ್ಯವರ ಬಳಿ ಷಡ್ಯಂತ್ರ ಮಾಡಿ ತಮಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
ನನ್ನನ್ನು ರಾಜಕಿಯವಾಗಿ ಮುಗಿಸುವುದು ನನ್ನ ಮತದಾರರು ಮಾತ್ರವೇ ಹೊರತು ಯಾವುದೇ ನಾಯಕರಲ್ಲ. ನಮ್ಮ ಸಮಾಜದವರು ಮತ್ತು ಹಿಂದುಳಿದ ವರ್ಗದ ನಾಯಕರೆಂದು ಸಿದ್ದರಾಮಯ್ಯನವರ ನೆರಳಿನಲ್ಲಿದ್ದ ನನಗೆ ಅವರಿಂದ ಈಗ ಶೂನ್ಯ ಬಹುಮಾನ ದೊರೆತಿದೆ ಎಂದರು.
ಉಪ ಚುನಾವಣೆ ನಂತರ ನಾನು ಕೆ.ಬಿ.ಮಲ್ಲಿಕಾರ್ಜುನ್ ಎದುರು ಸ್ಪರ್ಧಿಸುವುದಾದರೆ ಕ್ಷೇತ್ರ ಸುತ್ತಿ ಪ್ರಚಾರದಲ್ಲಿ ತೊಡಗುವಂತೆ ಸೂಚಿಸಿದಾಗ ನಾನು ಸ್ಫರ್ಧಿಸುವುದಿಲ್ಲ ಎಂದ ಹೇಳಿ ಇದೀಗ ತಮಗೆ ಮೋಸಮಾಡಿ ಟಿಕೆಟ್ ಪಡೆದಿದ್ದಾರ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಂಗಳ ಲೋಕೇಶ್, ಮಲ್ಲಾಘಟ್ಟ ಆನಂದ್, ಚಂದ್ರಣ್ಣ, ಲಕ್ಷ್ಮೀಕಾಂತ್, ಮೈಲಾರಪ್ಪ, ಲೋಕೇಶ್, ಹನುಮಯ್ಯ, ಕಲ್ಲೇಶ್, ಸಬ್ದರ್ ಹುಸೇನ್ ಇದ್ದರು.
--
ಮಹಾರುದ್ರ ಹೋಮ
ಶೃಂಗೇರಿ: ಮಲೆನಾಡಿನ ಪ್ರಸಿದ್ದ ಮಳೆದೇವರು ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮರ್ಕಲ್ ಪಂಚಾಯಿತಿ ಕಿಗ್ಗದ ಶಾಂತಾ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಮಹಾರುದ್ರ ಹೋಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಏಪ್ರಿಲ್ 17 ರಂದು ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. 9 ದಿನಗಳ ಕಾಲ ವೈಭವಯುತ ಜಾತ್ರಾ ಮಹೋತ್ಸವ ನಡೆಯಲಿದೆ.