ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.2
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿ ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಹೊಡೆದು ಯಾವುದೇ ಸಮಸ್ಯೆಗೆ ಸ್ಪಂದಿಸದೆ ಜನರನ್ನು ನಿರ್ಲಕ್ಷಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಅಂತ್ಯ ಹಾಡಲಿದ್ದಾರೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚಿಕ್ಕಗೌಡ, ಲಕ್ಯಾ, ದೇವರಹಳ್ಳಿ, ಕ್ಯಾತನಬೀಡು, ಕಳಸಾಪುರ ಹಾಗೂ ಸಿಂದಿಗೆರೆ ಗ್ರಾಮಗಳಲ್ಲಿ ಮಂಗಳವಾರ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ದೇಶದ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಹಣ ಕೊಳ್ಳೆ ಹೊಡೆದು ಚುನಾವಣೆ ಸಂದರ್ಭದಲ್ಲಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಳ್ಳು ಆಶ್ವಾಸನೆ: ರೈತರ ಯಾವುದೇ ಸಮಸ್ಯೆಗೆ ಸ್ಪಂದಿಸದೆ ಗೊಬ್ಬರದ ದರವನ್ನು ಏರಿಸಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರವನ್ನು ಕಿತ್ತೊಗೆಯಬೇಕು. ಬಡವರಿಗೆ ಬಿಪಿಎಲ್ ಕಾರ್ಡ್ ನೀಡದೆ ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಸರಿಯಾಗಿ ವಿದ್ಯುತ್ ನೀಡದೆ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಬಹಳ ತೊಂದರೆಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನಪ್ರಿಯ ಯೋಜನೆಗಳಿಂದ ರಾಜ್ಯಾದ್ಯಂತ ಜನರ ವಿಶ್ವಾಸ ಗಳಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಯಾವುದೇ ಜನಸಾಮಾನ್ಯರ ತೊಂದರೆಗೆ ಸ್ಪಂದಿಸದೆ ಹಲವು ಅವ್ಯವಹಾರಗಳಲ್ಲಿ ತೊಡಗಿ ಮುಖ್ಯಮಂತ್ರಿ, ಸಚಿವ ಹಾಗೂ ಶಾಸಕರು ಜೈಲಿಗೆ ಹೋಗಿಬಂದಿರುವುದೇ ದೊಡ್ಡ ಸಾಧನೆಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಯಾವುದೇ ಹಣ, ಹೆಂಡದ ಆಮಿಷ ತೋರದೆ ಚುನಾವಣೆ ಎದುರಿಸಿ ಗೆಲ್ಲಲ್ಲಿದ್ದೇವೆ ಎಂದು ಹೇಳಿದರು. ಮಾಸ್ತೆಗೌಡ, ಹುಚ್ಚೇಗೌಡ, ಡಿ.ಕೆ. ಚಂದ್ರೇಗೌಡ, ಪಾರ್ವತಮ್ಮ ಉಪಸ್ಥಿತರಿದ್ದರು.