ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ವಿರುದ್ಧ ದೂರು: ಆರೋಪ
ಕ.ಪ್ರ.ವಾರ್ತೆ, ಮೂಡಿಗೆರೆ, ಏ.2
ಗೋಣಿಬೀಡು ಪೊಲೀಸ್ ಠಾಣಾಧಿಕಾರಿಯವರ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಚುನಾವಣಾ ಆಯೋಗಕ್ಕೆ ನೀಡಿರುವ ದೂರು ದುರುದ್ದೇಶದಿಂದ ಕೂಡಿದೆ. ದಕ್ಷ ಮತ್ತು ನಿಷ್ಪಕ್ಷಪಾತ ಧೋರಣೆಯುಳ್ಳ ಠಾಣಾಧಿಕಾರಿಯನ್ನು ಯಾವುದೇ ಕಾರಣಕ್ಕೂ ಠಾಣೆಯಿಂದ ವರ್ಗಾಹಿಸಬಾರದು ಎಂದು ಗೋಣಿಬೀಡು ಹೋಬಳಿ ಭಾಗದ ಯುವ ಮುಖಂಡರಾದ ರಮೇಶ್, ರಾಘವೇಂದ್ರ, ಮಂಜುನಾಥ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಗೋಣಿಬೀಡು ಹೋಬಳಿ ಭಾಗದಲ್ಲಿ ಅಕ್ರಮ ಮರಳು ದಂಧೆ ಸಹಿತ ಅನೇಕ ಸಮಾಜ ವಿರೋಧಿ ಚಟುವಟಿಕೆಯನ್ನು ಠಾಣಾಧಿಕಾರಿ ರೇವಣ್ಣ ತಡೆದು ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದ್ದಾರೆ. ದಲಿತ ಸಮುದಾಯದಿಂದ ಬೆಳೆದು ಬಂದಿರುವ ರೇವಣ್ಣ ವಿರುದ್ಧ ಹಲ್ಲು ಮಸೆಯುತ್ತಿರುವ ಗೋಣಿಬೀಡು ಭಾಗದ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಅಧ್ಯಕ್ಷರ ಮೂಲಕ ಸುಳ್ಳು ದೂರು ಕೊಡಿಸಿ ದಕ್ಷ ಅಧಿಕಾರಿಯ ಎತ್ತಂಗಡಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.