ಅಭಿವೃದ್ಧಿಗೆ ಶ್ರಮಿಸಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.3
ಮತದಾರರಿಗೆ ನೀಡಲು 25 ಸಾವಿರ ಉಂಗುರ ಮಾಡಿಸಿ ಇಟ್ಟಿದ್ದೇನೆಂದು ವಿರೋಧ ಪಕ್ಷದವರು ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನನ್ನ ಕೈಲಿ ಒಂದೂ ಉಂಗುರವಿಲ್ಲ. ಉಂಗುರ ಹಂಚಿ ಮತ ಪಡೆಯುವಷ್ಟು ಕೆಳಮಟ್ಟಕ್ಕೆ ಇಳಿದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ತಾಲೂಕಿನ ಬೀಕನಹಳ್ಳಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಸಬಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷದ ಮುಖಂಡರೆಲ್ಲ ಒಗ್ಗಟ್ಟಿನಿಂದ ಇದ್ದಿದ್ದರೆ ಇನ್ನು ಮುಂದಿನ 20 ವರ್ಷ ವಿರೋಧ ಪಕ್ಷದವರು ಅಧಿಕಾರಕ್ಕೆ ಬರುವುದು ಸಾಧ್ಯವಿರಲಿಲ್ಲ ಎಂದರು.
ಬ್ಲ್ಯಾಕ್ ಮೇಲ್: ರಾಜಕೀಯ ಅಧಿಕಾರ ನಮ್ಮಪ್ಪನ ಆಸ್ತಿಯಲ್ಲ, ಮತದಾರರು ಬೇಡವೆಂದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮಂತ್ರಿಗಿರಿಗೆ ಆಸೆ ಪಡದೆ, ಅಧಿಕಾರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ವಿರೋಧ ಪಕ್ಷದವರು ಆರೋಪ ಮಾಡುವ ಬದಲು ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.
ಜಿಪಂ ಸದಸ್ಯೆ ಭಾಗ್ಯ ರಂಗನಾಥ್ ಮಾತನಾಡಿ, ಕ್ಷೇತ್ರದ ಶಾಸಕರು, ಮಂತ್ರಿಯಾಗಿ 6 ತಿಂಗಳಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಹಾಗೂ ಹಾಲಿನ ಡೈರಿ ತಂದು ರಾಜ್ಯದಲ್ಲಿಯೇ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.
ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ತಾಪಂ ಮಾಜಿ ಅಧ್ಯಕ್ಷ ಕನಕರಾಜ್, ತಾಪಂ ಉಪಾಧ್ಯಕ್ಷ ಪುಟ್ಟೇಗೌಡ, ಶಕ್ತಿ ಕೇಂದ್ರದ ಅಧ್ಯಕ್ಷ ಬೀರೇಗೌಡ, ಸೋಮಶೇಖರ್, ದಿನೇಶ್, ವಿಶ್ವನಾಥ್, ಧರ್ಮಣ್ಣ, ಎಪಿಎಂಸಿ ಸದಸ್ಯ ಯೋಗಾನಂದ್, ಮಾಜಿ ಅಧ್ಯಕ್ಷ ವೆಂಕಟೇಶ್, ನಗರಸಭೆ ಮಾಜಿ ಅಧ್ಯಕ್ಷ ನಿಂಗೇಗೌಡ ಉಪಸ್ಥಿತರಿದ್ದರು.