ತರೀಕೆರೆಯಲ್ಲಿ ಶಾಂತಿ ಸಮಿತಿ ಸಭೆ: ಶಾಂತಿಯುತ ಚುನಾವಣೆಗೆ ಡಿಸಿ ಮನವಿ
ಕ.ಪ್ರ ವಾರ್ತೆ, ತರೀಕೆರೆ, ಏ.2
ಮೇ 5 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಿ ಮುಕ್ತ, ಶಾಂತಿಯುತ ಚುನಾವಣೆ ನೆಡೆಸಲು ಎಲ್ಲರೂ ಸಹಕರಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಯಶವಂತ್ ಮನವಿ ಮಾಡಿದ್ದಾರೆ.
ಅವರು ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಪಟ್ಟಣದ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಾಡಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ, ಕಾರ್ಯಕರ್ತರ, ಹಿರಿಯ ನಾಗರಿಕರ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಣ್ಗಾವಲು ಸಮಿತಿ: ಬರಲಿರುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಗಳನ್ನು ಕೈಗೊಂಡಿದೆ. ಮತದಾರರು ಮುಕ್ತ ವಾತಾವರಣದಲ್ಲಿ ಮತದಾನ ಮಾಡಬೇಕು. ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಬಾರದು ಎಂದು ಪ್ರಚಾರ ಮಾಡಲಾಗುವುದು. ಇದಕ್ಕಾಗಿ ಜಿಲ್ಲೆಯಲ್ಲಿ 21 ಕಣ್ಗಾವಲು ಸಮಿತಿ ರಚಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ವೆಚ್ಚಗಳನ್ನು ಕುರಿತು ಸಮರ್ಪಕವಾಗಿ ಲೆಕ್ಕವಿಡಬೇಕು, ಚುನಾವಣೆ ವೆಚ್ಚಗಳನ್ನು ಕುರಿತು ತಾಲೂಕು ಕಚೇರಿಗಳಲ್ಲಿ ದೂರು ನೀಡಬಹುದು. ಜಿಲ್ಲಾ ಮಟ್ಟದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ವಹಣಾಧಿಕಾರಿಗಳನ್ನು (ವೆಚ್ಚ) ನೇಮಕ ಮಾಡಲಾಗುವುದು. ನೀತಿ ಸಂಹಿತೆ ಸಮಿತಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇರುತ್ತಾರೆ. ಹಣ, ಮದ್ಯ ಇತರ ಬೇರೆ ವಸ್ತುಗಳ ಆಮಿಷವನ್ನು ಈ ತಂಡ ತಡೆಗಟ್ಟುತ್ತದೆ ಎಂದು ಅವರು ತಿಳಿಸಿದರು.
ಪ್ರತಿದಿನ ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ವೀಕ್ಷಿಸಿ ಪರಿಶೀಲಿಸಲಾಗುವುದು. ಏನಾದರೂ ಅಕ್ರಮ ಕಂಡುಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಎನ್. ಮಂಜುನಾಥ್, ಎಚ್.ಯು. ಫಾರೂಕ್, ಸೀತಾರಾಂ, ಎನ್. ವೆಂಕಟೇಶ್, ದಾದಾಪೀರ್, ಜಿ. ಸುಬ್ರಹ್ಮಣ್ಯ, ವಿ. ಶೇಖರ್ ಮೊದಲಾದವರು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಿತ್ರ ಹರಾಜೆ, ಉಪ ವಿಭಾಗಾಧಿಕಾರಿ ಅನುರಾಧಾ, ತಹಸೀಲ್ದಾರ್ ರಂಜಿತಾ, ಡಿವೈಎಸ್‌ಪಿ ಸದಾನಂದ ಬಿ. ನಾಯಕ್, ಎಸ್‌ಐ ಸುರೇಶ್, ಹಿರಿಯ ನಾಗರಿಕರು, ಶಾಂತಿ ಸಮಿತಿ ಸದಸ್ಯರು ಭಾಗವಹಿಸಿದ್ದರು.