ಶವ ಆಸ್ಪತ್ರೆ ಸೇರಿಸಿ ವ್ಯಕ್ತಿ ಪರಾರಿ
ಕ.ಪ್ರ ವಾರ್ತೆ,ನರಸಿಂಹರಾಜಪುರ, ಏ.2
ಆರೋಗ್ಯ ಸರಿ ಇಲ್ಲ ಎಂದು ಮಹಿಳೆಯೊಬ್ಬಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆ ಮೃತಪಟ್ಟಿದ್ದಾಳೆ ಎಂದು ತಿಳಿಯುತ್ತಲೇ ಪರಾರಿಯಾದ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳನ್ನು (42) ಎತ್ತಿಕೊಂಡು ಬಂದು ಆರೋಗ್ಯ ಸರಿ ಇಲ್ಲ ಎಂದು ಆಸ್ರತ್ರೆಗೆ ಸೇರಿಸಿದ್ದಾನೆ. ಆ ಮಹಿಳೆಯು ತನ್ನ ಅಕ್ಕ. ಮಡಬೂರಿನಿಂದ ಬಂದಿದ್ದೇನೆ ಎಂದು ಹೇಳಿದ್ದನು.
ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಮಹಿಳೆಯನ್ನು ಪರೀಕ್ಷಿಸಿದ್ದಾಳೆ. ಆದರೆ, ಮಹಿಳೆಯು ಜೀವಂತವಾಗಿರದೆ ಶವವಾಗಿದ್ದಳು. ಈ ವಿಷಯ ತಿಳಿಯುತ್ತಲೇ ಸಂಬಂಧಿಕರನ್ನು ಕರೆ ತರುತ್ತೇನೆ ಎಂದು ಹೋದವನು ಆತ ಮತ್ತೆ ಆಸ್ಪತ್ರೆಯ ಕಡೆ ಬಂದಿಲ್ಲ. ಈ ಬಗ್ಗೆ ಆಸ್ಪತ್ರೆಯ ನರ್ಸ್ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯ ಶವದ ಗುರುತಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಮಾನವೀಯತೆ ಮೆರೆದ ಮಹಿಳೆ: ಮರಣೋತ್ತರ ಪರೀಕ್ಷೆ ನಡೆಸಿದ ಮಹಿಳೆಯ ಶವವನ್ನು ಪಟ್ಟಣ ಪಂಚಾಯ್ತಿಯವರು ಹಳೇ ಮಂಡಗದ್ದೆ ಸರ್ಕಲ್ ಸಮೀಪದ ಹಿಳುವಳ್ಳಿ ಗ್ರಾಮದ ರುದ್ರಭೂಮಿಯಲ್ಲಿ ಗುಂಡಿ ತೆಗೆದು ಹುಗಿದಿದ್ದಾರೆ. ರಾಜೀವ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜುಬೇದ ಮತ್ತು ಸಂಘದ ಸದಸ್ಯರು ಅಪರಿಚಿತ ಮಹಿಳೆಯ ಶವದ ಸಂಸ್ಕಾರದ ಕಾರ್ಯದಲ್ಲಿ ಭಾಗವಹಿಸಿ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾಳೆ.