ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಯಿ ಇಲ್ಲದೆ ಕಳೆಗುಂದಿದ ಮಾಮರ

Lingaraj Badiger
Updated On : 4 Apr 2013, 10:49 am

ಕ.ಪ್ರ.ವಾರ್ತೆ, ತರೀಕೆರೆ, ಏ.3
ಯುಗಾದಿ ಬಂತೆಂದರೆ ಮಾವಿನ ಸೊಗಡು, ತೆನೆ ಮಾವಿನ ಕಾಯಿಯ ಉಪ್ಪಿನಕಾಯಿ ಎಲ್ಲರ ಮನೆಯಲ್ಲಿ ರಾರಾಜಿಸಬೇಕಾಗಿತ್ತು. ಉಪ್ಪಿನಕಾಯಿ- ಎಣ್ಣೆ ಹಾಕಿ ಅನ್ನ ಕಲೆಸಿ ಸವಿದಷ್ಟೂ ರುಚಿ ಹೆಚ್ಚುತ್ತಲೇ  ಹೋಗುತ್ತಿತ್ತು. ಆದರೆ ಈ ಸಾರಿ ಈ ರುಚಿ ಅನುಭವಿಸುವಂತಿಲ್ಲ. ಕಾರಣ ಮಾರುಕಟ್ಟೆಯಲ್ಲಿ ತೆನೆಯಾಡುವ ರುಚಿಯಾದ ಸೊಗಡಿನ ಮಾವಿನ ಕಾಯಿಯೇ ಕಾಣುತ್ತಿಲ್ಲ.
ರಾಜ್ಯದ ಮಾವಿನ ಫಸಲಿನ ಮಾರುಕಟ್ಟೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದ ತರೀಕೆರೆ ತಾಲೂಕಿನ ಸೊಗಡು  ಬೆರೆತ ವಿವಿಧ ರೀತಿಯ ಬೆಲೆ ಬಾಳುವ ಮಾವಿನ ಫಸಲು ಈ ಸಾರಿ ಶೇ.10ರಷ್ಟೂ ಇಲ್ಲ. ಕೋಟ್ಯಂತರ ರೂ. ಗಳ ಮಾವಿನ ಫಸಲಿನ ಚೇಣಿ ನಡೆಯುತ್ತಿದ್ದ ತಾಲೂಕಿನಲ್ಲಿ ಈ ಸಾರಿ ಬಿಡಿಗಾಸಿನ ವಹಿವಾಟೂ ಇಲ್ಲ.
ಮಾರ್ಚ್ ಕೊನೆ ವಾರದಿಂದ ಮಾವಿನ ಫಸಲು ಕೀಳುವ ಕಾರ್ಯ ಪ್ರಾರಂಭವಾಗಬೇಕಿತ್ತು. ಆದರೆ ಈಗ ಎಲ್ಲಿಯೂ ಅದರ ಸುಳಿವೇ ಇಲ್ಲ.
ಲಾರಿಗಟ್ಟಲೆ ಬುಟ್ಟಿಯಲ್ಲಿ ತುಂಬಿ ರಾಜ್ಯ ಮತ್ತು ಹೊರ ರಾಜ್ಯಗಳ ಮಾರಕಟ್ಟೆಯಲ್ಲಿ ಚಿನಕುರುಳಿಯಂತೆ ಖರ್ಚಾಗುವ ರೀತಿಯಲ್ಲಿ ಬೇಡಿಕೆ ಪಡೆದಿದ್ದ ತರೀಕೆರೆ ಮಾವು,  ದಪ್ಪ ಗಾತ್ರದ ಕಾಯಿಗಳಿಂದ ನೆಲಕ್ಕೆ ಜಗ್ಗಾಡುತ್ತದೆ. ಆದರೆ ಈ ಸಾರಿ ಕೇವಲ ಎಲೆ, ರೆಂಬೆ, ಕೊಬೆಗಳದ್ದೇ ಕಾರುಬಾರಾಗಿದೆ. ಮರಗಳಲ್ಲಿ ಹುಡುಕಿದರೂ ಅಲ್ಲೊಂದು ಇಲ್ಲೊಂದು ಕಾಯಿ ಮಾತ್ರ.
