ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಸಾವು
ಕ.ಪ್ರ ವಾರ್ತೆ, ನರಸಿಂಹರಾಜಪುರ, ಏ.2
ಮುತ್ತಿನಕೊಪ್ಪ ಸಮೀಪದ ಮುಖ್ಯರಸ್ತೆಯಲ್ಲಿ ಕಬ್ಬಿಣ ಮತ್ತು ಸಿಮೆಂಟ್ ತುಂಬಿದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಸೋಮವಾರ ರಾತ್ರಿ 10.30 ಗಂಟೆಗೆ ಸಂಭವಿಸಿದೆ.
ಮುತ್ತಿನಕೊಪ್ಪ - ಶಿವಮೊಗ್ಗ ರಸ್ತೆಯ ಜಂಬಳ್ಳಿ ಸಮೀಪ ಶಿವಮೊಗ್ಗದಿಂದ ನರಸಿಂಹರಾಜಪುರದ ಕಡೆಗೆ ಬರುತ್ತಿದ್ದ ಕಬ್ಬಿಣ ಹಾಗೂ ಸಿಮೆಂಟ್ ಮೂಟೆ ತುಂಬಿದ್ದ ಟ್ರಾಕ್ಟರ್ ಚಾಲಕನ ಹತೋಟಿ ತಪ್ಪಿ ಮಗುಚಿ ಬಿದ್ದಿದೆ. ಟ್ರಾಕ್ಟರ್ ಟ್ರಾಲಿಯ ಮೇಲೆ ಕುಳಿತಿದ್ದ ಮೂವರಲ್ಲಿ ರಾಘು ಹಾಗೂ ರಮೇಶ ಎಂಬವರ ಮೈಮೇಲೆ ಕಬ್ಬಿಣ ಹಾಗೂ ಸಿಮೆಂಟ್ ಮೂಟೆಗಳು ಉರುಳಿ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟ್ರಾಲಿ ಮೇಲೆ ಕುಳಿತಿದ್ದ ಆನಂದಯ್ಯ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಟ್ರಾಕ್ಟರ್ ಚಾಲಕ ಮಲ್ಲಯ್ಯನಿಗೆ ಯಾವುದೇ ಪೆಟ್ಟಾಗಿಲ್ಲ. ಎಂಜಿನ್ ಮೇಲೆ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕ ನಾಗರಾಜ ಅವರಿಗೆ ಸೊಂಟಕ್ಕೆ ಪೆಟ್ಟಾಗಿದೆ. ನಾಗರಾಜ ಅವರು ಚಾಲಕ ಮಲ್ಲಯ್ಯನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.