ಅಲ್ಲೊಂದು ಇಲ್ಲೊಂದು ಮರಗಳಲ್ಲಿ ಅಕಸ್ಮಾತ್ ಹೂ ಕಾಣಿಸಿಕೊಂಡಿದ್ದರೂ, ವಿಪರೀತ ಬಿಸಿಲಿನ ಝಳದಿಂದಾಗಿ ಹೂವೆಲ್ಲಾ ಸುಟ್ಟುಹೋಗಿದೆ.
20 ಸಾವಿರ ಎಕರೆ: 20 ಸಾವಿರ ಎಕರೆಯಲ್ಲಿ ತಾಲೂಕಿನ ಕಸಬಾ ಮತ್ತು ಲಿಂಗದಹಳ್ಳಿ ಹೋಬಳಿಗಳ ನೇರಲೆಕೆರೆ, ಅಮೃತಾಪುರ, ವಿಠಲಾಪುರ, ನಾಗೇನಹಳ್ಳಿ, ಹುಣಸಘಟ್ಟ, ಗೊಂಡೇದಹಳ್ಳಿ, ಸೊಕ್ಕೆ, ಶ್ಯಾನುಭೋಗನಹಳ್ಳಿ , ಕುಡ್ಲೂರು, ಕೊರಟೀಕೆರೆ, ಮುಂಡ್ರೆ, ದೋರನಾಳು ಇತ್ಯಾದಿ ನೂರಾರು ಹಳ್ಳಿಗಳ ಸುಮಾರು 20 ಸಾವಿರ ಎಕರೆ ಪ್ರದೇಶದ ಮಾವಿನ ತೋಪಿನಲ್ಲಿ ರೈತರು ಮಾವು ಬೆಳೆಯುತ್ತಿದ್ದರು.
ಎರಡು ವರ್ಷಗಳಿಂದ ಐದು ವರ್ಷಗಳವರೆಗೂ ಮಾವಿನ ಫಸಲನ್ನು ಕೋಟಿ ರೂ. ವ್ಯವಹಾರ ಕುದುರಿಸಿ ಚೇಣಿ ಮಾಡುತ್ತಿದ್ದರು. ಈಗ ತಾಲೂಕಿನಾದ್ಯಂತ ಯಾವುದೇ ಮಾವಿನ ಮರದಲ್ಲೂ ಫಸಲು ಕಂಡು ಬಂದಿಲ್ಲ.
ಮಳೆ ಇಲ್ಲ: ಹೇಳಿ ಕೇಳಿ ಮಾವಿನ ಬೆಳೆ ಸಂಪೂರ್ಣ ವಾತಾವರಣದ ಕೂಸು. ವಾತಾವರಣದಲ್ಲಿ ಉಂಟಾಗಿರುವ ಏರುಪೇರುಗಳೇ ಮರದಲ್ಲಿ ಮಾವಿನ ಫಸಲು ಗಣನೀಯವಾಗಿ ಇಳಿಮುಖವಾಗಲು ಕಾರಣವಾಗಿದೆ ಎಂದು ಮಾವು ಬೆಳೆಗಾರ ದೋರನಾಳು ನಿಸಾರ್‌ಖಾನ್ ಹೇಳುತ್ತಾರೆ.
ತಾಲೂಕಿನಾದ್ಯಂತ ಕಳೆದ ಎರಡು ಮೂರು ವರ್ಷದಿಂದ ಹೇಳಿಕೊಳ್ಳುವಂತಹ ಗಟ್ಟಿ ಮಳೆಯೇ ಬಂದಿಲ್ಲ.  ಭೂಮಿಯ ಅಂತರ್ಜಲವೆಲ್ಲಾ ಪಾತಾಳಕ್ಕಿಳಿದಿದೆ. ಭೂಮಿಯ ಮೇಲೆ ವಿಪರೀತವಾಗಿ ಹೆಚ್ಚಾದ ಉಷ್ಣಾಂಶ ಮತ್ತು ನೆಲದಲ್ಲಿ ತೇವಾಂಶ ಇಲ್ಲದಿರುವುದು ಫಸಲು ಕಡಿಮೆಯಾಗಲು ಕಾರಣವಾಗಿದೆ. ಹಿಂದೆ ಆರು ಸಾವಿರ ಬಾಕ್ಸ್‌ಗಳಲ್ಲಿ 600 ಟನ್ ಮಾವಿನ ಫಸಲನ್ನು ಕಿತ್ತಿದ್ದೇವೆ, ಆದರೆ ಈ ಸಾರಿ 6 ಟನ್ ಕೂಡ ಮಾವಿನ ಫಸಲು ಇಲ್ಲ   ಎಂದು ಅವರು ತಿಳಿಸಿದ್ದಾರೆ.
ಹೂವಾದರೂ ಶಕ್ತಿಯೇ ಇಲ್ಲ: ಮರದಲ್ಲಿ ಹೂವಾಗಿದ್ದರೂ ಆ ಹೂವಿನಲ್ಲಿ ಶಕ್ತಿಯೇ ಇಲ್ಲ. ಹೂವೆಲ್ಲ ವಾತಾವರಣದ ಏರು- ಪೇರಿನಿಂದಾಗಿ ಉದುರಿಹೋಗಿದೆ. ಬಾದಾಮಿ, ರಸಪೂರಿ, ಮಲಗೋಬ ಆಮಿನಿ ಇತ್ಯಾದಿ ರುಚಿಯಾದ ಕಸಿ ಮಾವಿನ ಫಸಲು ಗಣನೀಯವಾಗಿ ಕಡಿಮೆಯಾಗಿದೆ.
ಹೆಚ್ಚಿದ ಉಷ್ಣಾಂಶ, 15 ದಿವಸ ವಿಪರೀತ ಉಷ್ಣಾಂಶ ಮತ್ತೆ 15 ದಿವಸ ಮೋಡ, ಬೆಳಗಿನ ಸಮಯದಲ್ಲಿ ಕವಳ ಇದರಿಂದಗಾಗಿ ಮರಗಳಲ್ಲಿ ಇದ್ದ ಅಲ್ಪಸ್ವಲ್ಪ ಮಾವಿನ ಹೂಗಳೂ ಉದುರಿಹೋಗಿದೆ. ಪರಿಸ್ಥಿತಿ ಹೀಗಿರುವಾಗ, ಮರದಲ್ಲಿ ಕಾಯಿ ಬಿಡು ಎಂದರೆ ಹೇಗೆ ಎನ್ನುತ್ತಾರೆ ರೈತರು.
ಮಳೆಯೇ ಉತ್ತರ: ತರೀಕೆರೆ ತಾಲೂಕಿನಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಕೆರೆ, ತೊರೆ, ಹಳ್ಳ, ಕೊಳ್ಳ   ಬಾವಿಗಳು ನೀರಿಲ್ಲದೆ ಒಣಗಿ ಹೋಗಿದೆ. 800 ಅಡಿ ಭೂಮಿ ಕೊರೆದರೂ ನೀರಿಲ್ಲ. ಭೂಮಿಯ ಅಂತರ್ಜಲವೆಲ್ಲಾ ಬತ್ತಿಹೋಗಿದೆ. ತಾಲೂಕಿನ ಏಕೈಕ ಜಲಾನಯನ ಪ್ರದೇಶ ಗಿರಿ ಭಾಗದಲ್ಲೇ ಮಳೆ ಬಂದಿಲ್ಲ. ವಾತಾವಾರಣ ಸರಿಯಾಗಲು ಸಮರ್ಪಕವಾದ  ಉತ್ತಮ ಮಳೆಯೇ ಉತ್ತರವಾಗಿದೆ.
-ಅನಂತ ನಾಡಿಗ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement